‘ಬಸವ ಮೆಟ್ರೋ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

“ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ‘ಬಸವ ಮೆಟ್ರೋ’ ಎಂದು ಘೋಷಿಸಿ ಬಿಡುತ್ತಿದ್ದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು.

“ನಮ್ಮ ಮೆಟ್ರೋ ಕೇಂದ್ರದ ಸಹಯೋಗದಲ್ಲಿ ಸ್ಥಾಪಿಸಲಾಗಿದೆ. 87%ರಷ್ಟು ಪಾಲು ರಾಜ್ಯದ್ದೇ ಇದ್ದರೂ ನಿಯಮದ ಪ್ರಕಾರ ಕೇಂದ್ರದ ಒಪ್ಪಿಗೆ ಪಡೆಯಬೇಕೆಂದು,” ಎಂದು ಸಿದ್ದರಾಮಯ್ಯ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿ ನಡೆದ ಅಭಿಯಾನದ ಸಮಾರೋಪದಲ್ಲಿ ಘೋಷಣೆಯ ರೂವಾರಿ ಸಿದ್ದರಾಮಯ್ಯರನ್ನು ಸನ್ಮಾನಿಸಲಾಯಿತು.

ಅದಕ್ಕೂ ಮುಂಚೆ ಮಾತನಾಡಿದ ಪೂಜ್ಯ ಜಯಮೃತ್ಯುಂಜಯ ಶ್ರೀಗಳು ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ಹೆಸರಿಡಬೇಕೆಂದು ಮನವಿ ಮಾಡಿದರು. ನಂತರ ಸಿದ್ದರಾಮಯ್ಯನವರು ಮಾತನಾಡುವಾಗ ಹಲವಾರು ಬಸವಭಕ್ತರು ಎದ್ದು ನಿಂತು ಮೆಟ್ರೋಗೆ ಬಸವಣ್ಣನವರ ಹೆಸರಿಡಬೇಕೆಂದು ಆಗ್ರಹಿಸಿದರು.

ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು, ಎಂದು ಸಿದ್ದರಾಮಯ್ಯ ಹೇಳಿದರು.

ತಾವು ಬಸವಣ್ಣನವರಿಗೆ ಮಾಡಿರುವ ಸೇವೆಯ ಬಗ್ಗೆ ಮಾತನಾಡುತ್ತಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೂ, ಅಲ್ಲಿಗೆ ಬರುವವರಿಗೂ ಬಸವಣ್ಣನವರ ವಿಚಾರ ತಿಳಿಯಲಿ, ಅದರಂತೆ ಕೆಲಸ ಮಾಡಲಿ ಎಂಬ ಉದ್ದೇಶದಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಎಂದು ತಿಳಿಸಿದರು.

“ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ.ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ – ಬದ್ಧತೆ ಇಟ್ಟುಕೊಂಡಿದ್ದೇನೆ.

ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ, ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ.

ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ.

ನಮ್ಮಲ್ಲಿ ಅನೇಕ ಜಾತಿ, ಅನೇಕ‌ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು.

ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ಬಸವಣ್ಣನವರ ಅನುಯಾಯಿ. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದೆ.

ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯವಾದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ.

ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆ,” ಎಂದು ಸಿದ್ದರಾಮಯ್ಯ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
1 Comment

Leave a Reply

Your email address will not be published. Required fields are marked *