ಹೊಸದುರ್ಗ:
ವ್ಯಕ್ತಿತ್ವ ವಿಕಸನಕ್ಕೆ ಬಸವಣ್ಣನವರು ಕೊಟ್ಟ ಸಂಸ್ಕಾರವೇ ಸಾಕು. ಆದರೆ ಬಸವಣ್ಣನವರ ತತ್ವಗಳನ್ನು ಸರಿಯಾಗಿ ಗ್ರಹಿಸದೆ ಗುಡಿಗಳಿಗೆ ಹೋಗುತ್ತೀರಿ. ಆದರೆ ದೇವರು ಹೊರಗಿಲ್ಲ, ನಮ್ಮೊಳಗಿದ್ದಾನೆ ಎಂದು ಬಸವಣ್ಣನವರು ಹೇಳಿದ್ದನ್ನು ಮರೆಯಬಾರದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.
ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠದ ಬಸವ ಮಹಾಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಭಕ್ತರಿಗೆ ಲಿಂಗದೀಕ್ಷೆ ನೀಡಿ ಅವರು ಮಾತನಾಡಿದರು.
ನಮ್ಮ ಲಿಂಗಾಯತ ಧರ್ಮದ ಗುರುಗಳು ಬಸವಣ್ಣನವರು. ವಚನ ಸಾಹಿತ್ಯವೇ ಧರ್ಮಗ್ರಂಥ. ನಮ್ಮ ಧರ್ಮದ ಸಂಕೇತ ಇಷ್ಟಲಿಂಗ. ನಮ್ಮ ಧರ್ಮದ ಕೇಂದ್ರವಾದ ಆಚಾರ ವಿಚಾರಗಳನ್ನು ಶುದ್ಧವಾಗಿ ನಡೆಸುವುದೇ ಸಂಸ್ಕಾರ.

ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ಆರಂಭವಾಗುವುದು ಮೊದಲನೆಯ ಹಂತ. ಏಳನೆಯ ತಿಂಗಳಲ್ಲಿ ಗರ್ಭಿಣಿಯನ್ನು ತವರುಮನೆಗೆ ಕರೆದುಕೊಂಡು ಬಂದು ಜಂಗಮರನ್ನು ಕರೆಸಿ ಹಣೆಗೆ ವಿಭೂತಿ ಹಚ್ಚಿ, ನಿತ್ಯ ಲಿಂಗಪೂಜೆ ಕೈಗೊಳ್ಳಲು ಹೇಳುತ್ತಾರೆ. ಇದರೊಂದಿಗೆ ವಚನಗಳನ್ನು ಹೇಳಬೇಕು ಎಂದು ವಿವರಿಸಿದರು.
ಹೆರಿಗೆಯಾದ ಮೇಲೆ ಲಿಂಗಧಾರಣಾ ಸಂಸ್ಕಾರ ನಡೆಯುತ್ತದೆ. ಮತ್ತೆ ಜಂಗಮರನ್ನು ಕರೆಸಿ ಮಗುವಿಗೆ ವಿಭೂತಿ ಹಚ್ಚಿ, ತಾಯಿಗೆ ಕೊಡುವ ಲಿಂಗವನ್ನು ಮಗುವಿಗೆ ಸೋಕಿಸುತ್ತಾರೆ. ಇದು ಎರಡನೆಯ ಹಂತ. ಮಗು ದೊಡ್ಡದಾದ ಮೇಲೆ ಲಿಂಗದೀಕ್ಷೆ ಕೊಡುವುದು ಮೂರನೆಯ ಹಂತ. ದೇವರ ಕುರುಹಾಗಿ ಇಷ್ಟಲಿಂಗವನ್ನು ನಿಮ್ಮ ಕೈಗೆ ಇಡುತ್ತಾರೆ. ಇದನ್ನೇ ಪೂಜೆ ಮಾಡಿದರೆ ಸಾಕು. ಆದರೆ ನಮಗೆ ಅಜ್ಞಾನ ಆವರಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಮಗೆ ಭದ್ರವಾದ ಬೇರು ಇಷ್ಟಲಿಂಗ ಸಂಸ್ಕಾರ. ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ಮಂತ್ರ ಹಾಗೂ ರುದ್ರಾಕ್ಷಿ. ಇವು ಮಂತ್ರಗಳು. ನೀತಿ ಸಂಹಿತೆಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರ ಪಂಚಾಚಾರಗಳಾಗಿವೆ. ಹೀಗೆಯೇ ಭಕ್ತ, ಮಹೇಶ, ಪ್ರಾಣಲಿಂಗ, ಪ್ರಸಾದಿ, ಶರಣ ಹಾಗೂ ಐಕ್ಯ ಇವು ಷಟ್ಸ್ಥಲಗಳು. ಇವುಗಳ ಜೊತೆಗೆ ಸಾರ ಸಜ್ಜನರ ಸಂಗವೇ ಸತ್ಸಂಗ ಎಂದು ಅರಿಯಬೇಕು ಎಂದು ತಿಳಿಸಿದರು.
ಚಿಂತನಗೋಷ್ಟಿಯಲ್ಲಿ ಗುರು-ಶಿಷ್ಯ ಕುರಿತು ನರಸೀಪುರದ ಶಿಕ್ಷಕಿ ಗೀತಾ ಜ್ಞಾನಮೂರ್ತಿ ಮಾತನಾಡಿ, ಗು ಎಂದರೆ ಕತ್ತಲು. ರು ಎಂದರೆ ಬೆಳಕು ಅಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವವರು ಶಿಕ್ಷಕರು ಎಂದರು. ಶ್ರದ್ಧೆ, ಪ್ರೀತಿ ಇದ್ದರೆ ಕಲಿಕೆ ಸುಲಭವಾಗುತ್ತದೆ. ಆದರೆ ಶಿಕ್ಷಕರಿಗೆ ವಿದ್ಯಾರ್ಥಿಗಳ ಚಿತ್ತ ಅಪಹರಿಸುವ ಶಕ್ತಿ ಇರಬೇಕು. ಆಗ ಅಶಕ್ತ ಶಿಷ್ಯನನ್ನು ಶಕ್ತನನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು.
ಕಲಾವಿದ ಎಚ್.ಎಸ್. ನಾಗರಾಜ ವಚನಗಳನ್ನು ಹಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.
