ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ವಾರದ ವಚನ ಚಿಂತನೆಯಲ್ಲಿ ಶರಣೆ ಗುಡ್ಡಾಪುರ ದಾನಮ್ಮ ಜಯಂತಿ ಕಾರ್ಯಕ್ರಮ ನಡೆಯಿತು.
ರಾಘವೇಂದ್ರ ಆಶಾಪುರ ವಚನ ಗಾಯನ ಮಾಡಿದರು., ಸಾಮೂಹಿಕ ಪ್ರಾರ್ಥನೆಯ ನಂತರ ಶರಣೆ ಗುಡ್ನಾಪುರ ದಾನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು.
ಬಸವ ಕೇಂದ್ರದ ದಾಸೋಹಿ ದೇವಣ್ಣ ನಾಯಕ ವಕೀಲರು ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷವಾದ ನಿಮಿತ್ಯ ಅವರನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಲಾಯಿತು.

ಪಾರ್ವತಿ ಪಾಟೀಲ ಮಾತನಾಡಿ, ೧೨ನೇ ಶತಮಾನದ ಶರಣೆ ದಾನಮ್ಮ ಬಸವಣ್ಣನ ದರ್ಶನ ಪಡೆದು ಶರಣರ ಆಪೇಕ್ಷೆ ಮೇರೆಗೆ ಮದುವೆಯಾಗಲು ಒಪ್ಪಿಕೊಂಡು, ತನ್ನ ಜೊತೆಯಲ್ಲಿ ಅನೇಕ ಶರಣ ಶರಣೆಯರ ಸಾಮೂಹಿಕ ಮದುವೆ ಏರ್ಪಡಿಸುವ ಮೂಲಕ ಮದುವೆಯಾದರು. ಆ ಕಾಲದಲ್ಲೇ ಮಹಾಮನೆಯ ಮೂಲಕ ಸರಳ ಸಾಮೂಹಿಕ ಮದುವೆ ಪದ್ಧತಿ ಜಾರಿಗೆ ತಂದ ಶರಣೆ ಎಂದು ತಿಳಿಸಿದರು.
ಶರಣೆ ದಾನಮ್ಮರ ಸ್ಥಳ ಈಗ ಸಂಪೂರ್ಣ ವೈದಿಕಮಯವಾಗಿದ್ದು ಆಕೆಯನ್ನು ಈಗ ದಾನಮ್ಮ ದೇವಿಯನ್ನಾಗಿ ಮಾಡಲಾಗಿದೆ. ಅದಕ್ಕೆ ಪೌರಾಣಿಕ ಕಲ್ಪನೆಯ ಮೆರಗು ಹಚ್ಚಿ, ದೇವಿಯು ಮುಂಜಾನೆ ಒಂದು ಅವತಾರ, ಮಧ್ಯಾಹ್ನ ಮತ್ತೊಂದು ಅವತಾರ, ಸಾಯಂಕಾಲ ಮಗದೊಂದು ಅವತಾರ ತಾಳುವ ಕಲ್ಪನೆ ನೀಡುತ್ತಿದ್ದಾರೆಂದು ಗುಡ್ಡಾಪುರ ಕ್ಷೇತ್ರದ ದರ್ಶನ ಕುರಿತು ಹೇಳಿದರು.
ಮೂರು ಹೊತ್ತು ಮೂರ್ತಿಗೆ ಬೇರೆ ಬೇರೆ ಅಲಂಕಾರ ಬಟ್ಟೆ ಧರಿಸುವ ಮೂಲಕ ಕಲ್ಪನೆಗೆ ಪುಷ್ಟಿ ಕೊಡುತ್ತಾರೆ. ಒಟ್ಟಾರೆ ಶರಣಕ್ಷೇತ್ರ ಪೌರೋಹಿತ್ಯದ ಮಂದಿರವಾದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಯಂಕಣ್ಣ ಆಶಾಪುರ ಗುಡ್ಡಾಪುರ ಪ್ರವಾಸ ಮಾಡಿ ಬಂದು ದಾನಮ್ಮ ಶರಣೆಯ ದರ್ಶನ ಪಡೆದ ಅನುಭವ ಹಂಚಿಕೊಂಡರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಜೆ. ಬಸವರಾಜ ಅವರು ಅದ್ಯಕ್ಷಿಯ ನುಡಿಗಳನ್ನಾಡುತ್ತ, ಇಂತಹ ಅನೇಕ ಶರಣ ಕ್ಷೇತ್ರಗಳು ವೈದಿಕಮಯವಾಗಿದ್ದು, ಬಸವ ಅನುಯಾಯಿಗಳು ಒಗ್ಗಟ್ಟಿನ ಹೋರಾಟದ ಮೂಲಕ ಮತ್ತೆ ಅವುಗಳನ್ನು ಶರಣ ಕ್ಷೇತ್ರಗಳಾಗಿ ಮಾರ್ಪಡಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದ ಮೊದಲು ಮಕ್ಕಳ ವಚನ ಪಾಠಶಾಲೆ ನಡೆಯಿತು. ಮಲ್ಲಿಕಾರ್ಜುನ ಗುಡಿಮನಿ ನಿರೂಪಿಸಿದರು. ಡಾ. ಪ್ರಿಯಾಂಕ ಗದ್ವಾಲ್ ವಂದನಾರ್ಪಣೆ ಮಾಡಿದರು. ಅಮರಪ್ಪ ಅಮೀನಗಡ ಬಸವರಾಜ ಕುರುಗೋಡ ಮತ್ತಿತರರು ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು
