ಚರ್ಚೆ: ದೇಶದಲ್ಲಿ ಸಧ್ಯಕ್ಕೆ ಅಘೋಷಿತ ತುರ್ತುಪರಿಸ್ಥಿತಿ ಇದೆ

ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ

ಅಭಿಯಾನ ಬಸವಾದಿಗಳ ಕ್ರಾಂತಿಕಾರಿ ತತ್ವಗಳನ್ನು ಪರಿಚಯಿಸಿದೆ

ಕಲಬುರ್ಗಿ

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಚಿಂತಕಿ ಮೀನಾಕ್ಷಿ ಬಾಳಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

ಪ್ರಶ್ನೆ ೧- ಬಸವ ಸಂಸ್ಕೃತಿ ಅಭಿಯಾನ ಕನ್ನಡ ಸಮಾಜಕ್ಕೆ ಏನು ಸಂದೇಶ ನೀಡಿದೆ? ಅದರ ಪರಿಣಾಮವೇನು?

ಬಸವ ಸಂಸ್ಕೃತಿ ಅಭಿಯಾನ ತುಂಬಾ ಸಕಾರಾತ್ಮಕ ಪರಿಣಾಮ ನೀಡಿದೆ. ಐತಿಹಾಸಿಕ ದಾಖಲೆ ನಿರ್ಮಿಸಿದೆ. ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಮೊದಲ ಬಾರಿಗೆ ಬಸವಾದಿಗಳ ಮಹತ್ವ ಮತ್ತು ಅವರ ವಿಶ್ವಾತ್ಮಕ ನೆಲೆಗಳನ್ನು ಪರಿಚಯಿಸಿದಂತಾಗಿದೆ.

ಮೊದಲ ಬಾರಿಗೆ ಮಠಾಧೀಶರಿಂದ ನಡೆದ ಈ ಅಭಿಯಾನವು ವಚನಗಳನ್ನು ಲಿಂಗಾಯತೇತರ ಸಾಮಾನ್ಯರ ನಡುವೆ ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದೆ.

ಈವರೆಗೆ ಬಸವಾದಿಗಳನ್ನು ಕೇವಲ ಧಾರ್ಮಿಕ ಪರಿಪ್ರೇಕ್ಷದಲ್ಲಿ ನೋಡುವ ಉಪಕ್ರಮವೊಂದನ್ನು ಹುಟ್ಟುಹಾಕಲಾಗಿತಷ್ಟೇ. ಅಭಿಯಾನದ ಮೂಲಕ ಬಸವಾದಿಗಳ ಕ್ರಾಂತಿಕಾರಿ ತತ್ವಗಳ ಸಾರ್ವತ್ರಿಕತೆ ಮತ್ತು ಸಾರ್ವಕಾಲಿಕತೆಗಳನ್ನು ನಾಡವರಿಗೆ ಅಲ್ಪ ಪ್ರಮಾಣದಲ್ಲಾದರೂ ಪರಿಚಯಿಸಲು ಸಾಧ್ಯವಾಗಿದೆ.

ಶರಣ ತತ್ವಗಳು ಒಂದು ಜಾತಿಗೆ ಸೀಮಿತ ವಲ್ಲ. ಅವು ವಿಶ್ವದ ಕೊನೆಯ ಮನುಷ್ಯಳನ್ನು ಒಳಗೊಂಡಿವೆ ಎಂಬ ಸಂದೇಶ ಪರಿಣಾಮಕಾರಿಯಾಗಿ ಪಸರಿಸಲು ಸಾಧ್ಯವಾಗಿದೆ. ತತ್ಪರಿಣಾಮವಾಗಿ ವರ್ಣಾಶ್ರಮ ಧರ್ಮವೇ ಶ್ರೇಷ್ಠವೆಂದು ಮೋಸ ಮಾಡುತ್ತಿದ್ದ ವೈದಿಕರಿಗೆ ನಡುಕ ಹುಟ್ಟಿದೆ.

ಶರಣ ತತ್ವಗಳು ಒಂದು ಜಾತಿಗೆ ಸೀಮಿತವಲ್ಲ ಎಂಬ
ಸಂದೇಶ ಹೋಗಿದೆ.

ಎರಡನೆಯದಾಗಿ ಪಾಲ್ಗೊಂಡ ಬಸವ ತತ್ವ ಪರ ಮಠಾಧೀಶರಿಗೆ ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದೆ. ಅಭಿಯಾನದುದ್ದಕ್ಕೂ ಮಕ್ಕಳು ಕೇಳಿದ ಪ್ರಶ್ನೆಗಳು ಮಠಾಧೀಶರ ಕಣ್ಣು ತೆರೆಸಿವೆ. ನಿಜವಾದ ಬಸವ ಸಂಸ್ಕೃತಿ ಅಪ್ಪಿಕೊಂಡವರಿಗೆ ಮಾತ್ರ ಉಳಿಗಾಲವಿದೆ ಎಂಬ ಸ್ಪಷ್ಟ ಸಂದೇಶವನ್ನು ತಲುಪಿಸಿದೆ.

ಇದು ಅಭಿಯಾನ ನಡೆಸಿದವರಿಗೂ ಮತ್ತು ಅಭಿಯಾನದ ಫಲಾನುಭವಿಗಳಿಬ್ಬರಿಗೂ ಪರಿಣಾಮ ಬೀರಿದೆ. ನೇತೃತ್ವ ವಹಿಸಿದ ಮಠಾಧೀಶರಿಗೆ ಬಸವ ತತ್ವದಂತೆ ನಡೆಯದಿದ್ದರೆ ಇಲ್ಲಿ ತಮಗೆ ಅವಕಾಶವಿಲ್ಲ ಎಂಬ ಎಚ್ಚರ ಮೂಡಿದ್ದರೆ ಅನುಯಾಯಿಗಳಿಗೆ ಎಲ್ಲರನ್ನು ಒಳಗೊಳ್ಳುವುದೇ ಲಿಂಗಾಯತ ಎಂಬ ಅರಿವು ಕಿಂಚತ್ತಾದರೂ ಮೂಡಿದೆ.

ಪ್ರಶ್ನೆ೨- ಅಭಿಯಾನ ಮತ್ತು ಅದರಲ್ಲಿ ಭಾಗವಹಿಸಿದ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಕೋಪ ತಾಪ ಬಂದಿರುವುದು ಯಾಕೆ?

ಹಿಂದೂತ್ವವಾದಿಗಳ ಮರೆ ಮೋಸಗಳನ್ನು ಬಸವ ಸಂಸ್ಕೃತಿ ಅಭಿಯಾನ ಬಯಲುಗೊಳಿಸಿದೆ. ಲಿಂಗಾಯತರು ಯಾವತ್ತೂ ಹಿಂದುತ್ವವಾದಿಗಳಲ್ಲ. ವರ್ಣಾಶ್ರಮ ಶ್ರೇಣಿಕೃತ ಧರ್ಮಕ್ಕೂ ಲಿಂಗಾಯತರಿಗೂ ಯಾವುದೇ ಸಂಬಂಧವಿಲ್ಲ ಎಂಬ ನಿಲುವು ಅವರ ಕಣ್ಣು ಕೆಂಪಾಗಿಸಿದೆ.

ಎಲ್ಲ ದುಡಿಯುವ ಜನಸಮುದಾಯಗಳನ್ನು ತಮ್ಮ ಕರ್ಮ ಸಿದ್ಧಾಂತದ ತೆಕ್ಕೆಗೆ ತೆಗೆದುಕೊಂಡು ಜನಸಾಮಾನ್ಯರ ಶ್ರಮದ ಮೇಲೆ ತಮ್ಮ ಹೊಟ್ಟೆ ಹೊರೆಯುತ್ತಿದ್ದ ಅವರ ಅಂಗಡಿಗಳು ಶಾಶ್ವತವಾಗಿ ಮುಚ್ಚಿ ಹೋಗುತ್ತವೆ ಎಂಬ ಭಯ ಆವರಿಸಿದೆ. ಆದ್ದರಿಂದಲೆ ಅವರ ನವ ರಂಧ್ರಗಳಲ್ಲಿ ಉರಿ ಕಾಣಿಸಿಕೊಂಡು ಒದ್ದಾಡುತ್ತಿದ್ದಾರೆ.

ಬಸವ ಸಂಸ್ಕೃತಿ ಯೊಂದಿಗೆ ಜನರು ಸೇರಿಕೊಂಡರೆ ಹಿಂದುತ್ವ ರಾಜಕಾರಣಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಲಿಂಗಾಯತ ಮಠಾಧೀಶರ ಮೇಲೆ ಹರಿ ಹಾಯುತ್ತಿದ್ದಾರೆ. ದುಡಿಯುವ ಜನರೆಲ್ಲ ಲಿಂಗಾಯತ ಫೋಲ್ಡರ್ ಒಳಗೆ ಸಮಾವೇಶಗೊಂಡರೆ ಇವರ ಹಿಂದುತ್ವಕ್ಕೆ ಕಾಲಾಳುಗಳು ಉಳಿಯುವುದಿಲ್ಲ. ಹೀಗಾಗಿ ಅವರು ಹತಾಶರಾಗಿದ್ದಾರೆ.

ಶತ ಸಹಸ್ರಮಾನದ ಅವರ ಕುತಂತ್ರಕ್ಕೆ ಅಂತಿಮ ತೆರೆ ಬೀಳಲಿದೆ. ದೀಪ ನಂದುವಾಗ ಉರಿಯಲೆಬೇಕು. ಉರಿಯುತ್ತಿದ್ದಾರೆ ಅಷ್ಟೆ.

ಬಸವ ಸಂಸ್ಕೃತಿ ಯೊಂದಿಗೆ ಜನರು ಸೇರಿಕೊಂಡರೆ
ಹಿಂದುತ್ವ ರಾಜಕಾರಣಕ್ಕೆ ಹಿನ್ನಡೆಯಾಗುತ್ತದೆ

ಪ್ರಶ್ನೆ೩- ಅಭಿಯಾನಕ್ಕೆ ಪ್ರತಿಯಾಗಿ ಈಗ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಸಿದ್ಧವಾಗುತ್ತಿದ್ದಾರೆ. ಲಿಂಗಾಯತ ಮಠಾಧಿಪತಿಗಳ,ಮುಖಂಡರ ಮೇಲೆ ಕೆಲವು ಹಿಂದುತ್ವ ಸ್ವಾಮಿಜೀಗಳನ್ನು ನಾಯಕರನ್ನು ಛೂ ಬಿಟ್ಟಿದ್ದಾರೆ. ಇವರ ಉದ್ದೇಶವೇನು?

ಮುಳ್ಳನ್ನು ಮುಳ್ಳಿನಿಂದಲೆ ತೆಗೆಯುವ ಸನಾತನಿಗಳ ಎಂದಿನ ಕುತಂತ್ರ ಇದಾಗಿದೆ. ಉದ್ದೇಶ ಸ್ಪಷ್ಟವಾಗಿದೆ. ಶೂದ್ರರು ಪರಸ್ಪರ ಕಚ್ಚಾಡುತ್ತಲೆ ಇರಬೇಕು. ವೈದಿಕರು ಶೂದ್ರರ ಹೆಣಗಳ ಮೇಲೆ ಅಧಿಕಾರ ಅನುಭವಿಸಬೇಕು. ಅಧಿಕಾರದ ಬಲದಿಂದ ಐಶ್ವರ್ಯ ಪಡೆಯಬೇಕು. ಒಟ್ಟಾರೆ ದುಡಿಯದೇ ಕುಳಿತು ತಿನ್ನಬೇಕೆಂಬ ಅವರ ಮನೋಭಿಪ್ಸೆಗೆ ಪೂರಕವಾಗಿ ಅವರ ನಡೆ ಇರುತ್ತದೆ. ಹೇಡಿ ರಣಹೇಡಿಗಳಾದ ವೈದಿಕರು ಯಾವತ್ತೂ ಮುಂದೆ ನಿಂತು ಕಾದಾಡುವುದಿಲ್ಲ. ಕೈಯಿಂದ ಇತ್ತವರೂ ಅಲ್ಲ. ಇತರರ ಹೆಗಲ ಮೇಲೆ ಬಂದೂಕು ಇಟ್ಟು ಉಡಾಯಿಸುವುದು ಅವರ ಜಾಯಮಾನವೆ ಆಗಿದೆ.

೯ ನೇ ಶತಮಾನದಲ್ಲಿಯೇ ಕವಿ ಚಕ್ರವರ್ತಿ ರನ್ನ ” ಬ್ರಾಹ್ಮಣಂ ಭೋ ಎನ್ನಲುಂ ಸವಿಧಾ ಎನ್ನಲುಂ ತಕ್ಕಂ/ ಈಯಲುಂ ಈರಿಯಲುಂ ಬಗೆವನೆ // ಎಂದಿದ್ದಾನೆ. ಪುರೋಹಿತಶಾಹಿಗಳು ಅಂಜಿ ಕಾಲು ಹಿಡಿಯಲು ಮತ್ತು ದಯನೀಯವಾಗಿ ಬೇಡಿಕೊಳ್ಳಲು ಮಾತ್ರ ಸಮರ್ಥರು.

ಪ್ರಶ್ನೆ೪- ಇದು ಲಿಂಗಾಯತರ ಸಮಸ್ಯೆ ಮಾತ್ರವೇ ಅಥವಾ ಈ ಘರ್ಷಣೆ ಇಡೀ ಸಮಾಜದ ಮೇಲೆ ಪರಿಣಾಮ ಬೀರಲಿದೆಯೇ?

ಇದು ಲಿಂಗಾಯತರ ಸಮಸ್ಯೆ ಮಾತ್ರ ಅಲ್ಲವೆ ಅಲ್ಲ. ಕೇವಲ ರಾಜಕೀಯ, ಸಾಮಾಜಿಕ ಸಮಸ್ಯೆ ಮಾತ್ರವೂ ಅಲ್ಲ. ಇವುಗಳನ್ನು ಒಳಗೊಂಡಂತೆ ಇದೊಂದು ಸಮಗ್ರ ಆಯಾಮದ ತಾತ್ವಿಕ ಸಂಘರ್ಷವಾಗಿದೆ. ವೈದಿಕ ಸನಾತನಿ ಮತ್ತು ಅವೈದಿಕ ಶ್ರಮಣ ಧಾರೆಗಳ ನಡುವಿನ ಸೈದ್ಧಾಂತಿಕ ಹಣಾಹಣಿಯಾಗಿದೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕದ್ದವರು ಮತ್ತು ಕುದ್ದವರ ಅರ್ಥಾತ್ ದುಡಿಯುವ ವರ್ಗ ಮತ್ತು ಕುಳಿತು ತಿನ್ನುವ ವರ್ಗಗಳ ನಡುವಿನ ಹೋರಾಟವಾಗಿದೆ. ದುಡಿಯದೆ ತಿನ್ನುವ ಬಂಡವಾಳ ಶಾಹಿಯು ತನ್ನ ರಕ್ಷಣೆಗಾಗಿ ಪುರೋಹಿತ ವರ್ಗವನ್ನು ಪೋಷಿಸಿಕೊಂಡು ಬರುತ್ತದೆ. ಈ ಎರಡೂ ವರ್ಗಗಳು ಜಗತ್ತಿನ ಸಂಪತ್ತಿನ ಮೇಲೆ ಹಿಡಿತ ಸಾಧಿಸಲೆಂದು ದುಡಿಯುವ ವರ್ಗದ ಮೇಲೆ ಸವಾರಿ ಮಾಡುತ್ತದೆ.

ಇದು ಕದ್ದವರ ಮತ್ತು ಕುದ್ದವರ ನಡುವಿನ ಹೋರಾಟವಾಗಿದೆ.

ಶ್ರಮಿಕರನ್ನು ನಿಯಂತ್ರಿಸಲೆಂದು ಧರ್ಮ, ಸಂಸ್ಕೃತಿ, ದೇಶಪ್ರೇಮ ಎಂಬಿತ್ಯಾದಿ ಭಾವನಾತ್ಮಕ ಅಂಶಗಳನ್ನು ಹರಿ ಬಿಡುತ್ತದೆ. ಮುಗ್ಧರ ಮನದಲ್ಲಿ ಧರ್ಮದ ಅಮಲೇರಿಸಿ ಬಿಡುತ್ತದೆ. ಹೀಗೆ ಅಮಲೇರಿದ ಮಠಾಧೀಶರು, ಕೆಲವು ಮುಖಂಡರಿಂದ ಬೊಗಳಲು ಹಚ್ಚುತ್ತಾರೆ.

ಅವು ಮೈ ಮೇಲೆ ಖಬರು ಇಲ್ಲದಂತೆ ತಾವು ಕುಳಿತ ಟೊಂಗೆಯನ್ನೆ ಕಡಿಯುತ್ತ ಮರದ ಸಹಿತ ಧರಾಶಾಯಿ ಆಗುತ್ತವೆ. ಇದೆಲ್ಲವೂ ಸನಾತನಿ ಅಧಿಕಾರಸ್ಥರ ಕುತಂತ್ರ.

ಪ್ರಶ್ನೆ೫- ಹಿಂದುತ್ವಕ್ಕೆ ಹೊಂದದವರಿಗೆ ಧಾರ್ಮಿಕ ಸ್ವಾತಂತ್ರ್ಯ ವಿದೆಯೇ? ಇದಕ್ಕೆ ನಾವೇನು ಮಾಡಬೇಕು?

ಉತ್ತರ- ದೇಶದಲ್ಲಿ ಸಧ್ಯಕ್ಕೆ ಅಘೋಷಿತ ತುರ್ತುಪರಿಸ್ಥಿತಿ ಇದೆ. ಹಿಂದುತ್ವದ ಗುಲಾಮಗಿರಿ ಒಪ್ಪದವರನ್ನು ನಿರ್ನಾಮಿಸುವ ದುಷ್ಟತನಕ್ಕೆ ಇಳಿದಿದ್ದಾರೆ. ಅವರ ದುಷ್ಟ ಕಾರ್ಯಾಚಾರಣೆ ವಿರುದ್ಧ ತಾತ್ವಿಕ ದಂಗೆ ಸಾರುವದೊಂದೆ ಪರಿಹಾರ. ಸನಾತನಿಗಳು ತಮ್ಮಲ್ಲಿನ ಕೌರ್ಯ ಬಿಟ್ಟು ಮಾನವೀಯತೆಯತ್ತ ಹರಿದು ಬರುವಂತಾಗಬೇಕು. ಶರಣ ತತ್ವವೆಂಬ ಪರುಷದ ಬಲದಿಂದ ಅವರ ವೈದಿಕತೆಗೆ ತೀಲಾಂಜಲಿ ಇಡುವಂತಾಗಬೇಕು.

ಪ್ರಶ್ನೆ೬- ಈ ರೀತಿಯ ದಾಳಿ ಮುಂದುವರೆದರೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಕಳೆದುಕೊಳ್ಳುತ್ತೇವೆಯೇ?

ಈ ದೇಶದ ಬಹುತ್ವ ಸಂಸ್ಕೃತಿಯ ಬಹಸಂಖ್ಯಾತ ಜನತೆ ಅದಕ್ಕೆ ಆಸ್ಪದ ನೀಡಲಾರರು. ಅವರು ಮೇಲುಗೈ ಸಾಧಿಸಿದಂತೆ ಕಂಡರೂ ಅದು ತಾತ್ಕಾಲಿಕ. ಭಂಡು ಮಾಡುವ ಬ್ರಾಹ್ಮಣಶಾಹಿಗಳ ಆಟಾಟೋಪ ಬಹಳ ದಿನ ನಡೆಯುವುದಿಲ್ಲ. ಭಾರತದ ಸಂವಿಧಾನಕ್ಕೆ ಎಲ್ಲರ ಹಿತಕಾಯುವ ಧಾರಣ ಶಕ್ತಿ ಇದೆಯಾದ್ದರಿಂದ ಅಷ್ಟು ಸುಲಭದಲ್ಲಿ ಹಣಿಯಲಾಗದು.

ಜನತೆ ಶತಮಾನಗಳ ಸಂಘರ್ಷದಿಂದ ಬಂದಿರುವ ಮೂಲಭೂತ ಹಕ್ಕುಗಳನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಡಲಾರರು. ಸನಾತನಿಗಳ ದುಷ್ಟ ಹುನ್ನಾರು ಜನಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ ಅಷ್ಟೆ. ಬಹುಸಂಖ್ಯಾತರಿಗೆ ಮನವರಿಕೆ ಮಾಡಿಸಬೇಕಾದ ಹೊಣೆಗಾರಿಕೆ ಪ್ರಜ್ಞಾವಂತರ ಮೇಲಿದೆ.

ಭಾರತದ ಸಂವಿಧಾನವನ್ನು ಅಷ್ಟು ಸುಲಭದಲ್ಲಿ ಹಣಿಯಲಾಗದು.

ಪ್ರಶ್ನೆ ೭- ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಕೆಟ್ಟ ಭಾಷೆ ಬಳಸುತ್ತಿದ್ದಾರೆ.

ಹೌದು. ನಾಗರಿಕರು ಅವರ ಉದ್ಧಟತನವನ್ನು ಗಮನಿಸುತ್ತಿದ್ದಾರೆ. ತಲೆಯಲ್ಲಿ ವಿಚಾರವಿಲ್ಲದವರ ಬಾಯಲ್ಲಿ ಬೈಗುಳ ಮಾತ್ರ ಇರುತ್ತವೆ. ಹಿಂದುತ್ವವಾದಿಗಳ ಭಾಷೆಯು ಅವರ ಹತಾಶ ಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿ ಎಂದರೆ ಇಂಥ ಎಲ್ಲ ವಿಧ್ವಂಸಕ ಕೆಲಸಗಳನ್ನು ಅವರು ಶೂದ್ರ ಖಾಲಿ ತಲೆಗಳಿಂದಲೆ ಮಾಡಿಸುತ್ತಾರೆ.

ಕಾರಣ ಈ ಶೂದ್ರ ಸಂತತಿ ಮೇಲೆ ಕೇಸಗಳಾಗಿ ಅವರೆ ಕೋರ್ಟು, ಕಚೇರಿ ಅಲೆಯಬೇಕು. ಶೂದ್ರರಿಂದ ಶೂದ್ರರನ್ನು ನಿರ್ನಾಮ ಮಾಡಿಸುತ್ತ ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರೆ. ನಮ್ಮ ಪಡ್ಡೆ ಹುಡುಗರಿಗೆ ಇದನ್ನು ತಿಳಿಸಿ ಹೇಳಬೇಕಾದ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಪ್ರಶ್ನೆ ೮ – ಸಾರ್ವಜನಿಕ ಸಂವಾದದಲ್ಲಿ ಎಲ್ಲರೂ ಸಭ್ಯತೆ ಕಳೆದುಕೊಳ್ಳಬೇಕೆ?

ಯಾವುದೇ ಕಾರಣಕ್ಕೂ ನಮ್ಮವರು ಸಹನೆ ಕಳೆದುಕೊಳ್ಳಬಾರದು. ಅವರ ಭಾಷೆಯಿಂದ ನಾವು ಸಂಯಮ ಕಳೆದುಕೊಂಡು ಉದ್ರೇಕಕಾರಿಯಾಗಿ ವರ್ತಿಸಿ ಕಾನೂನು ಬಾಹಿರ ಕ್ರಿಯೆಗಳಲ್ಲಿ ತೊಡಗಿಕೊಳ್ಳಬೇಕೆಂಬುದೆ ಅವರ ಗುರಿಯಾಗಿರುತ್ತದೆ. ಈ ಟ್ರ್ಯಾಪಿಗೆ ಬೀಳಬಾರದು.

ಮೃದು ವಚನಗಳೆ ಸಕಲ ಜಪತಪಂಗಳಯ್ಯ. ಸದು ವಿನಯವೆ ಸದಾ ಶಿವನೊಲುಮೆಯ್ಯಾ ಎನ್ನುವವರು ನಾವು. ಸನಾತನಿಗಳು ಯಾವತ್ತೂ ಸೌಹಾರ್ದ ಸಂವಾದಕ್ಕೆ ಒಡ್ಡಿಕೊಂಡವರೆ ಅಲ್ಲ. ವಿಚಾರಗಳಿಗೆ ಹೆದರುವ ಮತಿಹೀನರೊಂದಿಗೆ ಸಂವಾದ ಸಾಧ್ಯವಾಗದು. ಅವರ ಫೌಳಿಯಲ್ಲಿ ಸಿಕ್ಕು ಬಿದ್ದಿರುವ ನಮ್ಮವರನ್ನು ಬಿಡಿಸಿ ತರುವುದೆ ಈಗ ನಮ್ಮ ಏಕೈಕ ಗುರಿ.

ಮೃದು ವಚನಗಳೆ ಸಕಲ ಜಪತಪಂಗಳಯ್ಯ.

ಪ್ರಶ್ನೆ ೯- ಈ ವಿವಾದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆಯೆ?

ಉತ್ತರ- ಖಂಡಿತ ಪರಿಣಾಮ ಬೀರುತ್ತದೆ. ಬಲಪಂಥೀಯ ರಿಗೆ ಇಂಥ ವಿವಾದಗಳಿಂದ ಜನರು ತಿಳಿಗೊಂಡು ತಮ್ಮ ಕೈಯಿಂದ ಕಾಲಾಳುಗಳು ತಪ್ಪಿ ಹೋಗುತ್ತಾರೆ ಎಂಬ ಭಯವಿದೆ. ಆದ್ದರಿಂದಲೆ ಅವರು ಈ ವಿವಾದಗಳನ್ನು ನಕಾರಾತ್ಮಕ ನೆಲೆಯಲ್ಲಿ ಪಸರಿಸಬೇಕೆಂದು ಬಯಸುತ್ತಾರೆ. ನಾವು ಅದನ್ನು ಸಕಾರಾತ್ಮಕ ದಿಕ್ಕಿಗೆ ತಿರುಗಿಸಿ ಶರಣ ತತ್ವಗಳ ಪ್ರಸಾರಕ್ಕಾಗಿ ಬಳಸಿಕೊಳ್ಳಬೇಕು. ಇದರಿಂದ ನಮಗೆ ಹಿನ್ನಡೆಯಾಗುತ್ತದೆ ಎಂಬ ಭಯ ಬೇಡ. ಇತಿಹಾಸದಲ್ಲಿ ಇಂಥ ವಿವಾದಗಳು ಎದ್ದಾಗಲೆಲ್ಲ ಸನಾತನಿಗಳಿಗೆ ಸೋಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
3 Comments
  • Akka, I agree in principle every word of yours.
    My Pranams to Smt. Neela akka.

  • ಅಕ್ಕನವರ ನೇರಮಾತಿನ ಚಾಟಿಯೇಟು ನಮ್ಮ ಯುವಸಮುದಾಯಕ್ಕೆ ತಿಳಿಯುವಂತೆ ಮನವರಿಕೆ ಮಾಡಬೇಕಾಗಿದೆ. ಅರ್ ಎಸ್ ಎಸ್ ನವರ ಒಳಹುನ್ನಾರವನ್ನು ಅರುಹಬೇಕು.

  • ಬಸವ ಸಂಸ್ಕೃತಿ ಅಭಿಯಾನ ಒಂದು ಒಳ್ಳೆಯ ಕಾರ್ಯಕ್ರಮ. ಇದರಲ್ಲಿ ಎರಡು ಮಾತಿಲ್ಲ ಆದ್ರೆ ಎಲ್ಲೋ ದಾರಿ ತಪ್ಪಿದೆ ಅನಿಸುತ್ತೆ. ಹ್ಯಾಗೆ ಕಾಂಗ್ರೆಸ್ ಮೋದಿ ವಿರೋಧ ಮಾಡಲು ಹೋಗಿ ದೇಶ ವಿರೋಧಿ ಆಗಿದೆ. ದೇಶ ಉಳಿದರೆ ಧರ್ಮ ಉಳಿಯುತ್ತೆ ಒಂದು ಕಡೆ ಒಂದು ಸಮಾಜ ವಿದ್ಯಾವಂತ ಆಗಿಯೂ ಕೂಡ ದೇಶ ವಿರೋಧಿ ಆಗಿದೆ. ಕಾಂಗ್ರೆಸ್ ಕೃಪಾಪುಷಿತ ಆಗಬೇಡಿ. ನನ್ನ ಕಳಕಳಿಯ ಬೇಡಿಕೆ

Leave a Reply

Your email address will not be published. Required fields are marked *