ಅನುಭಾವ ಎನ್ನುವುದು ಬರೀ ಅಂತರಂಗದ ಪಯಣವಲ್ಲ

ಬೆಂಗಳೂರು

ಇತ್ತೀಚಿಗೆ ಅನುಭಾವ ಮತ್ತು ಅನುಭಾವಿಗಳೆನ್ನುವುದು ಒಂದು ಒಣಪ್ರತಿಷ್ಠೆಯ ವಿಷಯವಾಗಿದೆ. ಅನುಭಾವವುಂದರೆ ಮಾತಾಡುವುದು, ಭಾಷಣ ಮಾಡುವುದು ಎಂದೂ ತಿಳಿದಿದ್ದಾರೆ. ಜೊತೆಗೆ ತಾವೆ ಎಲ್ಲಾ ತಿಳಿದಿದ್ದೆವೆ ಎನ್ನುವ ಅಹಂಮಿಕೆ. ಇಂದು ಅನುಭಾವಿಗಳೆನ್ನುವವರು ಭಾಷಣಕಾರರು ಆಗಿದ್ದಾರೆ. ಭಾಷಣಕಾರರು ಶಬ್ದಪುಂಜಗಳಿಂದ ಜನರನ್ನು ಸಮ್ಮೋಹಿಸುವುದು ಎಂದೂ ಅನುಭಾವವಾಗುವುದಿಲ್ಲ ,ಶ ಅವರು ಎಂದೂ ಅನುಭಾವಿಗಳು ಆಗಲಾರರು. ಅದಕ್ಕೆ ಚೆನ್ನಬಸವಣ್ಣನವರ ಈ ವಚನ

“ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು
ನೆಲದ ಮರೆಯ ನಿಧಾನ ಕಾಣಿರೋ.
ಆನುಭಾವವೆಂಬುದು ಅಂತರಂಗದ ಸಿದ್ದಿ ಕಾಣಿರೋ.
ಅನುಭಾವವೆಂಬುದು ರಚ್ಚೆಯ ಮಾತೆ?
ಆನುಭಾವವೆಂಬುದು ಸಂತೆಯ ಸುದ್ದಿಯೇ?
ಏನೆಂಬೆ ಹೇಳಾ ಮಹಾಘನವ!
ಆನೆಯಮಾನದೊಳಗಿಕ್ಕಿದರಡಗುವುದೆ
ದರ್ಪಣದೊಳಗಡಗುವುದಲ್ಲದೆ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ
ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ದಿ ನೀಚರ ಮೆಚ್ಚ ಕೂಡಲ ಚೆನ್ನಸಂಗಮದೇವ.

ಚೆನ್ನಬಸವಣ್ಣನ ಈ ವಚನ ಇಂದಿನ ಅನುಭಾವಿಗಳೆಂದು ಹೇಳಿಕೊಳ್ಳುವವರಿಗೆ ಹಿಡಿದ ದರ್ಪಣದಂತಿದೆ.

ಅನುಭಾವಿಗಳೆಂದರೆ ತೋರಿಕೆಯ ಹಿರಿತನವನ್ನು ಮೀರಬೇಕಿದೆ. ಬರಿ ಬಹಿರಂಗದ ಆಕರ್ಷಣೆ ಎಂದೂ ಅನುಭಾವಿಯಾಗಲಾರ. ಹಣೆತುಂಬ ವಿಭೂತಿ, ಬಾಯಿ ತುಂಬಾ ಶರಣಾರ್ಥಿ ಹೇಳಿದರೆ ಅನುಭವಿಯಾಗಲಾರ. “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪವಯ್ಯಾ” ಎನ್ನುವುದು ಇವರು ಮರೆತು, ಬರಿ ತೋರಿಕೆಗೆ ಬದುಕುವವ ಎಂದೂ ಅನುಭಾವಿಯಾಗಲಾರ.

“ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು. ಅನುಭಾವಿಲ್ಲದ ಲಿಂಗ ಸಮರಸಕ್ಕೆ ನಿಲುಕದು” ಎನ್ನುವ ವಾಸ್ತವವನ್ನು ಮರೆತು ಅನುಭಾವ ಎನ್ನುವುದು ಬರೀ ಅಂತರಂಗದ ಪಯಣ ಎನ್ನುವ ಅಜ್ಞಾನಿಗಳಿಗೆ ಶರಣರೆ ಉತ್ತರ ಕೊಟ್ಟಿದ್ದಾರೆ.

ಹಿರಿತನದ ಹಂಗು ಮೀರಿ ಹಿರಿತನ ಸಿರಿತನ ಬಡತನವನ್ನು ಸಮ ಸುಖಿಯಾಗಿಸಿಕೊಳ್ಳುವಾತ ಅನುಭಾವಿ. ವಿಷಯ ವಾಸನೆ ಇಲ್ಲದೆ ನಡೆ ನುಡಿ ಒಂದಾಗಿ ಬದುಕಿದಾತ ಅನುಭಾವಿ. ಅನುಭಾವ ಎನ್ನುವುದು ಬರಿ ಒಣ ಮಾತಿನ ಹಿರಿತನವಲ್ಲ.

“ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರಲಿಂಗವನುಪಮ ಸುಖಿ.”

ಅಲ್ಲಮನ ಈ ವಚನ ಓದಿದರೆ ಮೈಪುಳಕಗೊಳ್ಳುತ್ತೆ. ಅನುಭಾವದಿಂದ ಹುಟ್ಟಿತ್ತು ಲಿಂಗ ಎನ್ನುವ ಸಾಲಿಗೆ ಇಂದಿನ ಯಾವ ಅನುಭಾವಿಗಳು ಸಮಬಾರರು.

ಆದರೆ ಇಂದಿನ ಅನುಭಾವಿಗಳು ಸಹ ಕಮರ್ಷೀಯಲ್ ಆಗಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಯಾವುದು ಬಿಡದೆ ವಯಸ್ಸಾದ ಮೇಲೆ ನಾನು ಅನುಭಾವಿ ಎನ್ನುವ ಡಾಂಭಿಕರನ್ನು ನೋಡಿ ಬಸವಣ್ಣ ಹೇಳಿದ ಈ ವಚನ.

“ನೂರನೋದಿ ನೂರ ಕೇಳಿ ಏನು?
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ ಡಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.”

ಬದುಕಿನ ವಾಸ್ತವದಲ್ಲಿ ಯಾವುದನ್ನು ಪಾಲಿಸದೆ ಅರಿವು ಆಚಾರಗಳಿಗೆ ತಾಳವಿಲ್ಲದ ಜಾತಿ ಡಂಬರು ಅನುಭಾವಿಗಳೆ?. ಬದುಕಿನ ವಾಸ್ತವದಲ್ಲಿ ಎಲ್ಲಾ ತಗಲಬಾಜಿಗಳು ಮಾಡಿ , ತಮ್ಮ ಒಳಪಂಗಡ ಮೀರಲಾರದ ಜಾತಿ ಡಂಬರು ತಾವು ಅನುಭಾವಿಗಳೆಂದರೆ ಮೆಚ್ಚುವವನೆ ನಮ್ಮ ಸಂಗಯ್ಯಾ.

ಅಂತರಂಗದಲ್ಲಿ ಭವಿನೊಳಗೊಂಡು, ಬಹಿರಂಗದಲ್ಲಿ ಭಕ್ತಿನೊಳಗೊಳ್ಳುವ, ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ , ಪ್ರಾಣಗುಣಾದಿಗಳ ಕಳೆದಿದ್ದಡೆ ಅವರೆ ಹೇಗೆ ಅನುಭಾವಿಗಳಾಗುತ್ತಾರೆ?. ಅನುಭಾವ ಎನ್ನುವುದು ಅಂತರಂಗದ ಪಯಣ ಎನ್ನುವವರ ಬದುಕಿನ ಬಹಿರಂಗದ ನಡೆ ಹೇಗೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಅನುಭಾವವೆಂದರೆ ಅಂತರಂಗದ ಬೆಳಕು , ಬಹಿರಂಗದ ಕ್ರಿಯೆ . ಅನುಭಾವ ಎಂದರೆ ಆತ್ಮದ ಅರಿವು. ಇದನ್ನೆಲ್ಲ ಮರೆತು ನಾವು ಅನುಭಾವಿಗಳು ಅಂದರೆ ಶರಣರಿಗೆ ನಾವು ಮಾಡುವ ಆತ್ಮಘಾತುಕ.

ಅದಕ್ಕೆ ಚೆನ್ನಬಸವಣ್ಣನ ಹೇಳಿದ. ಅನುಭಾವ ಎಂದರೆ ರೋಷದ ಮಾತಲ್ಲ, ಅದು ಆತ್ಮಾವಲೋಕನದ ಮಾತು. ಆನುಭಾವವೆಂದರೆ ಅದು ಸಂತೆಯ ಸುದ್ದಿಯಲ್ಲ, ಅನುಭಾವವೆಂದರೆ ಅದು ಬೀದಿಯಲ್ಲಿ ಸಿಗುವ ಸಾಮಾನು ಅಲ್ಲ, ಅನುಭಾವವೆಂದರೆ ಕಂಡ ಕಂಡಲ್ಲಿ ಗೋಷ್ಠಿಯಲ್ಲ, ಬಂದ ಬಂದಲ್ಲಿ ಪ್ರಸಂಗ ಮಾಡುವ ನಿರ್ಬುದ್ದಿ ನೀಚತನವಲ್ಲ. ಅನುಭಾವವೆಂದರೆ ಅದು ಮಹಾಘನ. ಇಂತಹ ಮಹಾಘನದ ಅರಿವು ಇಲ್ಲದೆ ತಮ್ಮ ತಮ್ಮ ಒಣ ಸ್ವಾರ್ಥಕ್ಕೆ ಅನುಭಾವಿಗಳ ಒಕ್ಕೂಟ ಎನ್ನುವುದು ಸ್ವಾರ್ಥ ಸಾಧನೆಯ ಮಾರ್ಗವಲ್ಲದೆ ಬೇರೆನೂ ಅಲ್ಲ. ಅಂತರಂಗ ಬಹಿರಂಗ ಆತ್ಮಸಂಗ ಈ ತ್ರಿವಿಧ ಭೇದ ಮಾಡದೆ, ಸಮರತಿ , ಸಮಸುಖ, ಸಮಕಳೆ ಒಪ್ಪಿ ನದಿಯಲ್ಲಿ ನದಿ ಬೆರೆಂತಾಗುವವವನೆ ಅನುಭಾವಿಯೆ, ಹೊರತು ಮಾತಿನ ಬಂಟರು ಎಂದೂ ಅನುಭಾವಿಗಳು ಆಗಲಾರರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
2 Comments
  • ನಿಜ…..ಮಾತಿನ ಡಾಂಭಿಕತೆ , ರಂಜನೆ ಮತ್ತು ವಿಷಯದ ನಿರರ್ಗಳ ಭಾಷಣಗಳು ಅನುಭಾವಕ್ಕೆ ಸಮ ಬಾರವು…ಶರಣರ ನಡೆ – ನುಡಿ ಸಿದ್ಧಾಂತದ ತಳಹದಿಯ ಮೇಲೆ ಅನುಭಾವ ಹೊರತು ನಡೆ ಇಲ್ಲದ ನುಡಿ ಅರಿವಿಂಗೇ ಹಾನಿ ಅಷ್ಟೇ…. ಇಂದಿನ ಬಸವ ಅನುಯಾಯಿಗಳು ಎಚ್ಚೆತ್ತುಕೊಳ್ಳಬೇಕು.

  • ಈ ಲೇಖನದಲ್ಲಿ ಉಲ್ಲೇಖ ಮಾಡಿದ ಚನ್ನಬಸವಣ್ಣ ನವರ ವಚನದ ನಾಲ್ಕನೇ ಸಾಲಿನಲ್ಲಿಯೇ “”ಆನುಭಾವವೆಂಬುದು ಅಂತರಂಗದ ಸಿದ್ದಿ ಕಾಣಿರೋ.”” ಎನ್ನುವ ಸಾಲು ಇದೆ. ಲೇಖನದ ಟೈಟಲ್ “ಅನುಭಾವವೆಂಬುದು ಬರೀ ಅಂತರಂಗದ ಪಯಣವಲ್ಲ ” ಎಂದು ಹೇಳಿದರೆ ವಚನದ ಭಾವಕ್ಕೆ ವಿರುದ್ಧ ಹೇಳಿದಂತೆ ಅಲ್ಲವೇ?.?. ವಚನಕಾರರು ಅನುಭಾವವೇ ಇಲ್ಲ ಎಂದು ಹೇಳಿಲ್ಲ. ಆ ಮಾರ್ಗದಲ್ಲಿ ಸಾಗುವಾಗ ಬರುವ ತೋರಿಕೆಯ ನಡೆಗಳನ್ನು ವಿಡಂಬಿಸುತ್ತಾರೆ. ಅನುಭಾವ ಎನ್ನುವದು ಆಂತರಿಕ ಬೆಳಕು ಬಹಿರಂಗದ ಕ್ರಿಯೆಯಲ್ಲಿ ಅರಳಿದ ಉಪಮಾತೀತ ನಿಲುವು. ಶರಣ ತತ್ವ ಕೇವಲ ಸಾಮಾಜಿಕ ಆಂದೋಲನ ಅಲ್ಲಿ ಆಧ್ಯಾತ್ಮವೇ ಇಲ್ಲ, ಎನ್ನುವ ಧೋರಣೆ ಉಳ್ಳವರು ಮಾತ್ರ ಶರಣರ ಎಚ್ಚರಿಕೆಯ ಮಾತುಗಳನ್ನು ಈ ರೀತಿ ಬಳಸಿಕೊಳ್ಳಲು ಸಾಧ್ಯ. ಪ್ರತಿ ದಿನ ವಚನಗಳ ಮಧ್ಯದಲ್ಲಿ ಇರುವವರ ಭಾವ ಪಕ್ವತೆಗೆ ನಿಲುಕುವಂತದ್ದು ಆ ಶಬ್ದ. ಒಬ್ಬರಲ್ಲಿ ನೆಲೆಯಾದ ಅನುಭಾವ ಸಂಪತ್ತನ್ನು ಹೊರಗಿನಿಂದ ಇನ್ನೊಬ್ಬರು ನೋಡಲು, ಅಳೆಯಲು ಸಾಧ್ಯವಾಗದ ಮಹಾಪ್ರಸಾದವೇ ಅನುಭಾವ.

Leave a Reply

Your email address will not be published. Required fields are marked *