ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ: ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

“ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಇಬ್ಬರೂ ಒಂದೇ ಎಂದು ಪರಮಪೂಜ್ಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರೇ ಪ್ರತಿಪಾದಿಸಿದ್ದಾರೆ” ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, “ವೀರಶೈವ-ಲಿಂಗಾಯತ ಸಮಾನಾರ್ಥಕ ಪದಗಳು. ಇಷ್ಟಲಿಂಗ ಪೂಜೆ ಮಾಡುವವರು ಮತ್ತು ಅಷ್ಟಾವರ್ಣ, ಪಂಚಾಚಾರ, ಷಟ್‌ಸ್ಥಳ ಆಚರಣೆ ಮಾಡುವ ಗುರುಗಳು ಮತ್ತು ವಿರಕ್ತರೂ ಇದ್ದಾರೆ. ಹೀಗಾಗಿ ವೀರಶೈವರು ಮತ್ತು ಲಿಂಗಾಯತರು ಒಟ್ಟಿಗೆ ಇರಬೇಕು ಎಂಬುದು ವೀರಶೈವ ಮಹಾಸಭಾದ ಸ್ಪಷ್ಟ ನಿಲುವು” ಎಂದು ಹೇಳಿದರು.

“ಪ್ರತ್ಯೇಕ ಧರ್ಮದ ವಿಚಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನ ಸಮುದಾಯದ ನಾಯಕರು. ಕೆಲವರು ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಬಸವಾದಿ ಶರಣರು ಸಮಸಮಾಜದ ಭವ್ಯ ಕನಸು ಕಂಡಿದ್ದರು. ಅದನ್ನೇ ಮುಖ್ಯಮಂತ್ರಿಗಳು ಪಾಲಿಸುತ್ತಿದ್ದಾರೆ. ಸಮಾಜದ ಕಟ್ಟಕಡೇಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತವನ್ನು ಅವರು ಗೌರವಿಸುತ್ತಾರೆ. ಬಸವತತ್ವ ಸಾರ್ವಕಾಲಿಕ ಸತ್ಯ. ಹಿಂದೆ, ಇಂದು ಮತ್ತು ಮುಂದೆಯೂ ಇದು ಜಗತ್ತಿಗೆ ಮಾರ್ಗದರ್ಶನ ಮಾಡುತ್ತದೆ” ಎಂದರು.

“ವೀರಶೈವ-ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ, ವೀರಶೈವ ಲಿಂಗಾಯತರು ಕೆಟ್ಟರೆ ಇಡೀ ರಾಜ್ಯವೇ ಹಾಳಾಗುತ್ತದೆ ಎಂಬ ಜನಜನಿತ ಹೇಳಿಕೆ ಇದೆ. ನಮ್ಮ ಸಮುದಾಯದ ಒಗ್ಗಟ್ಟಿನಲ್ಲಿ ಬಲವಿದೆ. ವಿಘಟನೆಯಲ್ಲಿ ಸೋಲಿದೆ” ಎಂದರು.

“ನಾವೆಲ್ಲರೂ ಭೌಗೋಳಿಕವಾಗಿ ಹಿಂದೂಗಳೇ ಆದರೂ, ನಮ್ಮ ಆಚಾರ-ವಿಚಾರವನ್ನು ಗೌರವಿಸಿ ಸಿಖ್, ಪಾರ್ಸಿ, ಜೈನರಿಗೆ ನೀಡಿರುವಂತೆ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ವೀರಶೈವ-ಲಿಂಗಾಯತ ಧರ್ಮಕ್ಕೂ ನೀಡಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸ್ವಾತಂತ್ರ್ಯಪೂರ್ವದಿಂದ ಅದರಲ್ಲೂ ವಿಶೇಷವಾಗಿ 2000ನೇ ಇಸವಿಯಲ್ಲಿ ನಡೆದ ಜನಗಣತಿಯಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಜಾತಿಗಣತಿಯಲ್ಲಿ ನಮ್ಮ ಧರ್ಮಕ್ಕೆ ಪ್ರತ್ಯೇಕ ಕಾಲಂ ನೀಡಲು ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
Leave a comment

Leave a Reply

Your email address will not be published. Required fields are marked *