50 ವರ್ಷ ಪೂರೈಸಿದ ಯಡಿಯೂರು ಸಿದ್ಧಲಿಂಗೇಶ್ವರ ಸ್ಮರಣಾ ಪಾದಯಾತ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಗ್ಗೇರಿ

ಯಡಿಯೂರು ಸಿದ್ಧಲಿಂಗೇಶ್ವರರ ಸ್ಮರಣೆಯಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ಪಾದಯಾತ್ರೆ ಐವತ್ತು ವರ್ಷ ಪೂರೈಸಿದೆ. ಹಲವಾರು ಪೂಜ್ಯರು ಹಾಗೂ ನೂರಾರು ಬಸವ ಭಕ್ತರು ಮಂಗಳವಾರ ಕಗ್ಗೇರಿ ತಲುಪಿ ಈ ವರ್ಷದ ಪಾದಯಾತ್ರೆಯನ್ನು ಸಂಪೂರ್ಣಗೊಳಿಸಿದರು.

ನವಲಗುಂದದ ಶಲವಡಿಯಲ್ಲಿ 15 ದಿನಗಳ ಹಿಂದೆ ಗದಗಿನ ಪೂಜ್ಯ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿಯ ಸಾನಿಧ್ಯದಲ್ಲಿ ಉದ್ಘಾಟನೆಗೊಂಡ ಪಾದಯಾತ್ರೆಯಲ್ಲಿ 200 ಭಕ್ತಾದಿಗಳು ಹೊರಟರು.

ಧಾರವಾಡ, ಹರಿಹರ, ದಾವಣಗೆರೆ, ತುರುವೇಕೆರೆ, ಹುಳಿಯಾರುಗಳ ಮಾರ್ಗದಲ್ಲಿ ಸಾಗಿ ಯಡಿಯೂರು ಮುಟ್ಟುವಲ್ಲಿ ಪಾದಯಾತ್ರಿಗಳ ಸಂಖ್ಯೆ 500ಕ್ಕೆ ಏರಿತ್ತು. ನಂತರ ಯಡಿಯೂರಿನಿಂದ ಪಾದಯಾತ್ರಿಗಳು ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಗ್ಗೇರಿ ತಲುಪಿದರು. ಜನರ ಮನಸ್ಸಿನಲ್ಲಿ ನಿಂತಿರುವ ಹುತ್ತದೊಳಗಿನ ಸಿದ್ಧಲಿಂಗೇಶ್ವರರ ಚಿತ್ರ ಕಗ್ಗೇರಿ ಮೂಲದ್ದು.

ಐವತ್ತು ವರ್ಷಗಳ ಹಿಂದೆ ಪಾದಯಾತ್ರೆಯನ್ನು ನವಲಗುಂದ ಗವಿಮಠದ ಲಿಂಗೈಕ್ಯ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಶುರು ಮಾಡಿದರು. ಈಗಿನ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಕಾಳಜಿಯಿಂದ ಪಾದಯಾತ್ರೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಉತ್ತರ ಕರ್ನಾಟಕದ ಸಾವಿರಾರು ಭಕ್ತರು ವಿಶೇಷವಾಗಿ ನವಲಗುಂದ, ಶಲವಡಿ, ಬಾದಾಮಿ ರೋಣ, ಧಾರವಾಡ ಭಾಗಗಳ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ, ನವಲಗುಂದದ ಪೂಜ್ಯ ಬಸವಲಿಂಗ ಸ್ವಾಮೀಜಿ, ಅಕ್ಕಿ ಆಲೂರಿನ ಪೂಜ್ಯ ಶಿವಬಸವ ಸ್ವಾಮೀಜಿ, ಹಾಗೂ ತುಪ್ಪದಕುರಟ್ಟಿ, ಕಗ್ಗೆರಿಯ ಪರಮಪೂಜ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

“ಬಸವಾದಿ ಶಿವ ಶರಣರ ವಚನ ಸಾಹಿತ್ಯವನ್ನ ಪುನರುಜ್ಜೀವನಗೊಳಿಸಿ ಈಗಿನ ಸಮಾಜಕ್ಕೆ ಮುಟ್ಟಿಸೋ ಮಹತ್ವದ ಕೆಲಸವನ್ನು ಸಿದ್ಧಲಿಂಗೇಶ್ವರರು ಮಾಡಿದರು. ಅವರ ಸ್ಮರಣೆಯಲ್ಲಿ ನಡೆಯುವ ಪಾದಯಾತ್ರೆ 50 ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ,” ಎಂದು ಅಲ್ಲಮಪ್ರಭು ಸ್ವಾಮೀಜಿ ಬಸವ ಮೀಡಿಯಾಗೆ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
1 Comment
  • ೧೨ ನೇ ಶತಮಾನದ ನಂತರ ಹುದುಗಿ ಹೋಗಿದ್ದ ಲಿಂಗಾಯತ ಧರ್ಮವನ್ನು ಪುನರುಜ್ಜೀವನಗೊಳಿಸದ್ದು ೧೬ ನೇ ಶತಮಾನದಲ್ಲಿ ಯಡೆಯೂರಿನ ತೋಂಟದ ಸಿದ್ದಲಿಂಗೇಶ್ವರರು, ಅವರಿಗೆ ಎರಡನೇ ಅಲ್ಲಮಪ್ರಭುವೆಂದೂ ಹೆಸರು, ಅವರ ವಚನಗಳೂ ಅಷ್ಟೇ ಪ್ರಖರ ವೈಚಾರಿಕತೆ ಹೊಂದಿದೆ, ೫೦ ವರ್ಷ ಪಾದಯಾತ್ರೆ ಪೂರೈಸಿದ ಈ ಸಂಧರ್ಬದಲ್ಲಿ ನವಲಗುಂದ ಭಾಗದಿಂದ ಮತ್ತು ಉತ್ತರ ಕರ್ನಾಟಕದಿಂದ ಪಾದಯಾತ್ರೆಯಲ್ಲಿ ನಡೆದು ಬರುವ ಎಲ್ಲ ಶರಣರಿಗೂ ಶರಣು ಶರಣಾರ್ಥಿಗಳು. ವಚನ ಸಾಹಿತ್ಯ ಶರಣರ ಆಶಯಗಳು ಎಲ್ಲರ ಮನ ಮನೆ ಮುಟ್ಟಲಿ.

Leave a Reply

Your email address will not be published. Required fields are marked *