ಹೊಸ ತಲೆಮಾರಿನ ಶರಣ ಸಂಕುಲ ರೂಪಿಸುತ್ತಿರುವ ಸಾಣೇಹಳ್ಳಿ ಮಠ

ಕಾರವಾರ

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು, ರಾಜಕಾರಣ-ಕಲೆ-ಸಾಹಿತ್ಯ-ಧಾರ್ಮಿಕ ವಲಯಗಳ ಹಲವರು ಆರು ದಿನಗಳ ಕಾಲ ನೆರೆಯುವ ಕಾರ್ಯಕ್ರಮ ಎಂದರೆ ಅಲ್ಲಿಗೆ ಬರುವ, ಹೋಗುವ ಮಾರ್ಗಗಳೆಲ್ಲ ಬರಲಿರುವ ಗಣ್ಯರ ಕಟೌಟ್, ಸ್ವಾಗತ, ಸಂದೇಶಗಳಿಂದ ತುಂಬಿಹೋಗಿರುತ್ತದೆ. ಅಂತಹ ಏನೊಂದೂ ಆಡಂಬರವಿರದೆ ಕಲ್ಲುನೆಲದ ಒಂದು ಸಣ್ಣ ಊರು ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜಾಗಿ ನಿಂತಿತ್ತು. ಅದು ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವ.

ಸಾಣೇಹಳ್ಳಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನಾಲ್ಕುನೂರು ಮನೆಗಳ ಪುಟ್ಟ ಹಳ್ಳಿ. ಆ ನಾಡನ್ನಾಳಿದ ಗಂಗರು, ಹೊಯ್ಸಳರು, ಪಲ್ಲವರು, ನೊಳಂಬರೇ ಮೊದಲಾದ ಸಾಮ್ರಾಜ್ಯಗಳ ನೆಲೆ ನೀರಗುಂದ ಎಂಬ ಊರು. ಅದರ ಬಳಿಯಿರುವ, ರಾಜರ ಸೇನೆಯು ಶಸ್ತ್ರಾಸ್ತ್ರಗಳನ್ನು ಸಾಣೆ ಹಿಡಿಯುತ್ತಿದ್ದ ಬೆಣಚು ಕಲ್ಲು ಪ್ರದೇಶವು ಸಾಣೆಹಳ್ಳಿಯಾಯಿತು. ನೀರಿನ ಸೆಲೆಯಿರದ, ಅಷ್ಟೆನೂ ಫಲವತ್ತಾಗಿರದ ಊರಿನಲ್ಲಿ ತರಳಬಾಳು ಶಿವಕುಮಾರ ಸ್ವಾಮಿಗಳು ೧೯೬೧ರಲ್ಲಿ ಪ್ರೌಢಶಾಲೆ ಆರಂಭಿಸಿದರು. ತರಳಬಾಳು ಶಾಖಾಮಠ ಆರಂಭವಾಯಿತು.

ಜವಾನ ಕೆಲಸವಾದರೂ ಸರಿ, ಒಂದು ನೌಕರಿ ಹಿಡಿಯಲೆಂದು ರಾಣೆಬೆನ್ನೂರು ಬಳಿಯ ಹಳ್ಳಿಯ ಯುವಕ ಸಿರಿಗೆರೆಗೆ ಬಂದು, ಶ್ರೀ ಶಿವಕುಮಾರ ಸ್ವಾಮಿಗಳ ದಿಟ್ಟಿಗೆ ಬಿದ್ದು, ಮುಂದೆ ಬಿಎ ಎಂಎ ಕಲಿತು, ೧೯೭೭ರಲ್ಲಿ ಅದೇ ಸಾಣೆಹಳ್ಳಿಗೆ ಬಂದದ್ದು, ತರಳಬಾಳು ಶಾಖಾಮಠವನ್ನು ನಡೆಸಿ, ಅದರ ಹರಹನ್ನು ನಾಡಿನಾದ್ಯಂತ ವಿಸ್ತರಿಸಿ, ಇಂದಿನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಾಗಿ ಬೆಳೆದಿದ್ದು ವಿಸ್ಮಯದ ಜೀವನ ಚರಿತ್ರೆ.

ಸಾಹಿತ್ಯ, ಶಿಕ್ಷಣ, ಕಲೆ, ವಿಚಾರ, ನಾಟಕ ಎಲ್ಲದರಲ್ಲೂ ಪುಟ್ಟ ಊರು ಸಾಣೆಹಳ್ಳಿಯು ತೊಡಗಿಸಿಕೊಂಡಿದೆ. ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿದೆ. ಸಮಾಜದಲ್ಲಿ, ಹೊಸ ತಲೆಮಾರಿನಲ್ಲಿ ಸದ್ವಿಚಾರ ಹರಡಲು ಶಿಕ್ಷಣ, ಸಾಹಿತ್ಯ, ಸಮಾವೇಶಗಳಷ್ಟೇ ಸಂಗೀತ, ನಾಟಕಗಳೂ ಪ್ರಭಾವಶಾಲಿ ಮಾಧ್ಯಮವೆಂದು ಅರಿತ ಸ್ವಾಮಿಗಳ ಪ್ರೋತ್ಸಾಹದಿಂದ ೧೯೮೭ರಲ್ಲಿ ಶ್ರೀ ಶಿವಕುಮಾರ ಕಲಾಸಂಘ ಸ್ಥಾಪನೆಯಾಯಿತು.

ಹತ್ತು ವರ್ಷಗಳ ಬಳಿಕ ‘ಶಿವ ಸಂಚಾರ’ ಆರಂಭವಾಯಿತು. ಇದುವರೆಗೆ ೮೪ ನಾಟಕಗಳ ೩೭೨೦ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿವೆ. ನಾಟಕ ತಯಾರಿಯ ಹಂತದಿಂದ ಪೂರ್ಣ ಪ್ರದರ್ಶನಕ್ಕೆ ಹೊರಡುವವರೆಗೆ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು ಮತ್ತೆಮತ್ತೆ ನಾಟಕ ನೋಡುತ್ತಾರೆ. ಸಲಹೆ ನೀಡುತ್ತಾರೆ.

ಶಿವಸಂಚಾರ, ಶಿವದೇಶ ಸಂಚಾರ, ಭಾರತ ರಂಗಸಂಚಾರ, ಬಸವ ಸಂಚಾರ ಮುಂತಾಗಿ ಸಾಣೇಹಳ್ಳಿಯ ರಂಗತಂಡಗಳು ನಾಟಕಗಳೊಡನೆ ಸಾಕಷ್ಟು ಪರ್ಯಟನೆ ನಡೆಸಿವೆ. ಐದು ಸಾವಿರ ಪ್ರೇಕ್ಷಕರು ಕೂರಬಹುದಾದ ಗ್ರೀಕ್ ಕೊಲೊಸಿಯಂ ಮಾದರಿಯ ಬಯಲು ರಂಗಮಂದಿರ ಮತ್ತು ಅದರ ಆಚೀಚಿನ ಹಸಿರ ಪರಿಸರ ಮನ ಸೆಳೆಯುವಂತಿವೆ. ೨೦೦೩ರಲ್ಲಿ ನಿರ್ಮಾಣವಾದ ಬಯಲು ರಂಗಮಂದಿರ ಮತ್ತು ಅದರ ಹೊರಗೂ ಜನ ತುಂಬಿ ತುಳುಕಿ ನಾಟಕ ನೋಡುತ್ತಾರೆ.

೭೪ ವರ್ಷ ವಯಸ್ಸಿನ ಸ್ವಾಮೀಜಿ ಈಗಲೂ ಬಲು ಚಟುವಟಿಕೆಯಿಂದಿದ್ದಾರೆ. ಬಸವ ಪಥ ಕುರಿತು ಸ್ಪಷ್ಟವಾಗಿದ್ದಾರೆ. ಹಿಂದೊಂದು ಮುಂದೊಂದು ಮಾಡಬಾರದೆಂಬ ಬಸವ ಬೆಳಕಿನಲ್ಲಿ ನಡೆನುಡಿಗಳನೊಂದಾಗಿಸಲು ಅನವರತ ಶ್ರಮಿಸುತ್ತಾರೆ. ಈ ಕಾರಣಕ್ಕೇ ಜನಬೆಂಬಲ ಪಡೆದಿದ್ದಾರೆ, ವಿರೋಧವನ್ನೂ ಎದುರಿಸುತ್ತಿದ್ದಾರೆ. ಸ್ತುತಿನಿಂದೆಗಳಿಗೀಡಾಗದೇ ಕೇಡು ಎಷ್ಟಾದರೂ ಇರಲಿ, ಒಳ್ಳೆಯದನ್ನೇ ಆಡುತ್ತ ಹೋಗಬೇಕು; ಸುಳ್ಳು ಎಷ್ಟಾದರೂ ಇರಲಿ, ಸತ್ಯವನ್ನೇ ಹರಡಬೇಕು ಎಂಬ ಧೃಢ ನಿರ್ಧಾರ ಹೊಂದಿದ್ದಾರೆ. ಬಹುಶಃ ಈ ಕಾರಣಕ್ಕೇ ದೇವರು, ಧರ್ಮ, ಮಠಮಾನ್ಯಗಳಿಂದ ಅಂತರ ಕಾಯ್ದುಕೊಳ್ಳುವ ನಮ್ಮಂತಹವರೂ ಸಾಣೆಹಳ್ಳಿ ಶ್ರೀಗಳನ್ನು ಗೌರವಿಸುವುದು ಅನಿಸುತ್ತದೆ.

ನನ್ನ ತಂದೆ ಎಚ್. ಜಿ. ಸತ್ಯನಾರಾಯಣ ಸಿರಿಗೆರೆ ಸಂಸ್ಥೆಯ ವಿವಿಧ ಹಳ್ಳಿಗಳ ಎಂಟು ಪ್ರೌಢಶಾಲೆಗಳಲ್ಲಿ ೩೮ ವರ್ಷಗಳ ಕಾಲ ಕೆಲಸ ಮಾಡಿದರು. ನನ್ನ ಬಾಲ್ಯದ ಮೊದಲ ಹತ್ತುವರ್ಷ ತರೀಕೆರೆ, ಅರಸೀಕೆರೆ ಆಸುಪಾಸಿನ ಕಣಕಟ್ಟೆ (ಅಮ್ಮ ಗಿರಿಜಾಂಬಾ ತವರು), ಸಿಂಗಟಗೆರೆ, ನೇರಲಕೆರೆ, ಹೊಸದುರ್ಗಗಳಲ್ಲಿ ಕಳೆದವು.

ದೊಡ್ಡ ಸ್ವಾಮಿಗಳು (ಶಿವಕುಮಾರ ಸ್ವಾಮಿಗಳು), ಡಾಕ್ಟರ್ ಸ್ವಾಮಿಗಳು (ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು), ಸಾಣೆಹಳ್ಳಿ ಸ್ವಾಮಿಗಳು (ಪಂಡಿತಾರಾಧ್ಯ ಸ್ವಾಮಿಗಳು) ಅಂತೆಲ್ಲ ಅಣ್ಣ ಮಾತಾಡುತ್ತ ಪದೇಪದೇ ಹೇಳುತ್ತಿದ್ದರೂ ಸಿರಿಗೆರೆ ಮಠಕ್ಕೆ ಎಂದೂ ಹೋಗಲಿಲ್ಲ. ಸಾಣೆಹಳ್ಳಿಗೂ ಹೋಗಿರಲಿಲ್ಲ. ಆದರೆ ಈ ಕುಗ್ರಾಮಗಳಲ್ಲಿ ಶಾಲೆ ತೆರೆದು ಅಕ್ಷರ ದಾಸೋಹ ಮಾಡಿದ ತರಳಬಾಳು ಸಂಸ್ಥೆ ಜಾತ್ಯತೀತ, ಬಸವ ಮಾರ್ಗದ ಸಮೃದ್ಧ ಬಾಲ್ಯವನ್ನು ನನಗೆ ಕರುಣಿಸಿದೆ. ಅದರ ಕಿಂಚಿತ್ ಋಣ ಸಂದಾಯದ ಒಂದು ಅವಕಾಶ ಎಂದು ಇದೇ ೩ರಂದು ಸಾಣೆಹಳ್ಳಿಗೆ ಹೋಗಿಬಂದೆ.

ಬರುವವರು ಯಾರೇ ಇರಲಿ, ಇಷ್ಟು ಸಮಯಕ್ಕೆ ಉಪಹಾರ, ಇಷ್ಟು ಹೊತ್ತಿಗೆ ಸ್ಟೇಜ್ ಕಾರ್ಯಕ್ರಮ ಎಂದು ನಿಗದಿ ಮಾಡಿದರೆ ಮುಗಿಯಿತು, ಸಾಣೆಹಳ್ಳಿ ಸ್ವಾಮಿಗಳು ಯಾರಿಗೂ ಕಾಯದೇ ಕಾರ್ಯಕ್ರಮ ನಡೆಸುತ್ತಾರೆ. ಅವರ ಸಮಯ ಪಾಲನೆ ತುಂಬ ಮೆಚ್ಚಿಗೆಯಾಯಿತು.

ಅತಿಥಿ ಗೃಹವಿರಲಿ, ದಾರಿಯುದ್ದಕ್ಕೂ ಜನರ ನಿಯಂತ್ರಣಕ್ಕೆಂದು ನಿಂತಲ್ಲಿರಲಿ, ಊಟದ ಆವರಣವಿರಲಿ, ಎಲ್ಲಕಡೆ ಪುಟುಪುಟನೆ ಓಡಾಡುತ್ತ ಕೆಲಸ ನಿರ್ವಹಿಸುತ್ತಿದ್ದ ಹುಡುಗ, ಹುಡುಗಿಯರ ತೊಡಗಿಕೊಳ್ಳುವಿಕೆ ತುಂಬ ಇಷ್ಟವಾಯಿತು. ದಾಸೋಹದ ಮನೆಯಲ್ಲಿ ಏಳನೆಯ ತರಗತಿಯ ಹುಡುಗರು ಎಷ್ಟು ಅಚ್ಚುಕಟ್ಟಾಗಿ ಆಸ್ಥೆಯಿಂದ ನಮ್ಮ ಕೈಬಾಯಿಗಳ ಗಮನಿಸಿ ಒಂದಾದಮೇಲೊಂದು ತಟ್ಟೆಗೆ ಹಾಕಿದರೆಂದರೆ ಆಹಾರ ನೀಡುವ ಅವರ ಕಾಯಕ ಶ್ರದ್ಧೆಗೆ ಪ್ರೀತಿ ಉಕ್ಕಿ ಬಂತು.

‘ಮನೆಯಲ್ಲೂ ಇದನ್ನೆಲ್ಲ ಮಾಡ್ತೀರೇನ್ರೋ?’ ಎಂದರೆ, ‘ಅಲ್ಲಿ ಒಟ್ಟ ಅಡಿಗಿ ಮನಿಕಡೆ ಬರಕ್ಕೇ ಬಿಡಂಗಿಲ್ರಿ’ ಎಂದುಲಿದವು. ಮಕ್ಕಳನ್ನು ಅನುನಯಿಸಿ ಶ್ರಮಕ್ಕೆ ಒಗ್ಗಿಸುವ ಕೆಲಸ ಮಾಡದಿರುವವರು ಯಾರು ಎಂಬ ಪ್ರಶ್ನೆ ನಾವೇ ಕೇಳಿಕೊಳ್ಳಬೇಕು, ಅಲ್ಲವೇ ಅನಿಸಿತು.

ಧರ್ಮದೇವರುಗಳ ಕೇಂದ್ರವಾಗಿರುವ ಮಠಗಳು ಮತ್ತು ವಿರಕ್ತರೇ ಆದರೂ ವಿಶಾಲ ಸಂಸಾರ ನಿಭಾಯಿಸುವ ಸ್ವಾಮಿಗಳು ಭಿಕ್ಕುತನವನ್ನು, ಸರಳತೆಯನ್ನು, ಮಾನವ ಪ್ರೀತಿಯನ್ನು ರೂಢಿಸಿಕೊಂಡಲ್ಲಿ ಅದ್ಭುತ ಸಾಧಿಸಬಹುದೆನ್ನಲು ಕರ್ನಾಟಕದಲ್ಲಿ ಕೆಲವಾದರೂ ಉದಾಹರಣೆಗಳಿವೆ.

ಅಂತಹ ಅಪರೂಪದ ವ್ಯಕ್ತಿತ್ವ ಸಾಣೆಹಳ್ಳಿ ಶ್ರೀಗಳದು. ಉತ್ತಮ ಓದುಗರೂ, ಬರಹಗಾರರೂ, ಚಿಂತನಾಶೀಲರೂ ಆಗಿರುವ ಅವರು ಬಸವ ತತ್ವದ ನಿಜಾರ್ಥ ಅರಿತು ಸರ್ವ ಮತ ಸಮಭಾವ ರೂಢಿಸಿಕೊಂಡವರು. ಮಠ, ಗುರುಗಳು ಎಂದ ಮೇಲೆ ಬೇಕಿರುವ, ಬೇಡದಿರುವ ಎಲ್ಲ ಅಷ್ಟಿಷ್ಟು ನುಸುಳಿರುತ್ತವೆ. ಜಾಗೃತ ದೃಷ್ಟಿಯಿಂದ ಅಂಥ ಕಳೆಗಳನ್ನೆಲ್ಲ ನಿವಾರಿಸಬಲ್ಲ ಅರಿವು ಹೊಂದಿರುವ ಸ್ವಾಮೀಜಿಯವರ ಸರಳತೆ, ವೈಚಾರಿಕತೆ ಹೊಸ ತಲೆಮಾರಿಗೂ ಹಬ್ಬಲಿ; ಎಲ್ಲ ಮಠಮಾನ್ಯಗಳನ್ನೂ ಆವರಿಸಲಿ. ಕೇವಲ ಅನುಯಾಯಿತ್ವವನ್ನು ಪೋಷಿಸುವ ಮಠ ವ್ಯವಸ್ಥೆಯಲ್ಲಿ ಪಂಡಿತಾರಾಧ್ಯ ಸ್ವಾಮೀಜಿಯವರು ಸೃಷ್ಟಿಸಿರುವ ಸೃಜನಶೀಲ ಆವರಣವು ಹೊಸತಲೆಮಾರಿನ ವೈಚಾರಿಕ ಶರಣ ಸಂಕುಲವನ್ನು ರೂಪಿಸಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *