ವಚನ ಮಂಟಪ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ, ಸಾಧಕರಿಗೆ ಸತ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಕನ್ನಡ ಶಾಲೆ ಉಳಿವಿಗೆ ಇಚ್ಛಾಶಕ್ತಿ ಅವಶ್ಯಕ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಎಂಟನೇ ವಚನ ಮಂಟಪ, ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಶಾಲೆ ಉಳಿಸಿ, ಬೆಳೆಸುವ ಇಚ್ಛಾಶಕ್ತಿ ರಾಜಕಾರಣಿಗಳಲ್ಲಿರಬೇಕು. ಗಡಿ ಭಾಗದಲ್ಲಿ ಕನ್ನಡವನ್ನು ಸಮೃದ್ಧವಾಗಿ ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಈ ಭಾಗದಲ್ಲಿ ಕನ್ನಡದ ಉಳಿವಿಗೆ ಡಾ. ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡ ಕಾರ್ಯಗಳಿಗೆ ಸದಾ ಕಂಕಣ ಬದ್ಧವಾಗಿದೆ ಎಂದು ತಿಳಿಸಿದರು.

ನೇತೃತ್ವ ವಹಿಸಿ ಮಾತನಾಡಿದ ಹುಲಸೂರಿನ ಶಿವಾನಂದ ಸ್ವಾಮೀಜಿ, ಮಹಾಸಭಾ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿ ಹೆಚ್ಚಾಗಿದ್ದು, ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಪ್ರಸ್ತುತ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಮೊಬೈಲ್‍ನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಸದ್ಯ ಹೆಚ್ಚಿನವರು ಕನ್ನಡ ಮಾತನಾಡುವಾಗ ಹೆಚ್ಚು ಇಂಗ್ಲಿಷ್ ಪದ ಬಳಸುತ್ತಿದ್ದಾರೆ. ಅಚ್ಚ ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ. ಕನ್ನಡ ಉಳಿದರೆ ವಚನಗಳು ಉಳಿಯುತ್ತವೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿದರು. ಸಾಹಿತಿ ಡಾ. ರೇಣುಕಾ ಎಂ. ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಪತ್ರಕರ್ತ ಸದಾನಂದ ಜೋಶಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧನರಾಜ ದಶರಥ, ಶ್ರೀಕಾಂತ ಭವಾನಿ, ಬಸವಚೇತನ ವೈಜನಾಥ, ಸಿದ್ರಾಮ ಶಂಕರೆಪ್ಪ, ಸೈಯದ್ ಮುಜೀಬ್ ಅಹಮ್ಮದ್, ಶಿವಕುಮಾರ ತುಂಗಾ, ಲೋಕೇಶ ಪ್ರಭುಶೆಟ್ಟಿ, ಸ್ವರೂಪರಾಣಿ ಪಾಟೀಲ, ಡಾ. ಸುನೀತಾ ಕೂಡ್ಲಿಕರ್, ಡಾ. ಶ್ರೇಯಾ ಮಹೇಂದ್ರಕರ, ಮಲ್ಲಮ್ಮ ಮಾಧವರಾವ್, ರಾಮಯ್ಯ ರಾಮಚಂದ್ರ, ಬಸಪ್ಪ ಭದಾಡೆ, ಅರ್ಜುನರಾವ ಕಾಂಚೆ, ಅನಿಲಕುಮಾರ ದೇಶಮುಖ, ಶ್ರಾವಣಕುಮಾರ ಮೇತ್ರೆ ಅವರನ್ನು ಸನ್ಮಾನಿಸಲಾಯಿತು.

ಸ್ವರ್ಣ ಕನ್‍ಸ್ಟ್ರಕ್ಷನ್ಸ್ ಮುಖ್ಯಸ್ಥ ವೀರಶೆಟ್ಟಿ ಮಣಗೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ವಚನ ಚಾರಿಟಬಲ್ ಸೋಸೈಟಿ ಅಧ್ಯಕ್ಷ ಶಿವಶಂಕರ ಟೋಕರೆ, ರಾಷ್ಟ್ರೀಯ ಬಸವ ದಳದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ಪಾಟೀಲ ಮರಕಲ್, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ಉಷಾ ಮಿರ್ಚೆ, ವೀರಭದ್ರಪ್ಪ ಬುಯ್ಯಾ, ವಿಜಯಕುಮಾರ ಸೋನಾರೆ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದ ಶಿವಕುಮಾರ ಪಾಂಚಾಳ ನಾಡಗೀತೆ ಹಾಡಿದರು. ಬಾಬುರಾವ್ ದಾನಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಜಯದೇವಿ ಯದಲಾಪುರೆ ವಂದಿಸಿದರು.

ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷೆ ಶಾಂತಾ ಜೈರಾಜ ಖಂಡ್ರೆ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *