ಕಲಬುರ್ಗಿ
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಶಿವಶರಣಪ್ಪಗೌಡ ಪಾಟೀಲ, ಕಲ್ಲೂರ ಸ್ಮರಣಾರ್ಥ ಅರಿವಿನ ಮನೆ 870 ನೆಯ ದತ್ತಿ ಕಾರ್ಯಕ್ರಮ ನಡೆಯಿತು.
ವಿದ್ಯಾವತಿ ಪಾಟೀಲ ಅವರು ಬಸವಾದಿ ಶರಣ, ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡುತ್ತಾ, ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮ ಮಡಿವಾಳ ಮಾಚಿದೇವರ ಹುಟ್ಟೂರು. ಅವರ 339 ವಚನಗಳು ನಮಗೆ ಲಭ್ಯವಾಗಿವೆ. ಬಟ್ಟೆ ಮಡಿ ಮಾಡುವುದು ಅವರ ಕಾಯಕವಾಗಿತ್ತು. ಶರಣರ ಬಟ್ಟೆಗಳನ್ನು ಮಾತ್ರ ಅವರು ಶುಚಿಗೊಳಿಸುತ್ತಿದ್ದರು.
ಶರಣರ ವಚನ ಸಾಹಿತ್ಯ ಉಳಿಸುವಲ್ಲಿ ಮಾಚಿದೇವರ ವೀರಾವೇಶದ ಹೋರಾಟ ಸ್ಮರಣೀಯ, ಹಾಗಾಗಿ ವೀರಗಣಾಚಾರಿ ಶರಣ ಎಂದು ಅವರನ್ನು ಕರೆಯುತ್ತಾರೆಂದರು.

ಮಾಚಿದೇವರ ವಚನಗಳು ಸರಳ ಮತ್ತು ಪ್ರೌಢ ಎರಡು ಶೈಲಿಯನ್ನು ಒಳಗೊಂಡಿವೆ. ಬಸವಣ್ಣನವರು ಸಮಾನತೆಯ ಸಾಧಕರಾದರೆ ಅದರ ಸೂತ್ರಧಾರರೇ ಮಡಿವಾಳ ಮಾಚಿದೇವರಾಗಿದ್ದರು. ಅಲ್ಲಮಪ್ರಭುಗಳು ತಮ್ಮ ಮನಸ್ಸು ಮಡಿವಾಳ ಮಾಚಿದೇವರು ಎಂದು ಹೇಳಿಕೊಂಡಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಗುರುವಿನ ಮಾರ್ಗದರ್ಶನದಿಂದ ಕಳೆದುಕೊಳ್ಳಬೇಕೆಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದರು.
