ಬೆಂಗಳೂರು
ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ಬಸವ ಸಂಸ್ಕೃತಿ ಅಭಿಯಾನ’ದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಮುಖ್ಯಾಂಶಗಳು:
ಬೆಂಗಳೂರಿನಲ್ಲಿ ಬಸವ ಮಹಾ ಸಾಗರ – ಫೋಟೋ ಗ್ಯಾಲರಿ









ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ
ಲಿಂಗಾಯತ ಧರ್ಮ ಹೋರಾಟ ಮುಂದುವರೆಯಲಿ: ನಾಗಮೋಹನದಾಸ್
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಮಾತನಾಡಿ, ಬಸವ ತತ್ವವೇ ಬೇರೆ, ಧರ್ಮವೇ ಬೇರೆ, ಬಸವ ಧರ್ಮವು ಇಂದು ಇಡೀ ಪ್ರಪಂಚಕ್ಕೆ ಬೇಕಾಗಿದೆ. ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಯಬೇಕು. ಲಿಂಗಾಯತ ಧರ್ಮದ ಶತ್ರುಗಳನ್ನು ಭುಜದಿಂದ ಕೆಳಗಿಳಿಸಿ, ಹೊರಗಿಟ್ಟು ಸೈದಾಂತಿಕ ಹೋರಾಟ ನಡೆಸಬೇಕು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು, ಸರಕಾರದ ಎಲ್ಲಾ ಕೆಲಸಗಳಲ್ಲಿ ಬಸವ ತತ್ವ ಬಿಂಬಿತವಾದರೆ ಮಾತ್ರ ಘೋಷಣೆ ಸಾರ್ಥಕ.
ಬಸವ ತತ್ವ ಪ್ರಸಾರ ಮಾಡಲು ಇಷ್ಟೊಂದು ಪೂಜ್ಯರು ಒಂದು ತಿಂಗಳ ಕಾಲ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ಈ ಕೆಲಸ ನಿರಂತರವಾಗಿ ನಡೆಯಬೇಕು, ಅವರಿಗೆಲ್ಲಾ ಶರಣು ಶರಣು.
ನಾನು ಬಸವಣ್ಣನ ಅಪ್ಪಟ ಅಭಿಮಾನಿ: ಸಿದ್ದರಾಮಯ್ಯ
ವಿಭೂತಿಧಾರಿ ಸಿದ್ದರಾಮಯ್ಯ ಸಮಾರಂಭದ ಮುಖ್ಯ ಆಕರ್ಷಣೆಯಾದರು. ನಾನು ಬಸವಣ್ಣನ ಅಪ್ಪಟ ಅಭಿಮಾನಿ. ಈಗಲೂ ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡೇ ಸಾರ್ವಜನಿಕ ಜೀವನದಲ್ಲಿದ್ದೇನೆ. ಅವರ ತತ್ವದ ಮೇಲೆಯೇ ನಮ್ಮ ಸರ್ಕಾರವೂ ನಡೆಯುತ್ತಿದೆ. ಭಾಗ್ಯ, ಗ್ಯಾರಂಟಿ ಯೋಜನೆಗಳ ಹಿಂದೆ ಅವರ ಆಶಯವಿದೆ, ಎಂದು ಮುಖ್ಯಮಂತ್ರಿ ಹೇಳಿದರು.
ಬಸವ ಮೆಟ್ರೋ ಹೆಸರಿಡುವ ಬಗ್ಗೆ, ವಚನ ವಿಶ್ವವಿದ್ಯಾಲಯದ ಬಗ್ಗೆ ಆಶ್ವಾಸನೆ ನೀಡಿದರು.
ಲಿಂಗಾಯತ ಸಿಎಂಗಳಿಗಿಂದ ಸಿದ್ದರಾಮಯ್ಯ ಕೊಡುಗೆ ಹೆಚ್ಚು: ಎಂ ಬಿ ಪಾಟೀಲ್
ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ, ಮಹಿಳಾ ವಿ.ವಿ.ಗೆ ಅಕ್ಕಮಹಾದೇವಿಯ ಹೆಸರು, ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಇಂತಹ ಸಿದ್ದರಾಮಯ್ಯನವರ ಋಣ ಲಿಂಗಾಯತರ ಮೇಲಿದೆ. ಹೀಗಾಗಿ, ಲಿಂಗಾಯತ ಸಮುದಾಯವೂ ಅವರ ಜೊತೆಗೆ ನಿಲ್ಲಬೇಕಾಗಿದೆ, ಅವರ ಋಣ ತೀರಿಸಬೇಕಾಗಿದೆ, ಹೇಳಿದರು.
ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ: ಸಿದ್ದಗಂಗಾ ಶ್ರೀ
ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಎಲ್ಲರೂ ಸಮಾನರೇ. ಎಲ್ಲರ ಹಿತವನ್ನು ಬಯಸುವವರೇ ನಿಜವಾದ ಕುಲಜರು. ಬಸವಣ್ಣನವರದು ಎಲ್ಲರನ್ನೂ ಪ್ರೀತಿಸುವಂತಹ ಹೃದಯ. ಬಸವಣ್ಣ ಜನಿಸಿರುವ ಈ ನಾಡಿನಲ್ಲಿ ಹುಟ್ಟಿರುವುದೇ ಹೆಮ್ಮೆಯ ವಿಷಯ.

ಸರಕಾರಕ್ಕೆ ಜನತೆ ಪರವಾಗಿ ಕೃತಜ್ಞತೆ: ಗದಗ ಸಿದ್ದರಾಮ ಶ್ರೀ
ಬಸವ ಚಿಂತನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ
ಜಿಲ್ಲೆ, ತಾಲೂಕುಗಳಲ್ಲಿ ಅಭಿಯಾನವನ್ನು ಒಕ್ಕೂಟ ಸಂಘಟಿಸಿದೆ. ಶುದ್ಧ ಬಸವ ತತ್ವವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದೆ.
ಬಸವ ಸಂಘಟನೆಗಳು, ಸಾರ್ವಜನಿಕರು ತನು, ಧನ, ಮನ ನೀಡಿ ಶಕ್ತಿ ಮೀರಿ ಅಭಿಯಾನಕ್ಕೆ ದುಡಿದಿದ್ದಾರೆ. ಇದಕೆಲ್ಲಾ ಸರಕಾರ ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದೇ ಮೂಲ ಕಾರಣ. ಇದಲ್ಲೆ ಸರಕಾರಕ್ಕೆ ನಾಡಿನ ಜನತೆ ಪರವಾಗಿ ಕೃತಜ್ಞತೆ ಹೇಳುತ್ತೇನೆ
ಶ್ರೀಗಳು ಸಭೆಯಲ್ಲಿದ್ಧ ಶರಣ, ಶರಣೆಯರಿಗೆ ಪ್ರಮಾಣ ವಚನ ಭೋದಿಸಿದರು.
ಅಭಿಯಾನಕ್ಕೆ ದುಡಿದ ಸಂಘಟನೆಗಳು: ಶಿವಾನಂದ ಜಾಮದಾರ್
ಅಭಿಯಾನಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ನೂರಾರು ಬಸವ ಸಂಘಟನೆಗಳು ಕೈ ಜೋಡಿಸಿವೆ, ಎಂದು ಶಿವಾನಂದ ಜಾಮದಾರ್ ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಹೆಸರು ಹೇಳಲು ಸೋಜಿಗವೆನಿಸಬಹುದು ಆದರೆ ಏಳು ಜಿಲ್ಲೆಗಳಲ್ಲಿ ಅವರ ಪದಾಧಿಕಾರಿಗಳು ಸಕ್ರಿಯವಾಗಿ ಕೈ ಜೋಡಿಸಿದ್ದಾರೆ.
12ನೇ ಶತಮಾನದಲ್ಲಿ ಹುಟ್ಟಿಕೊಂಡ ಲಿಂಗಾಯತ ಧರ್ಮ ಆಮೇಲೆ 200 ವರ್ಷ ಅಜ್ಞಾತವಾಗಿತ್ತು. ಬಳಿಕ ವಿಜಯನಗರ ಅರಸರ ಕಾಲದಲ್ಲಿ ರಾಜಾಶ್ರಯ ಸಿಕ್ಕಿ ಬೆಳೆಯಿತು. ಈಗ ನಮ್ಮಲ್ಲಿ ಸಾವಿರಕ್ಕೂ ಹೆಚ್ಚು ಮಠಗಳು ಸಕ್ರಿಯವಾಗಿವೆ. ಆದರೂ 300ಕ್ಕೂ ಹೆಚ್ಚು ವಿರಕ್ತಮಠಗಳು ನಮ್ಮಿಂದ ಹೊರಗಿವೆ. ಅವರೂ ಸಹ ಮಾಡದೆ ಲಿಂಗಾಯತ ಧರ್ಮದ ಭಾಗವಾಗಬೇಕು.
ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣ: ಭಾಲ್ಕಿ ಶ್ರೀ
ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣನಿದ್ದಾನೆ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತಾರು ಬಸವಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯ ಕೆಲಸ ಬಾಕಿ ಉಳಿದಿದೆ. ಮುಖ್ಯಮಂತ್ರಿಗಳು ಇದೊಂದು ಕೆಲಸವನ್ನು ಆಗುಮಾಡಬೇಕು. ಅಲ್ಲಿ ವಚನಸಾಹಿತ್ಯ ಕುರಿತು ಸಂಶೋಧನೆ ಮತ್ತು ಚಿಂತನೆಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಲಿಂಗಾಯತ ಸಂಕುಚಿತ ಜಾತಿಯಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗದ ಪೂಜ್ಯ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ,
ʻಲಿಂಗಾಯತರು ರಾಜ್ಯದಲ್ಲಿ ತಮ್ಮ ಜನಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬಸವಣ್ಣ ಹೇಳಿದಂತೆ ಲಿಂಗಾಯತರು ದಲಿತ ಸಮುದಾಯಗಳ ಜನರನ್ನು ಬರಮಾಡಿಕೊಂಡು, ಲಿಂಗಧಾರಣೆ ಮಾಡಿಸಿದ್ದರೆ ಇಂದು ಅವರ ಸಂಖ್ಯೆ ಶೇಕಡ ೧೭ರ ಬದಲಿಗೆ ೮೭ರಷ್ಟಿರುತ್ತಿತ್ತು. ಈ ಕೆಲಸವನ್ನು ಯಾರೂ ಮಾಡಲಿಲ್ಲ. ಆದರೆ, ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರೆಲ್ಲ ನಿಜವಾದ ಅರ್ಥದಲ್ಲಿ ಬಸವಣ್ಣನ ಮಕ್ಕಳೇ ಆಗಿದ್ದೇವೆ. ಲಿಂಗಾಯತ ಎಂದರೆ ಸಂಕುಚಿತವಾದ ಜಾತಿಯಲ್ಲ; ಅದೊಂದು ಸಂಸ್ಕೃತಿ ಮತ್ತು ಸಂಸ್ಕಾರʼ ಎಂದು ಹೇಳಿದರು.
ಮೈಸೂರು ಭಾಗದಲ್ಲಿ ಬಸವ ತತ್ವ ಪ್ರಚಾರ ಮಾಡಿ: ಮೃತ್ಯುಂಜಯ ಶ್ರೀ
ಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ʻಹಳೇ ಮೈಸೂರು ಭಾಗದಲ್ಲಿ ಬಸವಣ್ಣನವರ ಪ್ರಚಾರ ಹೆಚ್ಚಾಗಬೇಕಾಗಿದೆ. ಹೀಗಾಗಿ ಬೆಂಗಳೂರಿನ ಮೆಟ್ರೋ ರೈಲು ವ್ಯವಸ್ಥೆಗೆ ಬಸವಣ್ಣನ ಹೆಸರಿಡಬೇಕು. ಹಾಗೆಯೇ, ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿ ಮತ್ತು ರಾಜ್ಯ ಸರಕಾರದ ವಿಶ್ವವಿದ್ಯಾಲಯ ಎರಡಕ್ಕೂ ಬಸವೇಶ್ವರರ ಹೆಸರಿಡಬೇಕು. ಜೊತೆಗೆ ಕೇಂದ್ರ ಸರಕಾರವು ಅವರನ್ನು ʻಕಾಯಕ ತತ್ತ್ವ ಪಿತಾಮಹʼ ಎಂದು ಘೋಷಿಸುವಂತೆ ಶಿಫಾರಸು ಮಾಡಬೇಕು. ಏಕೆಂದರೆ, ಮನುಷ್ಯನಿಗೆ ಎಲ್ಲಕ್ಕಿಂತ ಅನ್ನ ಮುಖ್ಯ ಎಂದು ಸಾರಿದ ಮೊದಲಿಗ ಬಸವಣ್ಣನಾಗಿದ್ದಾರೆʼ ಎಂದು ಆಗ್ರಹಿಸಿದರು.
21ನೇ ಶತಮಾನದಲ್ಲಿ 12ನೇ ಶತಮಾನದ ವೈಭವ: ಗಂಗಾ ಮಾತಾಜಿ
ಸಿದ್ದರಾಮಯ್ಯನವರು 21ನೇ ಶತಮಾನದಲ್ಲಿ 12ನೇ ಶತಮಾನದ ಗತವೈಭವವನ್ನು ಮರುಸೃಷ್ಟಿಸಿದ್ದಾರೆ. ಉದ್ಯೋಗವನ್ನೇ ದೇವರೆಂದ ಮೊದಲಿಗನೆಂದರೆ ಬಸವಣ್ಣ. ಶರಣಧರ್ಮವು ಕನ್ನಡ ನಾಡಿನ ಧರ್ಮವಾಗಿದೆ.
ಬಸವಣ್ಣನವರ ಅಭಿಮಾನಿಯಾದರೆ ಸಾಲದು: ನಿಜಗುಣಪ್ರಭು ಶ್ರೀ
ಬಸವಣ್ಣನವರ ಅಭಿಮಾನಿಯಾದರೆ ಸಾಲದು, ಅನುಭಾವಿಗಳಾಗಬೇಕು, ಬಸವ ತತ್ವ ಪಾಲಿಸಬೇಕು. ಒಂದು ತಿಂಗಳ ಕಾಲ ನಡೆದ ಅಭಿಯಾನಕ್ಕೆ ನಮ್ಮ ಸಮುದಾಯದಲ್ಲಿ ಹುಟ್ಟಿದ ಮಠಾಧಿಪತಿಗಳೇ ಮುಳ್ಳಾಗಿದ್ದರು ಬಸವಣ್ಣನವರ ನಂಬಿದವರು ಕೆಟ್ಟಿಲ್ಲ, ಕೆಟ್ಟವರು ಬಸವಣ್ಣನವರನ್ನು ನಂಬುವುದಿಲ್ಲ.
ಉಪಸ್ಥಿತಿ
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಶರಣಪ್ರಕಾಶ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಶಾಸಕ ಬಿ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಸಾಹಿತಿ ಗೊ.ರು. ಚನ್ನಬಸಪ್ಪ ಇದ್ದರು.