ಅಣ್ಣಿಗೇರಿ
‘ವಚನ ಸಾಹಿತ್ಯವು ವಾಸ್ತವ ಚಿತ್ರಣ ತೆರೆದಿಡುವ ದೀಕ್ಷೆಯಾಗಿದೆ. ಇದನ್ನು ಅರಿತು ಬಾಳಿದರೆ ಮೂಢನಂಬಿಕೆ, ಕಂದಾಚಾರಗಳು ದೂರವಾಗುತ್ತವೆ’ ಎಂದು ತಂಗಡಗಿಯ ಪೂಜ್ಯ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅಡ್ನೂರು ಗ್ರಾಮದಲ್ಲಿ ಈಚೆಗೆ ನಡೆದ ತಾಲ್ಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು’ ಎಂದವರು ಹೇಳಿದರು.

ಇದೇ ವೇಳೆಯಲ್ಲಿ ‘ಇವ ನಮ್ಮವ’ ಎಂಬ ಸ್ಮರಣ ಸಂಚಿಕೆಯನ್ನು ಶಾಸಕ ಎನ್.ಎಚ್. ಕೋನರಡ್ಡಿ ಬಿಡುಗಡೆ ಮಾಡಿ ಮಾತನಾಡುತ್ತ, ಪ್ರತಿಯೊಬ್ಬರೂ ಕಾಯಕ ಮಾಡುವ ಮೂಲಕ ಆದರ್ಶ, ತತ್ವ, ಸಿದ್ಧಾಂತಗಳನ್ನು ಪಾಲಿಸಬೇಕೆಂದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ಕಲ್ಮೇಶ್ವರ ದೇವಾಲಯದಿಂದ ಸಭಾ ಸ್ಥಳದ ತನಕ ನಡೆಯಿತು.
ಪರಿಷತ್ ಧ್ವಜಾರೋಹಣ ಕಾರ್ಯಕ್ರಮವನ್ನು ಚಂದ್ರಶೇಖರ ಕೊಟ್ಟೂರು ನೆರವೇರಿಸಿದರು.
‘ಕೂತು ತಿನ್ನುವ ಸಂಸ್ಕೃತಿ ಸಲ್ಲದು’…. ‘ಕಾಯಕ ನಿಷ್ಠೆಯಿಂದ ಪಡೆದದ್ದು ಬಳಸಲು ಮಾತ್ರ ಅಧಿಕಾರವಿದೆ. ಉಳಿದದ್ದು ದಾಸೋಹ ಸೇವೆಗೆ’ ಎಂಬ ವಚನಕಾರರ ಮಾತನ್ನು ನಾವು ತಿಳಿದು ನಡೆಯಬೇಕು ಎಂದು ಸಮ್ಮೇಳನಾಧ್ಯಕ್ಷ ಪಂಡಿತ ಎಂ. ಕಲ್ಲಿನಾಥ ಶಾಸ್ತ್ರಿ ಹೇಳಿದರು.
ತಳಮಟ್ಟದ ವಚನಕಾರ್ತಿಯರ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕಿ ಶಾಂತಾ ಲಕ್ಷ್ಮೇಶ್ವರ ಅವರು, ‘ವಚನ ಸಾರವನ್ನು ಅರಿಯಲು ಒಂದು ಜನ್ಮ ಸಾಕಾಗುವುದಿಲ್ಲ’. ದಾರಿತಪ್ಪುವ ಬದುಕಿಗೆ ವಚನ ಸಾಹಿತ್ಯದ ಅರಿವು ಅಗತ್ಯ. ಈ ಮೂಲಕ ಉತ್ತಮ ಸಮಾಜ ಕಾಣಲು ಸಾಧ್ಯ’ ಎಂದರು.

ಶರಣಬಸಪ್ಪ ವೆಂಕಟಾಪುರ ಅವರು, ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ ಕುರಿತು ಹಾಗೂ ಆರ್.ಎಂ. ಕಲ್ಲನಗೌಡರ ಅವರು ‘ಅಡ್ನೂರು ಗ್ರಾಮದ ಶರಣ ಜೀವಿ ಬಸನಗೌಡ ಪಾಟೀಲ’ ಅವರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಮತ್ತು ಶಾಸಕರನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ. ಸೋಮಶೇಖರ, ಜಿಲ್ಲಾಧ್ಯಕ್ಷ ಸಂಗಮನಾಥ ಲೋಕಾಪುರ, ತಾಲ್ಲೂಕು ಅಧ್ಯಕ್ಷ ಎನ್. ಎಂ. ಯಲಬುರ್ಗಿ, ಅಬ್ದುಲ್ ಖಾದರ್ ನಡಕಟ್ಟಿನ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಪ್ರಕಾಶ ಬಾಳಿಕಾಯಿ, ವೀರೇಶ ಶಾನುಭೋಗರ, ಎನ್.ಎಸ್. ಮೇಲ್ಮರಿ, ಚಂದ್ರಶೇಖರ ಸುರಕೋಡ, ಕಿರಣ ಬುದಿಹಾಳ ಇದ್ದರು.