ಬಸವಕಲ್ಯಾಣದಲ್ಲಿ 24ನೇ ಕಲ್ಯಾಣ ಪರ್ವ

ಬಸವ ಮೀಡಿಯಾ
ಬಸವ ಮೀಡಿಯಾ

ಕೂಡಲಸಂಗಮ/ಬೀದರ್

‘ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಬಸವಧರ್ಮ ಪೀಠದಿಂದ ಅಕ್ಟೋಬರ್ 10 ರಿಂದ 12ರವರೆಗೆ 24ನೇ ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯಲಿದೆ. ಸಚಿವ ಶರಣಪ್ರಕಾಶ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ ಹೇಳಿದರು.

‘ಕಾರ್ಯಕ್ರಮದ ಸಾನ್ನಿಧ್ಯವನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ವಹಿಸುವರು. ಮಧ್ಯಾಹ್ನ ಮಹಿಳಾ ಗೋಷ್ಠಿ ಮತ್ತು ಸಂಜೆ ಶರಣ ವಂದನೆ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಇದೇ ವಿಷಯದ ಮೇಲೆ ಕಲ್ಯಾಣ ಪರ್ವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ಬುಳ್ಳಾ ಬೀದರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಲ್ಯಾಣ ಪರ್ವ ಸುಮಾರು 24 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪರ್ವ ಎಂದರೆ ಕಾಲ ಎಂದರ್ಥ. ಈ ಜಗತ್ತಲ್ಲಿ ಕೊಲೆ, ಸುಲಿಗೆ, ಯುದ್ಧಗಳು ನಡೆಯುತ್ತಿವೆ. ಇದು ಮಾನವ ಕುಲಕ್ಕೆ ಮಾರಕವಾಗಿದೆ. ಆದ್ದರಿಂದ ವಿಶ್ವದಲ್ಲಿ ಶಾಂತಿ ಕಾಪಾಡುವುದು ಇದರ ಉದ್ದೇಶವಾಗಿದೆ. ಹಾಗೆಯೇ 12ನೇ ಶತಮಾನದ ಶರಣರ ಜಾತಿ, ವರ್ಣ ಹಾಗೂ ಲಿಂಗ ರಹಿತ ಸಮಸಮಾಜ ನಿರ್ಮಾಣ ಮಾಡುವುದೇ ಈ ಕಲ್ಯಾಣ ಪರ್ವದ ಉದ್ದೇಶವಾಗಿದೆ ಎಂದರು.

ಅ.10ರಂದು ಉದ್ಘಾಟನಾ ಸಮಾರಂಭ, ಮಹಿಳಾ ಗೋಷ್ಠಿ ಹಾಗೂ ರಾತ್ರಿ 8:30 ಗಂಟೆಗೆ ಮಹಾ ಕ್ರಾಂತಿ ನಾಟಕ ನಡೆಯಲಿದೆ.

ಅ.11 ರಂದು ಧರ್ಮ ಚಿಂತನ ಗೋಷ್ಠಿ, ರಾಷ್ಟ್ರೀಯ ಬಸವದಳ ಸಮಾವೇಶ ಹಾಗೂ ಸಮಾಜ ಚಿಂತನ ಗೋಷ್ಠಿ ಜರುಗಲಿದೆ.

ಅ.12 ರಂದು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಅ. 11 ರಂದು ಮುಂಜಾನೆ 10:30 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬೀದರ್ ನ ರೋಟರಿ ಕ್ಲಬ್ ನ್ಯೂ ಸಂಚುರಿ ವತಿಯಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಾಗೂ ಬೀದರ್ ನ ಎಸ್. ಬಿ. ಡೆಂಟಲ್ ಕಾಲೇಜು ವತಿಯಿಂದ ಉಚಿತ ದಂತರೋಗ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು.

ಅ.11 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶರಣ ಸಮಾಜ ಸೇವಾರತ್ನ ಪ್ರಶಸ್ತಿಗೆ ಡಾ. ಭೀಮಣ್ಣ ಖಂಡ್ರೆ ಹಾಗೂ ಮಲ್ಲಿಕಾರ್ಜುನ್ ಗುಂಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಎನ್ನುವುದರಲ್ಲಿ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರು ಏನಾದರೂ ಹೇಳಲಿ ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಪಂಗಡವಾಗಿದೆ. ಅದು ಧರ್ಮ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ಕಾರ್ಯಕ್ರಮದಲ್ಲಿ ಎಲ್ಲ ರಾಜಕೀಯ ಮುಖಂಡರನ್ನು, ಮಠಾಧೀಶರನ್ನು ಆಹ್ವಾನಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪ್ರಶಸ್ತಿ ಪ್ರದಾನ

ಅ.11ರಂದು ಬೆಳಗ್ಗೆ 11.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಡಾ.ಭೀಮಣ್ಣಾ ಖಂಡ್ರೆ ಹಾಗೂ ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪ ನಿರ್ದೇಶಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಚಂದ್ರಶೇಖರ ಸೋಮಶೆಟ್ಟಿ(ಕಲಾ ರತ್ನ), ಸುಶೀಲಾಬಾಯಿ ಧನ್ನೂರ(ದಾಸೋಹ ರತ್ನ), ಪುಂಡಲಿಕರಾವ ಪಾಟೀಲ್ (ಸೇವಾ ರತ್ನ), ಯಶವಂತರಾವ ಪಾಟೀಲ್ (ಕಾಯಕ ರತ್ನ), ಗುರುಲಿಂಗಪ್ಪ ಮೇಲದೊಡ್ಡಿ(ಕೃಷಿ ರತ್ನ), ಹಾವಗಿರಾವ ವಟಗೆ(ಕೃಷಿ ರತ್ನ) ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆರ್ .ಜಿ.ಶಟಗಾರ ತಿಳಿಸಿದರು.

ಯತ್ನಾಳ್ ಹೇಳಿಕೆ ಖಂಡನೀಯ

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ’ ಎಂಬ ಹೇಳಿಕೆ ಖಂಡನೀಯ. ಬಸವಣ್ಣನವರ ಕುರಿತು ಇಂತಹ ಹೇಳಿಕೆ ನಿಲ್ಲಿಸಬೇಕೆಂದು ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಆರ್ .ಜಿ.ಶಟಗಾರ ಹೇಳಿದರು.

ಯತ್ನಾಳ್ ಒಬ್ಬ ಹೊಂಬತನದ ರಾಜಕಾರಣಿ. 900 ವರ್ಷಗಳ ಹಿಂದೆಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಬಸವಣ್ಣನವರ ಕುರಿತು ಯತ್ನಾಳ್ ಮತ್ತೊಮ್ಮೆ ಹೇಳಿಕೆ ನೀಡಿದರೆ, ಅವರನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿಷೇಧಿಸಲು ಆಗ್ರಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದರಾಮೇಶ್ವರ್ ಸ್ವಾಮಿ, ಸ್ವಾಗತ ಸಮಿತಿಯ ಅಧ್ಯಕ್ಷ ಕಂಟೆಪ್ಪಾ ಗಂದಿಗುಡಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ನರಶೆಟ್ಟಿ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ್ ಪಾಟೀಲ್ ಗಾದಗಿ, ಕುಶಾಲರಾವ್ ಪಾಟೀಲ್ ಗಾದಗಿ, ಸಂಜುಕುಮಾರ್, ವಿಲಾಸ್ ಪಾಟೀಲ್, ಯೋಗೇಶ್ ಸಿರಿಗೆರೆ, ವೀರಶೆಟ್ಟಿ ಪಾಟೀಲ್ ಹಾಗೂ ಪಂಚಾಕ್ಷರಿ ಸೇರಿದಂತೆ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
Leave a comment

Leave a Reply

Your email address will not be published. Required fields are marked *