ಕೊಪ್ಪಳ:
ಕೊಪ್ಪಳದ ಶರಣತತ್ವ ಅನುಭಾವಿಗಳಾದ ಡಾ. ಸಂಗಮೇಶ ಕಲಹಾಳ ಹಾಗೂ ಸರೋಜಿನಿ ಅವರ ಸುಪುತ್ರ “ಸಾಗರ” ಜೊತೆ ಕೊಟಬಾಗಿಯ ಶರಣ ಮಹೇಶ ಮಡಿವಾಳರ ಹಾಗೂ ನಿರ್ಮಲಾ ಅವರ ಸುಪುತ್ರಿ “ಮೇಘಾ” ಅವರ ಕಲ್ಯಾಣ ಮಹೋತ್ಸವ ನವೆಂಬರ್ 17, 2025ರ ಸೋಮವಾರ ಕೊಪ್ಪಳದ ಮಧುಶ್ರೀ ಗಾರ್ಡನ್ ನಲ್ಲಿ ಲಿಂಗಾಯತ ತತ್ವದ ನಿಜಾಚರಣೆಯಂತೆ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆ 8 ಗಂಟೆಗೆ ಇಲಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತಪ್ಪಗಳು ಹಾಗೂ ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಪೂಜ್ಯ ಬಸವ ಮಾಚಿದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಷ್ಟಲಿಂಗದ ಶಿವಯೋಗ ನಡೆಯಿತು. ಕಲಹಾಳ ಹಾಗೂ ಮಡಿವಾಳರ ಕುಟುಂಬದ ಸದಸ್ಯರು, ಕೊಪ್ಪಳ ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಸದಸ್ಯರು ಭಾಗವಹಿಸಿದರು.

ಮಧ್ಯಾಹ್ನ ನೂತನ ದಂಪತಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ನಂತರ ಕಲಹಾಳ ಹಾಗೂ ಮಡಿವಾಳ ಕುಟುಂಬದ ಹಿರಿಯರೊಂದಿಗೆ ಬಸವಗುರುವಿನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ನೂತನ ದಂಪತಿ ‘ಸಾಗರ’ ಮತ್ತು ‘ಮೇಘಾ’ ಅವರು ವಚನ ಸಾಕ್ಷಿಯಂತೆ ಪರಸ್ಪರ ಹಾರ, ರುದ್ರಾಕ್ಷಿಯನ್ನು ಬದಲಾಯಿಸಿಕೊಂಡರು. ಪೂಜ್ಯ ಮಹಾಂತಪ್ಪಗಳು ಲಿಂಗಾಯತ ಧರ್ಮದ ವಚನ ಪ್ರತಿಜ್ಞೆಯನ್ನು ಬೋಧಿಸಿದರು. ನೂತನ ದಂಪತಿ ಸಾರ್ವಜನಿಕವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶರಣ ಸಾಹಿತಿ ರಂಜಾನ ದರ್ಗಾ ಅವರು ಮಾತನಾಡಿ, ಧರ್ಮಸಂಸ್ಥಾಪಕ ಗುರು ಬಸವಣ್ಣನವರು ಲಿಂಗಾಯತ ಧರ್ಮದಲ್ಲಿ ಸನ್ಯಾಸಿಗಳಿಗಿಂತ ಸಂಸಾರಿಗಳ ಬಗ್ಗೆ ಹೆಚ್ಚು ಕಾಳಜಿ ತೋರಿದ್ದನ್ನು ತಿಳಿಸಿದರು. ಅಭೂತಪೂರ್ವ ನೆಲೆಯಲ್ಲಿ ಸಂಗಮೇಶ ಕಲಹಾಳ ಶರಣರು ಈ ಕಲ್ಯಾಣ ಮಹೋತ್ಸವವನ್ನು ಮಾಡಿದ್ದಾರೆ ಎಂದು ಹಿತನುಡಿದರು.

ಕಲಹಾಳ ಮತ್ತು ಮಡಿವಾಳ ಕುಟುಂಬದವರು ಚರಿತ್ರೆಯಲ್ಲಿ ದಾಖಲಾಗುವಂತಹ, ಶರಣ ಧರ್ಮವನ್ನು ಪ್ರತಿನಿಧಿಸುವಂತಹ ಕಲ್ಯಾಣ ಮಹೋತ್ಸವವನ್ನು ನಿಜಾಚರಣೆಯ ಮೂಲಕ ನೆರವೇರಿಸಿದರು ಎಂದು ಸಾನಿಧ್ಯ ವಹಿಸಿದ್ದ ಇಳಕಲ್ಲ ಗುರುಮಹಾಂತಪ್ಪಗಳು ಪ್ರಶಂಸಿಸಿದರು.

ಕಲ್ಯಾಣ ಮಹೋತ್ಸವದ ಸಮ್ಮುಖವನ್ನು ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಚಿತ್ರದುರ್ಗ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ವಹಿಸಿದ್ದರು.
ವೇದಿಕೆ ಮೇಲೆ ಮಕ್ಕಳಿಂದ ವಚನನೃತ್ಯ, ರೂಪಕ, ವಚನ ಗಾಯನ ಕಾರ್ಯಕ್ರಮಗಳು ನಡೆದು ಎಲ್ಲರ ಗಮನಸೆಳೆದವು. ಮಲ್ಲಯ್ಯ ಗಣಾಚಾರಿ ಕಾರ್ಯಕ್ರಮ ನಿರೂಪಿಸಿದರು.
ಕುಷ್ಟಗಿ ಮಾಜಿ ಶಾಸಕ ಕೆ. ಶರಣಪ್ಪ, ಚಿಂತಕ ಅಶೋಕ ಬರಗುಂಡಿ, ಡಾ. ರಾಜಶೇಖರ ನಾರನಾಳ, ಹೇಮಯ್ಯಸ್ವಾಮಿ ಕಂಪ್ಲಿ, ಅರ್ಚನಾ ಸಸಿಮಠ, ಹನುಮೇಶ ಕಲ್ಮಂಗಿ, ಗುಡದಪ್ಪ ಹಡಪದ, ವಿಶ್ವಗುರು ಬಸವೇಶ್ವರ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು, ಕಲಹಾಳ, ಮಡಿವಾಳರ ಕುಟುಂಬದ ಬಂಧುಗಳು, ಮಿತ್ರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.

16 ರವಿವಾರ ಸಂಜೆ ನಿಶ್ಚಿತಾರ್ಥ ಕಾರ್ಯಕ್ರಮ ಸಹ ಬಸವತತ್ವದಂತೆ ನಡೆಯಿತು. ಕಾರ್ಯಕ್ರಮದಲ್ಲಿ ಪೂಜ್ಯ ಗುರುಮಹಾಂತಪ್ಪ ಸ್ವಾಮೀಜಿ ಅನುಭಾವ ನೀಡಿದರು.

ಇಂತಹ ವಚನಕಲ್ಯಾಣ ಮಹೋತ್ಸವ ಗಳು ಎಲ್ಲರಿಗೂ ಮಾದರಿ, ವಿವಾಹಗಳು ಹೀಗೆ ವಚನ ಪಧ್ದತಿಯಧ್ದಂತೆಯೇ ನಡೆಯಬೇಕು, ಅದು ಹೊಸ ಜೀವನ ಪ್ರಾರಂಭಿಸುವ ದಂಪತಿಗಳಿಗೆ ಕಾಯಕ ಶ್ರಧ್ದೆ, ಸರಳ ಜೀವನ, ಮೌಡ್ಯ ಎದುರಿಸುವ ವೈಚಾರಿಕತೆಯನ್ನು ಕಲಿಸುತ್ತದೆ. ನೂತನ ದಂಪತಿಗಳಿಗೆ ಅಭಿನಂದನೆಗಳು, ಕಲಹಾಳ ಕುಟುಂಬದವರಿಗೂ ಹಾಗೂ ಎಲ್ಲ ಪೂಜ್ಯರಿಗೂ ಅಭಿನಂದನೆಗಳು.