ಬೆಂಗಳೂರು
ಬಸವೋತ್ಸವ ಹಾಗೂ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಶುಕ್ರವಾರ ಸಂಜೆ ನಗರದಲ್ಲಿ ವಿವಿಧ ಮಠಗಳ ಗುರುಗಳೊಂದಿಗೆ ಉದ್ಘಾಟಿಸಿದರು.
ಅಥಣಿಯ ಶ್ರೀ ಗಚ್ಚಿನ ಮಠ, ರಾಷ್ಟ್ರೀಯ ಬಸವತತ್ವ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಸವತತ್ವಗಳ ಬೋಧನೆಗೆ ಮಾತ್ರ ಸೀಮಿತರಾಗದೆ, ತಮ್ಮ ಬದುಕಿನಲ್ಲೇ ಅವನ್ನು ನಿಷ್ಠೆಯಿಂದ ಪಾಲಿಸಿದ ಅಪ್ರತಿಮ ವೀರಸನ್ಯಾಸಿ.

ದಲಿತರಿಗೆ ಶಿವಲಿಂಗ ದೀಕ್ಷೆ ನೀಡಿ ಸಾಮಾಜಿಕ ಸಮಾನತೆಯ ತತ್ವವನ್ನು ಜಾಗೃತಗೊಳಿಸಿದವರು. ನಮ್ಮ ಪೂರ್ವಿಕರಾದ ತ್ಯಾಗವೀರ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿಗಳಿಗೆ ನೀಡಿದ ಪ್ರೇರಣೆ ಸೇರಿದಂತೆ, ಶ್ರೀ ಶಿವಯೋಗಿಗಳ ಅಮೋಘ ಕೊಡುಗೆಗಳನ್ನು ಭಕ್ತಿಭಾವದಿಂದ ಸ್ಮರಿಸಿದೆ.
ಬಸವ ಜಯಂತಿಗೆ ನಾಂದಿ ಹಾಡಿದವರೂ ಅಥಣಿ ಶ್ರೀಗಳು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಿಲಕ್ ಅವರಿಗೂ ಮಾರ್ಗದರ್ಶನ ನೀಡಿದ್ದರು. ಅಲ್ಲದೆ, ಸ್ವಾತಂತ್ರ್ಯದ ಬಗ್ಗೆ ದೊಡ್ಡ ಸಂದೇಶವನ್ನೇ ಸಾರಿದ್ದಾರೆ. ದೇಶವನ್ನು ಕಟ್ಟುವ ಹಲವು ನಾಯಕರನ್ನು ಹಾಗೂ ಸಮಾಜ ಸೇವಕರನ್ನು ಸೃಷ್ಟಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಅಂತಹ ಸಾಧಕನನ್ನು ರಾಜ್ಯದ ರಾಜಧಾನಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಛತ್ರಪತಿ ಶಿವಾಜಿ ಜಯಂತಿಗೆ ಜ್ಯೋತಿಬಾ ಪುಲೆ ಅವರು ಕಾರಣರು. ಅದೇ ರೀತಿ ಬಸವ ಜಯಂತಿ ರಾಜ್ಯದಲ್ಲಿ ಬರಬೇಕಿದ್ದರೆ ಅಥಣಿ ಶ್ರೀಗಳ ಪಾತ್ರ ಬಹಳ ದೊಡ್ಡದಿದೆ. ಬಸವ ತತ್ವವನ್ನು ಪ್ರಚುರಪಡಿಸುವುದು ಮಾತ್ರವಲ್ಲದೆ, ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.
ಬಸವ ಸಮಿತಿಯ ಅರವಿಂದ್ ಜತ್ತಿ ಮಾತನಾಡಿ, ಅಥಿಣಿ ಶ್ರೀಗಳು ಬಸವಣ್ಣನನ್ನು ‘ಅಪ್ಪ’ ಎಂದು ಕರೆಯುತ್ತಿದ್ದರು. ಬಸವಣ್ಣಗೆ ತಂದೆಯ ಗೌರವವನ್ನು ಎಲ್ಲಿಯವರೆಗೆ ನೀಡುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕಾರ್ಯಕ್ರಮ ವ್ಯರ್ಥವಾಗುತ್ತದೆ. ನಾಗರಿಕತೆ ಎಂದರೆ ಬಹಿರಂಗದ ಚೆಲುವು. ಅಂತರಂಗದ ಚೆಲುವೇ ಸಂಸ್ಕೃತಿ. ಅದಕ್ಕಾಗಿಯೇ ನಾವು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಹೇಳುತ್ತೇವೆ ಎಂದರು.

ಹನುಮಂತ ಲಮಾಣಿ, ಸಾದ್ವಿನಿ ಕೊಪ್ಪ, ಮಹಾನ್ಯ ಮತ್ತಿತರರು ಗಾಯನದ ಮೂಲಕ ಜನರನ್ನು ರಂಜಿಸಿದರು. ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಾಸಕರಾದ ಎಂ. ಕೃಷ್ಣಪ್ಪ, ಲತಾ ಮಲ್ಲಿಕಾರ್ಜುನ್, ವಿಧಾನಪರಿಷತ್ ಮಾಜಿ ಶಾಸಕ ಈ. ಕೃಷ್ಣಪ್ಪ ಹಾಗೂ ವಿವಿಧ ಮಠಾಧೀಶರಿದ್ದರು. ಕಾರ್ಯಕ್ರಮದಲ್ಲಿ ಎಂ ಬಿ ಪಾಟೀಲ್ ಅವರಿಗೆ ಸನ್ಮಾನ ಮಾಡಲಾಯಿತು.
