‘ಕನ್ನಡ ಸಂಸ್ಕೃತಿ ಬಿತ್ತುವ ಮಕ್ಕಳ ವಚನ ಮೇಳ ರಾಜ್ಯದ ಎಲ್ಲೆಡೆ ನಡೆಯಲಿ’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

‘ಇಂಗ್ಲಿಷ್ ಮಾಧ್ಯಮ ವಿಜೃಂಭಿಸುತ್ತಿರುವಾಗ ವಚನಗಳ ಸ್ಪರ್ಧೆ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಬಿತ್ತುವ ಮಕ್ಕಳ ವಚನ ಮೇಳ ರಾಜ್ಯದ ಎಲ್ಲೆಡೆ ನಡೆಯಲಿ’ ಎಂದು ಶರಣ ಸೇವಾ ಸಮಾಜದ ಅಧ್ಯಕ್ಷ ಎಂ.ಎಸ್. ನಟರಾಜ್‌ ಹೇಳಿದರು.

ವಚನಜ್ಯೋತಿ ಬಳಗವು ಕಲಾ ಗ್ರಾಮದಲ್ಲಿ ಆಯೋಜಿಸಿರುವ ಏಳು ದಿನಗಳ ಮಕ್ಕಳ ವಚನ ಮೇಳವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಮ್ಮ ತೊದಲು ನುಡಿಯಲ್ಲಿ ವಚನ ಹೇಳುವುದು ಮತ್ತು ಸಾವಿರಾರು ಮಕ್ಕಳ ವಚನ ಕಲರವ ಆಲಿಸುವುದೇ ಬಹುಚೆಂದ ಎಂದು ವಚನಜ್ಯೋತಿ ಬಳಗದ ಸಾಹಸವನ್ನು ಪ್ರಶಂಸಿಸಿದರು.

ವಚನ ಗಾಯನದಿಂದ ಆರಂಭವಾಗಿ ವಚನ ವೇಷಭೂಷಣದವರೆಗೆ 12 ಸ್ಪರ್ಧೆಗಳಲ್ಲಿ 150ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಮಕ್ಕಳ ವಚನ ಮೇಳವು ರಾಜಧಾನಿಯ ವಿಶಿಷ್ಟ ಸಾಂಸ್ಕೃತಿಕ ಉತ್ಸವ ಎಂದು ವಚನಜ್ಯೋತಿ ಬಳಗದ ಅಧ್ಯಕ್ತ ಪಿನಾಕಪಾಣಿ ಹೇಳಿದರು.

ಮಕ್ಕಳ ವಚನ ಮೇಳದ ಸಮಾರೋಪವು ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 10ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಂಸಾಪತ್ರ ನೀಡಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಹೊನ್ನಲಿಂಗಯ್ಯ, ಬಳಗದ ರುದ್ರಪ್ಪ ದೇಸಾಯಿ, ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಮಧು, ಗಂಗಾಧ‌ರ ಮತ್ತಿತರರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *