ರಾಯಚೂರು
ನಗರದ ಬಸವ ಕೇಂದ್ರದಲ್ಲಿ ಸರ್ವದಾ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜೊತೆಗೆ ವಚನ ವಿಜಯೋತ್ಸವ ದಿನಾಚರಣೆ, ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನೂ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ. ರಾಜನಗೌಡ ಕೋಳೂರ ಅವರು ಮಾತನಾಡಿ, ಶರಣರ ಸಮಾಜಪ್ರಜ್ಞೆಯು ಭೇದರಹಿತ ಮತ್ತು ಕಾಯಕ ದಾಸೋಹ ಸಹಿತ ಸಮೃದ್ಧ ಸಮಾಜವೆಂಬ ಎರಡು ಲಕ್ಷಣಗಳನ್ನೊಳಗೊಂಡಿದೆ.

ಈ ನೆಲೆಗಟ್ಟಿನ ಮೇಲೆ 12ನೇ ಶತಮಾನದ ಶರಣರು ವರ್ಗ, ವರ್ಣ, ಲಿಂಗಭೇದರಹಿತ ಕಲ್ಯಾಣರಾಜ್ಯವನ್ನು ಸ್ಥಾಪಿಸಿ, ಅವರು ನುಡಿದಂತೆ ನಡೆದು ಮಾತನಾಡಿದ್ದು ಇವತ್ತಿನ ವಚನ ಸಾಹಿತ್ಯ.
ಆದರೆ ಪಟ್ಟಭದ್ರ ಶಕ್ತಿಗಳು, ರಾಜಪುರೋಹಿತಶಾಹಿಗಳು ವೈಚಾರಿಕ ನಲೆಗಟ್ಟಿನ ಮೇಲೆ ರಚಿಸಲ್ಪಟ್ಟ ವಚನಗಳನ್ನು ನಾಶ ಮಾಡುವ ಉದ್ದೇಶದಿಂದ ಶರಣರ ಮೇಲೆ ಪ್ರಹಾರ ಮಾಡಲು ಪ್ರಾರಂಭಿಸಿದರು.
ಶರಣರು ಎದೆಗುಂದದೆ ಜೀವ ಬಲಿದಾನ ಮಾಡಿ ವಚನಗಳನ್ನು ಉಳಿಸಿಕೊಟ್ಟರು. ವಿಜಯದಶಮಿ ಹಬ್ಬದ ದಿನದಂದು ಈ ಕ್ರಾಂತಿ ನಡೆದಿದ್ದರಿಂದ, ಈ ಹೋರಾಟದಲ್ಲಿ ಶರಣರು ಜಯಶಾಲಿಯಾಗಿದ್ದರಿಂದ
ಈ ದಿನವನ್ನು ವಚನ ವಿಜಯೋತ್ಸವವೆಂದು ಆಚರಿಸಲಾಗುತ್ತದೆ ಎಂದರು.
ಸಿ.ಬಿ. ಪಾಟೀಲ ವಕೀಲರು ಮಾತನಾಡಿ, ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಸ್ವತಂತ್ರವನ್ನು ಗಳಿಸಿಕೊಟ್ಟ ಮಹಾನ್ ನಾಯಕರೆಂದರು.
ಅಮರಗುಂಡಪ್ಪ ಹೂಗಾರ ಇವರು ಮಾತನಾಡಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಅಪ್ರತಿಮ ಭಾರತದ ಪ್ರಧಾನಿ, ಜೈ ಜವಾನ್, ಜೈ ಕಿಸಾನ್ ಎಂದು ಘೋಷಣೆ ಮಾಡಿದರಲ್ಲದೆ, ರೈತ ಭಾರತದ ಬೆನ್ನೆಲಬುವಾದರೆ, ಸೈನಿಕ ದೇಶವನ್ನು ಕಾಯುವ ಮಹಾನ್ ಯೋಧ. ಇವರಿರ್ವರೂ ಸದೃಢವಾದಲ್ಲಿ ಮಾತ್ರ ನಾವು ನೆಮ್ಮದಿಯಿಂದಿದ್ದು, ಸಮೃದ್ಧ ಭಾರತ ಕಟ್ಟಲು ಸಾಧ್ಯವೆಂದರು.

ಇದೇ ಸಂದರ್ಭದಲ್ಲಿ ಸಂಗೀತಗಾರರಾದ ಕೆ. ರತ್ನಾಕರ್ ಅವರು ಸ್ಥಾಪಿಸಲ್ಪಟ್ಟ ” ಸರ್ವದಾ ಸಾಹಿತ್ಯ ಸಾಂಸ್ಕೃತಿಕ ಕಲಾಸಂಘ ವೇದಿಕೆ ಮೇಲಿದ್ದ ಗಣ್ಯರಿಂದ ಉದ್ಘಾಟಿಸಲ್ಪಟ್ಟಿತು.
ಕೆ. ರತ್ನಾಕರ್ ಅವರು ವಚನ ಗಾಯನ ಮಾಡಿದರು. ಜಗದೇವಿ ಚನ್ನಬಸವ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಮುಕುಂದಪ್ಪ ಸ್ವಾಗತಿಸಿದರು. ಡಾ. ಪ್ರಿಯಾಂಕಾ ಗದ್ವಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಚನ್ನಬಸವ, ಇಂಜಿನಿಮರ ಶರಣು ಸಮರ್ಪಿಸಿದರು.