ಬಾಗಲಕೋಟೆ:
‘ನೀವು ಶಿಕ್ಷಣದಿಂದ ವಂಚಿತರಾಗಿದ್ದೀರಿ. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಇದರಿಂದ ಅಭಿವೃದ್ಧಿ ಹಾದಿಯಲ್ಲಿ ಸಾಗಬಹುದಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಹೇಳಿದರು.
ಜಿಲ್ಲಾ ಮೇದಾರ ಅಲೆಮಾರಿ ಬುಡಕಟ್ಟು ಜನಾಂಗದ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಕರ್ನಾಟಕ ಗುರು ‘ಮೇದ’ರ ಕೇತೇಶ್ವರ ಟ್ರಸ್ಟ್ ಹಾಗೂ ಮೇದಾರ ಕೇತೇಶ್ವರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವಾದಿ ಶರಣ ಮೇದಾರ ಕೇತಯ್ಯನವರ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಿಕ್ಷಣ ಪಡೆದರೆ ಉದ್ಯೋಗವಕಾಶಗಳು ದೊರೆಯಲಿವೆ. ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’.
‘ಬಿದರಿನ ಕಸುಬನ್ನು ಮುಂದುವರೆಸಬೇಕು. ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೇತಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುವುದು’ ಎಂದು ಪಲ್ಲವಿ ಹೇಳಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮೂಲಸೌಕರ್ಯ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ‘12ನೇ ಶತಮಾನದಲ್ಲಿ ಶರಣರು ಸಾರಿದ ಸಮಾನತೆಯನ್ನು ಇಂದಿನ ಸಮಾಜದಲ್ಲಿಯೂ ಸ್ಥಾಪಿಸಬೇಕು. ಶರಣರ ತತ್ವಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.
ಅಖಿಲ ಕರ್ನಾಟಕ ಗುರು ‘ಮೇದ’ರ ಕೇತೇಶ್ವರ ಟ್ರಸ್ಟ್ ರಾಜ್ಯಾಧ್ಯಕ್ಷ ಸಿ.ಪಿ. ಪಾಟೀಲ ಮಾತನಾಡಿ, ‘ಚಿತ್ರದುರ್ಗದಲ್ಲಿರುವ ಮಠಕ್ಕೆ ಅನುದಾನ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಸಂಘಟನೆಗೆ ಒತ್ತು ಕೊಡಬೇಕು’ ಎಂದು ಹೇಳಿದರು.
ಕೇತೇಶ್ವರ ಮಹಾಮಠ ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮೀಜಿ, ವಿಜಯ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಒಪ್ಪತ್ತೇಶ್ವರ ಸಂಸ್ಥಾನಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಜಿ.ಎನ್. ಪಾಟೀಲ, ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೈನಾಪುರ, ಸಂಗಮೇಶ ಬಯ್ಯಾರ, ಅಯ್ಯಪ್ಪ ಮೇದಾರ, ಯಲ್ಲಪ್ಪ ಜೈನಾಪುರ, ಮಹಾದೇವ ಜೈನಾಪುರ, ಚನ್ನಬಸು ಬುಡ್ಡರ ರಮೇಶ ಬುರಡ, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
