ಮತ್ತೆ ಪೀಠದಲ್ಲಿ ಮುರುಘಾ ಶರಣರನ್ನು ಸಮಾಜ ಒಪ್ಪುವುದಿಲ್ಲ: ಅಶೋಕ ಬರಗುಂಡಿ

ಅಶೋಕ ಬರಗುಂಡಿ
ಅಶೋಕ ಬರಗುಂಡಿ

‘ಮುರುಘಾ ಶರಣರು ಪೀಠಕ್ಕೆ ಮರಳುವ ಚರ್ಚೆಯನ್ನೂ ನಾವು ಮಾಡಬಾರದು’

ಚಿತ್ರದುರ್ಗ

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದಲ್ಲಿ ನಗರದ ಜಿಲ್ಲಾ ಕೋರ್ಟ್‌ನ ಆದೇಶ ನವೆಂಬರ್ 26 ಬರಲಿದೆ.

ಮುರುಘಾ ಶರಣರ ಮೇಲಿರುವ ಎರಡನೇ ಪ್ರಕರಣದ ಇತ್ಯರ್ಥ ಬಾಕಿಯಿದೆ. ಜಿಲ್ಲಾ ಕೋರ್ಟಿನ ತೀರ್ಪಿನ ನಂತರ ಈ ಪ್ರಕರಣಗಳು ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಲು ಹತ್ತುವ ಎಲ್ಲಾ ಸಾಧ್ಯತೆಗಳಿವೆ.

ಒಂದು ವೇಳೆ ಈ ಕಾನೂನು ಸಮರಗಳಲ್ಲಿ ಮುರುಘಾ ಶರಣರು ಜಯಗಳಿಸಿದರೆ ಅವರನ್ನು ಮುರುಘಾಮಠದ ಪೀಠಕ್ಕೆ ಮತ್ತೆ ಕರೆತರುವ ಪ್ರಯತ್ನ ಕೆಲವು ವಲಯಗಳಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಯಾವುದೇ ಊಹಾಪೋಹವನ್ನು ಗಣನೆಗೆ ತೆಗೆದುಕೊಳ್ಳದಿರುವುದು ಬಸವ ಮೀಡಿಯಾದ ಸಂಪಾದಕೀಯ ನಿಲುವು. ಆದರೆ ಇದು ಲಿಂಗಾಯತ ಧರ್ಮದ ಪ್ರಾಚೀನ, ಪವಿತ್ರ, ಪ್ರತಿಷ್ಠ, ಪ್ರಭಾವಿ ಮಠಕ್ಕೆ ಸಂಬಂಧಿಸಿದ ಅತೀ ಸೂಕ್ಷ್ಮ, ಗಂಭೀರ ವಿಷಯ.

ಈ ನಿಟ್ಟಿನಲ್ಲಿ ಸಮಾಜದಲ್ಲಿ ಒಂದು ಸಾರ್ವಜನಿಕ ಸಂವಾದ ನಡೆಸುವುದು ನಮ್ಮ ಕಾಯಕದ ನೈತಿಕ ಜವಾಬ್ದಾರಿ ಎಂದು ಪರಿಗಣಿಸಿ ಸಮಾಜದ ಹಿರಿಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ.

ಇಂದು ಹಲವಾರು ಜಿಲ್ಲೆ, ತಾಲೂಕುಗಳಲ್ಲಿ ಬಸವ ಕೇಂದ್ರಗಳ ಜೊತೆ ದುಡಿದಿರುವ ಶರಣ ತತ್ವ ಚಿಂತಕ ಅಶೋಕ ಬರಗುಂಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

1) ಮುರುಘಾ ಶರಣರ ಹಗರಣ ಕಾಣರಿಯದಂತಹ ಪ್ರಕರಣ. ಮೂರು ವರ್ಷಗಳಿಂದ ಇದರ ಪ್ರತಿಯೊಂದು ಬೆಳವಣಿಗೆಯನ್ನು ಜನರು ಬಹಳ ಸೂಕ್ಶ್ಮವಾಗಿ ಗಮನಿಸುತ್ತಿದ್ದಾರೆ. ಲಿಂಗಾಯತ ಸಮಾಜದ ಮೇಲೆ ಈ ಹಗರಣದ ಪರಿಣಾಮವೇನಾಗಿದೆ?

> ಮುರುಘಾ ಮಠಕ್ಕೆ ಭವ್ಯ ಪರಂಪರೆಯಿದೆ. ಎಡೆಯೂರು ಸಿದ್ಧಲಿಂಗೇಶ್ವರರ ನಂತರ ಬಸವತತ್ವವನ್ನು ಬಹಳ ಗಟ್ಟಿಯಾಗಿ ಬಿತ್ತನೆ ಮಾಡಿಕೊಂಡು ಬಂದಿರುವ ಮಠ ಇದು. ಕಟ್ಟಿಗೆಹಳ್ಳಿ ಸಿದ್ಧಲಿಂಗರ ಕಾಲದಿಂದ ಇಲ್ಲಿಯವರೆಗೆ ಲಿಂಗಾಯತ ಧರ್ಮವನ್ನು ಉಳಿಸಿ, ಬೆಳೆಸಲು ಅನೇಕ ಪೂಜ್ಯರು ಬಹಳ ಯಶಸ್ವಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

ಇಂತಹ ಮಠಕ್ಕೆ ಕಳಂಕ ಬರಬಾರದಾಗಿತ್ತು.

ಮೊದಲು ಇಂತಹ ಪ್ರಕರಣ ನಡೆದರೆ ಭಕ್ತರು ಮೌನವಾಗಿರುತ್ತಿದ್ದರು. ಈಗ ಶಿಕ್ಷಣದ ಜೊತೆಗೆ ಜಾಗೃತಿ ಬೆಳೆದಿದೆ. ಪ್ರಶ್ನಿಸುವ, ಪ್ರತಿಭಟಿಸುವ ಮನೋಭಾವ ಬಂದಿದೆ. ಇಂತಹ ಘಟನೆಗಳನ್ನು ಯಾರೂ ಒಪ್ಪುವುದಿಲ್ಲ.

ಇಂತಹ ಮಠಕ್ಕೆ ಕಳಂಕ ಬರಬಾರದಾಗಿತ್ತು.

2) ನ್ಯಾಯಾಲಯದಲ್ಲಿ ಈ ಪ್ರಕರಣವೆಲ್ಲ ಮುಗಿದ ಮೇಲೆ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರುತ್ತಾರೆ ಎಂಬ ಮಾತಿದೆ. ಈ ಸಾಧ್ಯತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ.

> ಈ ಸಾಧ್ಯತೆ ಕುರಿತು ನಾವು ಚರ್ಚೆಯನ್ನೂ ಮಾಡಬಾರದು.

ಕೋರ್ಟಿನಿಂದ ಏನೇ ನಿರ್ದೇಶನ ಬಂದರೂ, ವ್ಯಕ್ತಿಯ ಆತ್ಮಸಾಕ್ಷಿ ಅದಕ್ಕಿಂತಲೂ ಹೆಚ್ಚಿನದು. ಮನವರಿಯದ ಕಳ್ಳತನವಿಲ್ಲ ಅನ್ನುತ್ತಾರೆ.

ಸ್ವಾಮಿಯಾದವರಿಗೆ ಇಡೀ ಸಮಾಜ ಒಪ್ಪುವ ಹಾಗೆ ಅಂತಃಸಾಕ್ಷಿಯಿಂದ ನಡೆದುಕೊಳ್ಳುವ ಬದ್ಧತೆಯಿರಬೇಕು. ನೈತಿಕ ಶುದ್ಧತೆ ಉಳಿಸಿಕೊಂಡು ಯಾವುದೇ ಅಪವಾದ ಬಾರದ ಹಾಗೆ ಬದುಕಬೇಕು.

ಇಂತಹ ಗಂಭೀರ ಆಪಾದನೆ ಬಂದ ಮೇಲೆ, ಮುರುಘಾ ಶರಣರ ನಡತೆಯನ್ನ ಸಮಾಜ ಸಂಶಯಿಸಿದ ಮೇಲೆ, ಆ ಕಳಂಕ ಹೊತ್ತುಕೊಂಡು ಪೀಠಕ್ಕೆ ಮರಳುವುದು ಮಾತ್ರ ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಅವರನ್ನು ಸಮಾಜ ಆಂತರಿಕವಾಗಿ ಒಪ್ಪಿಕೊಳ್ಳುವುದಿಲ್ಲ.

ಅವರಿಗೆ ಕೋರ್ಟಿನಿಂದ ಬಿಡುಗಡೆಯಾದರೂ ಮತ್ತೆ ಪರಿಪೂರ್ಣರಾಗುವವರೆಗೂ ಪಶ್ಚತ್ತಾಪದಿಂದ ಏಕಾಂತದಲ್ಲಿದ್ದುಕೊಂಡು ಅಥವಾ ಸಂಚಾರ ಮಾಡುತ್ತ ಧರ್ಮ ಪ್ರಸಾರ ಮಾಡಬೇಕೆ ವಿನಃ ಮಠಕ್ಕೆ ಹಿಂತಿರುಗುವುದು ಯಾವುದೇ ದೃಷ್ಟಿಯಿಂದ ಸರಿಯಲ್ಲ.

ಕೋರ್ಟುಗಳು ನಿರ್ದೋಷಿ ಅಂತ ಬಿಡುಗಡೆ ಮಾಡಿದರೂ ಜನರ ಮನಸ್ಸಿನಲ್ಲಿ ಇರುವ ಸಂಶಯವನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಪೀಠಕ್ಕೆ ಅಂಟಿಕೊಳ್ಳುವುದು ರಾಜಕಾರಣಿಗಳಿಗೆ ಮಾತ್ರ ಸೂಕ್ತವಾದ ನಡೆಯಾಗುತ್ತದೆ.

ಕಳಂಕ ಹೊತ್ತುಕೊಂಡು ಪೀಠಕ್ಕೆ ಮರಳುವುದು ಮಾತ್ರ ಸರಿಯಲ್ಲ

3) ಕೋರ್ಟಿನಲ್ಲಿ ತೀರ್ಪು ಮುರುಘಾ ಶರಣರ ಪರವಾಗಿ ಬಂದರೆ ಅವರು ಮತ್ತೆ ಪೀಠಕ್ಕೆ ಬರಲು ಅಡ್ಡಿಯಿಲ್ಲ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ನಿಮ್ಮ ಅಭಿಪ್ರಾಯ.

> ಇವರನ್ನು ಬೆಂಬಲಿಸುತ್ತಿರುವವರು ಯಾರು? ಅವರ ಜಾತಕ ಅರ್ಥ ಮಾಡಿಕೊಳ್ಳಬೇಕು.

ಅವರಿಗೆ ಜಾತಿಯ ಬಗ್ಗೆ ಕಾಳಜಿಯಿದೆಯೋ ಅಥವಾ ಧರ್ಮ, ಮನುಷ್ಯತ್ವಗಳ ಬಗ್ಗೆ ಕಾಳಜಿಯಿದೆಯೋ ಆಲೋಚಿಸಬೇಕು.

ಅವರು ಯಾರೂ ಕೂಡ ಧರ್ಮದ ಅನುಯಾಯಿಗಳಲ್ಲ. ವೈಯಕ್ತಿಕವಾಗಿ ಲಾಭ, ಸ್ಥಾನಮಾನ ಪಡೆದು, ಈ ಋಣಕ್ಕೆ ಒಳಗಾಗಿ ಈ ರೀತಿ ಆಲೋಚನೆ ಮಾಡಿದರೆ ಅದು ಶ್ರೀ ಮಠಕ್ಕೆ ಮತ್ತು ಧರ್ಮಕ್ಕೆ ಬಗೆಯುವ ದ್ರೋಹವಾಗುತ್ತದೆ ಎಂದು ನಾವು ಭಾವಿಸಬೇಕು.

ಈ ಮಾರ್ಗ ಬಿಟ್ಟು ಶ್ರೀಮಠದ ಭವ್ಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಅವರಿಗೂ ಶ್ರೇಯಸ್ಸು. ಸಾಲಗಾರನಷ್ಟೇ ಜಾಮೀನುದಾರರಿಗೂ ಬಾಧ್ಯತೆಯಿರುತ್ತದೆ ಎನ್ನುವುದು ಮರೆಯಬಾರದು.

ಅನುಯಾಯಿ, ಅಭಿಮಾನಿಗಳ ಹೆಸರಿನೊಳಗೆ ಜನರ ಕೂಡಿಸಿಕೊಂಡು ಯಾರೂ ತಂತ್ರ ಮಾಡಬಾರದು. ಪೀಠದ ಘನತೆ ಕಾಯಲು ಭಕ್ತರ ಸೇರಿಸಿಕೊಂಡು ಸಹಕಾರ ಕೊಡಬೇಕು.

ಇದೇ ಸ್ವಾಮೀಜಿ ಬರಲಿ ಅನ್ನುವುದು ಯಾವುದೇ ಭಕ್ತರ, ಶಿಷ್ಯರ ಅಭಿಮಾನದ ಮಾತಾಗಬಾರದು. ಆ ಪೀಠಕ್ಕೆ ಯಾರೇ ಬರಲಿ ಅವರು ಧರ್ಮ ನಿಷ್ಠರಾಗಿ ಕಾಯಕ ಮಾಡಬೇಕು ಅನ್ನುವುದೇ ಸರಿಯಾದ ನಿಲುವು.

ಜನರ ಕೂಡಿಸಿಕೊಂಡು ಯಾರೂ ತಂತ್ರ ಮಾಡಬಾರದು

4) ಮುರುಘಾ ಶರಣರು ಮತ್ತೆ ಪೀಠಕ್ಕೆ ಬಂದರೆ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ? ಲಿಂಗಾಯತ ಮತ್ತು ಒಟ್ಟು ನಾಗರಿಕ ಸಮಾಜದ ಮೇಲೆ ಇದರ ಪರಿಣಾಮವೇನಾಗುತ್ತದೆ?

> ಲಿಂಗಾಯತ ಸಮಾಜದಲ್ಲಿ ಮಠಗಳು, ಸ್ವಾಮೀಜಿಗಳು ನೈತಿಕ ಜೀವನಕ್ಕೆ ಮಾದರಿ. ಕಳಂಕವಿರುವವರೂ ಲಾಬಿ ಮಾಡಿ ಅಧಿಕಾರಕ್ಕೆ ಬಂದರೆ ಬಹುಷಃ ಮಠಗಳಲ್ಲಿ ಚಾರಿತ್ರ್ಯವಂತರು ಇರುವುದಿಲ್ಲೇನೋ ಅನ್ನೋ ಭಾವನೆ ಜನರಲ್ಲಿ ಬಂದುಬಿಡತ್ತೆ. ಮಠದ ವ್ಯವಸ್ಥೆಯನ್ನೇ ಪ್ರಶ್ನಿಸುವ ವಾತಾವರಣ ನಿರ್ಮಾಣವಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಸಂಬಂಧಿಸಿದವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

ಮಠಗಳಲ್ಲಿ ಚಾರಿತ್ರ್ಯವಂತರು ಇರುವುದಿಲ್ಲೇನೋ ಅನ್ನೋ ಭಾವನೆ ಜನರಲ್ಲಿ ಬಂದುಬಿಡತ್ತೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
6 Comments
  • ನಿಮ್ಮ ಪ್ರತಿಪಾದನೆ ಮಠಕ್ಕೆ ಬದ್ಧತೆ ಬೇಕೆಂಬ ನಿಲುವು ಮೆಚ್ಚತಕ್ಕದ್ದು.

  • ಶರಣರ ಮಾತಿಗೆ ನನ್ನ ಸಹಮತ. ಸಂಶಯಕ್ಕೆ ಗುರಿಯಾಗಿರುವ ವ್ಯಕ್ತಿಗೆ ಧಾರ್ಮಿಕ ಅಧಿಕಾರ ನೀಡಿದರೆ ಸಮಸ್ತ ಲಿಂಗಾಯತರು ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ.

    • ತಮ್ಮ ಬದ್ದತೆಯ ನಿಲುವು ಸರಿಯಿದೆ. ಶೀಲವಂತನಾದಡೆ ಜಾತಿ ಬಿಡಬೇಕು ಶಿವಜ್ಞಾನಿಯಾದಡೆ ಸಮಯವ ಬಿಡಬೇಕು . ಸಮಾಜದಲ್ಲಿ ಸಂಶಯದ ಒಂದು ವಿಷಯ ಅವರು ಬದುಕಿದ್ದಾಗಲೂ ಮತ್ತು ಅವರು ಹೋದ ನಂತರವು ಸಮಾಜದಲ್ಲಿ ಈ ಸಂಶಯ ಉಳಿದೆ ಇರುತ್ತೆ. ಇಂತಹ ವ್ಯಕ್ತಿತ್ವದವರು ಮತ್ತೆ ಸಮಾಜಕ್ಕೆ ಏನೂ ಹೇಳಲು ಧರ್ಮದ ಪೀಠ ಬೇಕೆಂದು ಪ್ರಶ್ನಿಸುವವರಿಗೆ ಇಡಿ ಲಿಂಗಾಯತ ಧರ್ಮ ಮತ್ತು ತತ್ವ ಆಹಾರವಾಗುತ್ತೆ. ಹಾಗಾಗಿ ಶ್ರೀಗಳು ಪೀಠಕ್ಕೆ ಬರದೆ ಧರ್ಮ ಪ್ರಸಾರ ಕೈಗೊಂಡು ಆ ತತ್ವಗಳ ಉಳಿವಿಗೆ ಬೆಳವಣಿಗೆಗೆ ಶ್ರಮಿಸಬೇಕು.
      ಬರಗುಂಡಿ ಶರಣರ ಅಭಿಪ್ರಾಯ ಸರಿಯಿದೆ.
      “ಬ್ರಹ್ಮದ ಮಾತಾಡಿ
      ಕನ್ನೆಯರ ಕಾಲದಸೆಯಲ್ಲಿ ಕುಳಿತರೆ
      ಪರಬೊಮ್ಮದ ಮಾತು ಅಲ್ಲಿಯೇ ನಿಂದಿತ್ತೆಂದನಂಬಿಗರ ಚೌಡಯ್ಯ” ಎನ್ನುವ ಈ ವಚನ ” ಮನವರಿಯದ ಕಳ್ಳತನವಿಲ್ಲ ” ಎನ್ನುವ ಶರಣ ನುಡಿಗಳಂತೆ ಆತ್ಮವಿಮರ್ಶನೆ ಮಾಡಿಕೊಂಡು ಪೂಜ್ಯರು ಹೆಜ್ಜೆ ಇಡಲಿ. ಆ ಹೆಜ್ಜೆಯು ಸಮಾಜಕ್ಕೆ ಸಮುದಾಯಕ್ಕೆ ಮಾದರಿಯಾಗಲಿ

  • ನಿಮ್ಮ ಮಾತುಗಳಿಗೆ ಮತ್ತು ಅಭಿರಾಯಕ್ಕೆ ನನ್ನ ಸಹಮತವಿದೆ.

  • ಅಶೋಕ ಬರಗುಂಡಿ ಶರಣರಿಗೆ ಬದ್ದತೆ ಇದೆ ಅಂತ ಅವರಿಗೆ ಆ ಮಾತು ಹೆಳಲಿಕ್ಕೆ ಸಾಧ್ಯ ಬದ್ದತೆ ಇಲ್ಲದವರು ಈ ರೀತಿ ಹೆಳಲು ಆಗುವುದಿಲ್ಲ ಶರಣು ಶರಣಾರ್ಥಿ 🙏🏻💐

Leave a Reply

Your email address will not be published. Required fields are marked *

ಜಿಲ್ಲಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬಾಗಲಕೋಟೆ