ಬಸವತತ್ವಕ್ಕೆ ಬದುಕು ಸಮರ್ಪಿಸಿಕೊಂಡಿದ್ದ ವೀರಭದ್ರಪ್ಪ ಅಣ್ಣನವರು

ರಾಯಚೂರು

ನಗರದ ಬಸವ ಕೇಂದ್ರದಲ್ಲಿ ಶರಣೆ ನೀಲಾಂಬಿಕೆ ತಾಯಿಯವರ ಸ್ಮರಣೆ ಹಾಗೂ ಲಿಂಗೈಕ್ಯ ಶರಣ ಪಿ. ವೀರಭದ್ರಪ್ಪ ಕುರುಕುಂದಿ ಅವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಿಕಾ ಹನುಮಂತ ಗುತ್ತೇದಾರ ಮಾತನಾಡಿ, ನೀಲಾಂಬಿಕೆಯವರು ಬಸವಣ್ಣನವರ ಪ್ರತಿಯೊಂದು ಕಾರ್ಯಗಳ ಹಿಂದೆ ಜ್ಞಾನಶಕ್ತಿಯಾಗಿ ಕಾರ್ಯನಿರ್ವಹಿಸಿದರು.

” ಬಸವನ ಅನುಭವದಿಂದ ವಿವರವ ಕಂಡು ವಿಚಾರ ಪತ್ನಿ ಯಾದೆನಯ್ಯಾ ಸಂಗಯ್ಯ ” ಎಂಬ ವಚನದ ಮೂಲಕ ಅಭಿವ್ಯಕ್ತಿಗೊಳಿಸಿದ್ದನ್ನು ಕಾಣುತ್ತೇವೆ. ದಾಂಪತ್ಯ ಜೀವನದಲ್ಲಿ ಪತಿಯ ದೇಹಸಂಗಾತಿಯಾಗಿದ್ದರಷ್ಟೇ ಸಾಲದು, ಆತನ ಸಾಧನೆಯಲ್ಲಿ ವಿಚಾರ ಪತ್ನಿಯಾಗಿ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ. ಬಸವಣ್ಣನವರ ಬಾಳಿನಲ್ಲಿ ಅವರ ಅಕ್ಕ ನಾಗಲಾಂಬಿಕಾ ತಾಯಿಯು ಇಚ್ಛಾಶಕ್ತಿಯಾಗಿ, ಅವರ ಮೊದಲ ಪತ್ನಿ ಗಂಗಾಂಬಿಕೆಯು ಕ್ರಿಯಾಶಕ್ತಿಯಾಗಿ, ಎರಡನೆಯ ಪತ್ನಿ ನೀಲಾಂಬಿಕೆಯು ಜ್ಞಾನ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದನ್ನು ಕಾಣಬಹುದೆಂದರು.

ಪಾರ್ವತಿ ಪಾಟೀಲ ಮಾತನಾಡಿ, ಲಿಂಗೈಕ್ಯ ವೀರಭದ್ರಪ್ಪನವರು ಶರಣ ತತ್ವ, ಆದರ್ಶಗಳು ಎಲ್ಲರ ಮನೆ ಮನಗಳಲ್ಲಿ ಹರಡಲಿ ಹಾಗೂ ಸರ್ವರಲ್ಲಿರುವ ಮೂಢನಂಬಿಕೆಗಳು ದೂರ ಹೋಗಿ ನೆಮ್ಮದಿ, ಸುಖ, ಶಾಂತಿಯ ಬದುಕನ್ನು ನಡೆಸಲೆನ್ನುವ ಉದ್ದೇಶದಿಂದಲೇ ಅವರು ಶರಣ ಧರ್ಮ ಪ್ರಚಾರ ಮಾಡಿದರು.

ತಮ್ಮ ಸ್ವಂತ ವಾಹನದಲ್ಲಿ ನಾಲ್ಕಾರು ಶರಣರೊಂದಿಗೆ ಕರ್ನಾಟಕದ ಚಾಮರಾಜಪೇಟೆ, ಮೈಸೂರು, ಬೆಂಗಳೂರು, ನಂಜನಗೂಡು, ತೆಲಂಗಾಣ ಪ್ರದೇಶದವರೆಗೂ ಸಂಚರಿಸಿ ಶರಣ ತತ್ವದಡಿ ಕಲ್ಯಾಣ ಮಹೋತ್ಸವ, ಸೀಮಂತ ಕಾರ್ಯ, ಮಗುವಿನ ನಾಮಕರಣ, ನೂತನ ಮನೆ ಗುರುಪ್ರವೇಶ ಹಾಗೂ ಲಿಂಗೈಕ್ಯರಾದವರ ಅಂತಿಮ ಸಂಸ್ಕಾರಗಳನ್ನು ನಡೆಸಿಕೊಟ್ಟು ಶರಣತತ್ವ ಬೆಳವಣಿಗೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡ ಧೀಮಂತ ವ್ಯಕ್ತಿತ್ವ ಉಳ್ಳವರಾಗಿದ್ದರೆಂದು ನೆನೆದರು.

ವೆಂಕಣ್ಣ ಆಶಾಪೂರ ಅವರು ಮಾತನಾಡಿ, ವೀರಭದ್ರಪ್ಪನವರು ಕರೋನಾ ಸಮಯದಲ್ಲಿ ಕರೋನ ರೋಗಿಗಳಿಗೆ 1 ಲಕ್ಷದವರೆಗೆ ಹಣಕಾಸಿನ ಸಹಾಯ ಮಾಡಿ, ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದನ್ನು ಅವರ ತ್ಯಾಗಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡ ಅವರು ಮಾತನಾಡಿ ಜ್ಞಾನ ಜಂಗಮ / ಚರಜಂಗಮರಾಗಿ ನಿರಂತರ ಸೇವೆ ಸಲ್ಲಿಸಿದ್ದನ್ನು ಗಮನಿಸಿದರೆ ಜಂಗಮ ಎಂಬ ಪದಕ್ಕೆ ನಿಜಾರ್ಥ ಕೊಟ್ಟವರು ವೀರಭದ್ರಪ್ಪನವರು. ಅಲ್ಲದೆ ಶಿಕ್ಷಣ ಪ್ರೇಮಿಗಳಾದ ಅವರು ಬಸವ ಚಾರಿಟೇಬಲ್ ಟ್ರಸ್ಟಿನಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಲಾ 15 ಸಾವಿರದವರೆಗೆ ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡಿದ್ದನ್ನು ಅವಲೋಕನೆ ಮಾಡಿದರೆ ಅವರ ದೂರದೃಷ್ಟಿ ಎಂತಹದೆಂದು ಅರ್ಥವಾಗುತ್ತದೆಂದರು.

ಜಗದೇವಿ ಚನ್ನಬಸವ ಮಾತನಾಡಿ, ಸಮಾನತೆ ಹರಿಕಾರರಾದ ಶರಣ ಕುರುಕುಂದಿ ವೀರಭದ್ರಪ್ಪನವರು ಎಲ್ಲ ವರ್ಗದ ಜನರಿಗೆ ಲಿಂಗದೀಕ್ಷೆಯನ್ನು ನೀಡಿ, ಶರಣ ತತ್ವದ ಅರಿವನ್ನು ಮೂಡಿಸಿದರು. ಹಾಗೂ ವಿಶೇಷ ಚೇತನ ಮಕ್ಕಳಿಗೆ ಮೂರು ಗಾಲಿ ಸೈಕಲ್ ನೀಡಿ ಅವರ ಬಾಳಿನ ಆಶಾ ಜ್ಯೋತಿಯಾಗಿದ್ದಾರೆಂದರು.

ಸಿ.ಬಿ. ಪಾಟೀಲ ವಕೀಲರು ಮಾತನಾಡಿ, ಸಿಂಧನೂರು ನಲ್ಲಿರುವ ಮುಕ್ತ ಸಹಕಾರಿ ಬ್ಯಾಂಕ್ ಸರ್ವ ಸದಸ್ಯರ ಮನವೊಲಿಸಿ 22 ಲಕ್ಷ ದೇಣಿಗೆ ಸಂಗ್ರಹಿಸಿ ಮುಕ್ತಾ ಭವನವನ್ನು ಕಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಲಲಿತಾ ಮಲ್ಲಿಕಾರ್ಜುನ ಗುಡಿಮನಿಯವರು, ವೀರಭದ್ರಪ್ಪ ಸರ್ ಸಲ್ಲಿಸಿದ ಸಮಾಜ ಸೇವೆಯನ್ನು ಗುರುತಿಸಿ ‘ಕರ್ನಾಟಕ ಸಮಾಜ ಸೇವಾ ಪ್ರಶಸ್ತಿಯನ್ನು’ ನೀಡಿ ಗೌರವಿಸಿದ್ದನ್ನು ನೆನಪಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಉಪಾಧ್ಯಕ್ಷರಾದ ಎಂ. ಚನ್ನಬಸವ, ಇಂಜಿನಿಯರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಚನ ಪಾಠಶಾಲೆ ನಡೆಸಲಾಯಿತು.

ಸುಪ್ರಿಯಾ ಪಾಟೀಲ ಸ್ವಾಗತಿಸಿದರು. ವಚನ ಗೀತೆಯನ್ನು ದಿವ್ಯಶ್ರೀ ಹಾಡಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ ನಡೆಸಿಕೊಟ್ಟರು. ಸರೋಜಾ ಮಾಲಿಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಕ್ತಾ ನರಕಲದಿನ್ನಿಯವರು ಕಾರ್ಯಕ್ರಮ ನಡೆಸಿಕೊಟ್ಟರು, ಅಂಬರೀಶ್ ಅಮಿನಗಡ ಶರಣು ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *