ಚನ್ನಮ್ಮನ ಕಿತ್ತೂರು:
ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪ ಮತ್ತು ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಮಂತ್ರಿಸಲು ಮತ್ತು ಮಹೋತ್ಸವವನ್ನು 2026 ಫೆ. 3 ಮತ್ತು 4 ರಂದು ಆಚರಿಸಲು ನಿರ್ಧರಿಸಲಾಗಿದೆ.
ಬೈಲೂರು ನಿಷ್ಕಲ ಮಂಟಪದಲ್ಲಿ ಪೂಜ್ಯ ನಿಜಗುಣಾನಂದ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಕೊಳ್ಳಲಾಗಿದೆ ಎಂದು ಶ್ರೀಗಳು ಬಸವ ಮೀಡಿಯಾಕ್ಕೆ ತಿಳಿಸಿದರು.

“ಅದ್ದೂರಿಯಾಗಿ ರಜತಮಹೋತ್ಸವ ಆಚರಿಸಲು ಭಕ್ತರು ತೀರ್ಮಾನ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ 25 ವಚನ ವ್ಯಾಖ್ಯಾನ ಸಂಪುಟ ಹಾಗೂ ವಚನ ಕ್ಯಾಸೆಟ್ ಲೋಕಾರ್ಪಣೆ ಮಾಡಲಾಗುವುದು’ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಎರಡು ದಿನ ವೈಭವದಿಂದ ನಡೆಯುವ ಮಹೋತ್ಸವಕ್ಕೆ ನಾಡಿನ ಸ್ವಾಮೀಜಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರನ್ನು ಕರೆಯಲಾಗುವುದು ಎಂದರು.

ಅಥಣಿ ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕಲ್ಯಾಣದ ಗೋಣಿರುದ್ರ ದೇವರು, ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯ ಮಹಾಂತೇಶ ಕಂಬಾರ, ಪ್ರೊ. ಎನ್.ಎಸ್.ಗಲಗಲಿ, ಪ್ರಮುಖರಾದ ವೀರೇಶ ಕಂಬಳಿ, ಕಲ್ಲಪ್ಪ ಕುಗಟಿ, ಚಿಕ್ಕನಂದಿಹಳ್ಳಿ ಚಂದ್ರಗೌಡ, ಶ್ರೀಕಾಂತ ಹಿರೇಮಠ, ರುದ್ರಪ್ಪ ಇಟಗಿ, ನಾಗೇಶ ಮರೆಪ್ಪಗೋಳ, ಗಂಗಪ್ಪ ಮುಳುಕೂರ, ಬಸವರಾಜ ಲದ್ದಿಮಠ, ಅಷ್ಪಾಕ್ ಹವಾಲ್ದಾರ್, ರವಿ ಅಗ್ನಿಹೋತ್ರ, ಶಂಕರಗೌಡ ಪಾಟೀಲ, ಕಲ್ಲಪ್ಪ ಕುರಗುಂದ, ನಿಜಗುಣಿ ಬಾಗೇವಾಡಿ, ಶಂಕರ ಪತ್ತಾರ, ಗುಂಡೇನಟ್ಟಿ, ಹಾವೇರಿ, ಹಳಿಯಾಳ, ಇಟಗಿ, ಕಿತ್ತೂರು, ಧಾರವಾಡ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಹಾಜರಿದ್ದರು.

ಉತ್ತರಾಧಿಕಾರಿ ಆಯ್ಕೆ, ಸ್ವಾಮೀಜಿಗೆ ಅಧಿಕಾರ:ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಆಯ್ಕೆಯ ವಿಚಾರ ಹಾಗೂ ಸಂಪೂರ್ಣ ಅಧಿಕಾರವನ್ನು ಒಕ್ಕೊರಲಿನಿಂದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಭಕ್ತರು ಬಿಟ್ಟುಕೊಟ್ಟರು. ನಿಮ್ಮ ತೀರ್ಮಾನವೇ ಅಂತಿಮ. ಈ ವಿಷಯದಲ್ಲಿ ನಾವು ಭಾಗವಹಿಸುವುದಿಲ್ಲ ಎಂದೂ ಭಕ್ತರು ನುಡಿದರು ಎಂದು ತಿಳಿದು ಬಂದಿದೆ.

