ಬಸವಕಲ್ಯಾಣ
ಅ.11 ಮತ್ತು 12ರಂದು ನಾಲ್ಕನೇ ಸ್ವಾಭಿಮಾನಿ ಕಲ್ಯಾಣ ಪರ್ವ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಎರಡು ದಿನ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 10 ಸಾವಿರ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಧ್ಯಮಗಳಿಗೆ ಹೇಳಿದರು.
ಸಸ್ತಾಪುರ ಬಂಗ್ಲಾ ಬಳಿಯ ಎಂ.ಎಂ. ಬೇಗ್ ಕಲ್ಯಾಣ ಮಂಟಪದಲ್ಲಿ ಅ.11ರಂದು ಬೆಳಗ್ಗೆ 11ಕ್ಕೆ ಚಿಕ್ಕಮಂಗಳೂರಿನ ಶ್ರೀ ಡಾ.ಜಯ ಬಸವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಲ್ಯಾಣ ಪರ್ವವನ್ನು ಸಂಸದ ಸಾಗರ್ ಖಂಡ್ರೆ ಚಾಲನೆ ನೀಡಲಿದ್ದಾರೆ.
ಎರಡು ದಿನ ಹಮ್ಮಿಕೊಂಡಿರುವ ನಾನಾ ಗೋಷ್ಠಿ, ಕಾರ್ಯಕ್ರಮದಲ್ಲಿ ಪೂಜ್ಯರು, ಜನಪ್ರತಿನಿಧಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಅರ್ಥಪೂರ್ಣ, ಅದ್ದೂರಿ ಆಯೋಜನೆಗಾಗಿ ಸ್ವಾಗತ, ದಾಸೋಹ, ಪ್ರಚಾರ, ಪ್ರಸಾದ ವಿತರಣೆ, ಮೆರವಣಿಗೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿ ವಹಿಸಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಭಾಗವಹಿಸಬೇಕು ಎಂದು ಕೋರಿದರು.
ಬಸವರಾಜ ಪಾಟೀಲ್ ಶಿವಪುರ, ಶಿವರಾಜ ಪಾಟೀಲ್ ಅತಿವಾಳ, ಮಲ್ಲಿಕಾರ್ಜುನ ಜೇಲರ್, ಬಸವಂತರಾವ ಬಿರಾದಾರ್, ರವಿಕಾಂತ ಬಿರಾದಾರ್ ಇತರರಿದ್ದರು.
ಸ್ವಾಗತ ಸಮಿತಿಗೆ ಪಾಟೀಲ್ ಅಧ್ಯಕ್ಷ: ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ ಅವರನ್ನು ಸ್ವಾಭಿಮಾನಿ ಕಲ್ಯಾಣ ಪರ್ವದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ.
ಬೀದರ್ನ ಬಸವರಾಜ ಸಂಗಮ ಅವರನ್ನು ಪ್ರಧಾನ ಕಾರ್ಯದರ್ಶಿ, ದಾಸೋಹ ಸಮಿತಿ ಅಧ್ಯಕ್ಷರಾಗಿ ಡಾ.ಸುರೇಶ ಪಾಟೀಲ್ ಹಾರೂಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಕಾಶಿನಾಥ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಂಜುಕುಮಾರ ಸೋನಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.