ಗುಳೇದಗುಡ್ಡ
ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಬಸವಕೇಂದ್ರದ ವತಿಯಿಂದ ತಿಪ್ಪಾಪೇಟೆಯ ಗೀತಾ ಮಾ. ತಿಪ್ಪಾ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಚನ ಚಿಂತನೆಗೆ ಆಯ್ದಕೊಂಡ ವಚನ ದೇಶಿಕೇಂದ್ರ ಸಂಗನಬಸವಯ್ಯನವರದು.
ಕಲ್ಲೊಳಗಣ ಬೆಂಕಿ ಕಾರ್ಯವನುಳಿದು ಕಾಣದು
ಕಾಷ್ಠದೊಳಗಣ ಬೆಂಕಿ ಸೋಂಕದರಿಯದು
ಬೀಜದೊಳಗಣ ಕುರುಹು
ಜಲ ಮೃತ್ತಿಕೆಯನುಳಿದು ತೋರದು.
ಅದು ಕಾರಣ ಶರಣನೊಳಗಣ ನುಡಿ ತನ್ನ
ಅನುನುಡಿಗಳನುಳಿದು ತೋರದು
ಗುರು ನಿರಂಜನ ಚನ್ನಬಸವಲಿಂಗದಲ್ಲಿ
ಶಬ್ದ ಸೂತಕಿಯಲ್ಲದ ಕಾರಣ.
ಪ್ರೊ. ಶ್ರೀಕಾಂತ ಗಡೇದ ಅವರು ಪ್ರಾರಂಭದಲ್ಲಿ ವಚನದ ಚಿಂತನೆಯನ್ನು ಮಾಡುತ್ತ “ಈ ವಚನವು ಬಸವೋತ್ತರ ಯುಗದ ದೇಶಿಕೇಂದ್ರ ಸಂಗನಬಸವಯ್ಯ ಶರಣರದು.

ಇವರ ಷಟಸ್ಥಲದ ವಚನಗಳನ್ನು ಬರೆದಿದ್ದು ಅದರಲ್ಲಿ ಅವಾಂತರ ಸ್ಥಲದ ಶರಣನ ಐಕ್ಯಸ್ಥಲದ ವಚನ ಇದಾಗಿದೆ. ಶರಣನ ನಡೆ-ನುಡಿಗಳು ಹೇಗಿರುತ್ತವೆ ಎಂಬುದನ್ನಿಲ್ಲಿ ತಿಳಿಸಿದ್ದಾರೆ.
ಅಜ್ಞಾನವನ್ನು ತೊಲಗಿಸಲಿಕ್ಕೆ ಜ್ಞಾನ ಬೇಕು. ಅಂತೆಯೇ ಬಸವಲಿಂಗ ಶರಣರು ಅಜ್ಞಾನವನ್ನು ಕತ್ತಲೆಗೂ ಜ್ಞಾನವನ್ನು ಬೆಂಕಿಗೂ ಹೋಲಿಸಿದ್ದಾರೆ ಎಂದರು.”
ಇದೇ ವಚನದ ಚಿಂತನೆಯಲ್ಲಿ ಪಾಲ್ಗೊಂಡ ಚಿದಾನಂದಸಾ ಕಾಟವಾ ಅವರು, “ಸೂತಕಗಳೆಲ್ಲ ಕೇವಲ ಭ್ರಮೆಗಳು, ಅವುಗಳನ್ನು ಮೀರಿ ನಿಲ್ಲಬೇಕು. ಕಲ್ಲು ಕಟ್ಟಿಗೆಯಲ್ಲಿ ಬೆಂಕಿ ಇದೆ. ಅದು ಕಾಣಬೇಕಾದರೆ ಘರ್ಷಿಸುವ ಕ್ರಿಯೆ ಜರುಗಬೇಕು. ಹಾಗೆಯೇ ನಮ್ಮೊಳಗಿರುವ ಶಿವಭಾವವನ್ನು ಜ್ಞಾನದ ಮೂಲಕ ಅರಿಯಬೇಕು. ಮಾನವನದು ಅರಿವಿನ ಜನ್ಮ. ಇದನ್ನು ಶರಣರ ಜೀವನದಲ್ಲಿ ಕಾಣಬೇಕು” ಎಂದರು.
ಹಿರಿಯ ಅನುಭಾವಿ ಪ್ರೊ. ಎಂ. ಪಿ. ನೀಲಕಂಠಮಠ ಅವರು “ಮೇಲ್ನೋಟಕ್ಕೆ ಸರಳವೆನಿಸಿದ ಈ ವಚನ ಪೂರ್ತಿ ತತ್ವಮಯವಾಗಿದೆ. ಯಾರಿಗೇ ಆಗಲಿ ಸಾಧನೆ ಇಲ್ಲದೆ ಫಲ ಸಿಗುವುದಿಲ್ಲ. ಇಲ್ಲಿ ಮೂರು ಸಾದೃಶ್ಯಗಳ ಮೂಲಕ ಶರಣರ ಇರುವಿಕೆಯನ್ನು ಪ್ರತಿಪಾದಿಸಲಾಗಿದೆ.

ನಡೆ-ನುಡಿಗಳಲ್ಲಿ ಒಂದಾದವನೇ ಶರಣ. ಇದು ಆತನ ನುಡಿ ನಡೆಯಲ್ಲೂ ತೋರಬೇಕು. ಶರಣರು ಶಬ್ದ ಸೂತಕಿಗಳಲ್ಲ. ಹಿತಮಿತವಾದ ಮಾತು, ಮಾತಿನಂತೆ ನಡೆ ಇದು ಶರಣರ ಮುಖ್ಯ ಲಕ್ಷಣಗಳು. ಡಾಂಭಿಕರನ್ನು ಅವರು ಎಂದಿಗೂ ನಂಬುವದಿಲ್ಲ” ಎಂದರು.
ಅನುಭಾವಿ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಮಾತನಾಡುತ್ತ, “ಶರಣರ ಪ್ರತಿಯೊಂದು ವಚನವೂ ತತ್ವಾರ್ಥಗಳಿಂದ ತುಂಬಿರುತ್ತವೆ. ಹಾಗೆಯೇ ಈ ವಚನಗಳಲ್ಲಿ ದೇಶಿಕೇಂದ್ರ ಬಸವಲಿಂಗ ಶರಣರು ಶರಣರ ಪ್ರತಿಯೊಂದು ನುಡಿಯೂ ನಡೆಯೊಳಗಾಗಿ ಸತ್ಯ ಶುದ್ಧವಾಗಿರುತ್ತದೆ. ಅವರೆಂದೂ ಶಬ್ದ ಸೂತಕಿಗಳಲ್ಲ. ವ್ಯರ್ಥವಾಗಿ ಮಾತನಾಡುವವರಲ್ಲ. ಹೀಗಾಗಿ ಶರಣರ ಮಾತುಗಳು ಜ್ಯೋತಿರ್ಲಿಂಗ ಸ್ವರೂಪಗಳಿದ್ದಂತೆ. ಅವರ ಮಾತುಗಳಿಂದಲೇ ಅವರನ್ನು ಅರಿಯಬೇಕು.
ನಡೆ-ನುಡಿ ಒಂದಾದ ಶರಣರು ಸಾಕ್ಷಾತ್ ಗುರುನಿರಂಜನ ಚನ್ನಬಸವಲಿಂಗವೇ ಆಗಿರುತ್ತಾರೆ. ಅವರನ್ನು ಅರಿಯಲು ಮರದೊಳಗಣ, ಜಲದೊಳಗಣ ಬೆಂಕಿಯಂತೆ ಇರುತ್ತದೆ. ಅದನ್ನು ಕಾಣಲು ಸ್ವಲ್ಪ ಶ್ರಮ ಪಡಬೇಕು.
ನೋಡಲು ಅತಿ ಸಣ್ಣದಾಗಿ ಕಾಣುವ ಬೀಜದಲ್ಲಿ ಇಡೀ ಮಹಾವೃಕ್ಷವೇ ಅಡಗಿರುವಂತೆ ಮಹಾಲಿಂಗದ ಉಪಾದಿಯಲ್ಲಿ ಇರುವ ಶರಣರನ್ನು ಅವರ ಮಾತಿನ ಮೂಲಕವೇ ಗುರುತಿಸಬಹುದು. ಶರಣರ ಮಾತುಗಳೆಲ್ಲ ಸೂತಕಗಳಲ್ಲ ಅವುಗಳು ಸೂಳ್ನುಡಿಗಳು” ಎಂದರು.

ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಗುಳೇದಗುಡ್ಡ ತಾಲೂಕಾ ಜಾಗತಿಕ ಲಿಂಗಾಯತ ಮಹಿಳಾ ವಿಭಾಗದ ಅಧ್ಯಕ್ಷೆ ಶರಣೆ ಗೀತಾ ಮಾ. ತಿಪ್ಪಾ ಹಾಗೂ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.
ಮಹಾಮನೆ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಶರಣ ಸುರೇಶ ರಾಜನಾಳ ದಂಪತಿಗಳು, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ಕುಮಾರ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.