ಮೈಸೂರು:
ರಮ್ಮನಹಳ್ಳಿಯಲ್ಲಿರುವ ಭಾವೈಕ್ಯ ಕೇಂದ್ರವಾಗಿರುವ ಶ್ರೀ ಬಸವ ಧ್ಯಾನ ಮಂದಿರದ 16ನೇ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ರಾಜ್ಯೋತ್ಸವ, ಸೌಹಾರ್ದ ಪಾದಯಾತ್ರೆ, ಸಹಪಂಕ್ತಿ ಭೋಜನ, ಸತ್ಕಾರ ಕಾರ್ಯಕ್ರಮಗಳು ನಡೆದವು.
ಟಿಪ್ಪು ಸುಲ್ತಾನ್ ಮಸೀದಿಯಿಂದ ಆರಂಭಗೊಂಡು ಶ್ರೀ ಬಸವಧ್ಯಾನ ಮಂದಿರದವರೆಗೆ ನಡೆದ ಪಾದಯಾತ್ರೆಯಲ್ಲಿ ಲಿಂಗಾಯತ, ಹಿಂದೂ, ಮುಸ್ಲಿಂ ಧರ್ಮದ ಪೂಜ್ಯರು, ಸಾರ್ವಜನಿಕ ಬಾಂಧವರು ಭಾಗವಹಿಸಿ, ಹೆಜ್ಜೆ ಹಾಕಿ ಭಾವೈಕ್ಯತೆ ಮೆರೆದರು.

ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ರಾಜ್ಯದ ಸಾಧಕರಿಗೆ ಹಾಗೂ ಧ್ಯಾನ ಮಂದಿರದ ಸ್ಥಳ ದಾನಿಗಳಿಗೆ ಸನ್ಮಾನ ನಡೆಯಿತು. ಬಸವಧ್ಯಾನ ಮಂದಿರದ ಸಂಚಾಲಕರಾದ ಬಸವಲಿಂಗ ಮೂರ್ತಿ ಶರಣರು ಆಶಯ ನುಡಿಗಳನ್ನಾಡಿದರು.

ಸಾನಿಧ್ಯವನ್ನು ಹುಬ್ಬಳ್ಳಿಯ ಷಡಕ್ಷರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮಿಗಳು, ಪೂರ್ಣಾನಂದ ಸ್ವಾಮಿಗಳು, ಮುಸ್ಲಿಂ ಧರ್ಮದ ಸೂಫಿ ಗುರುಗಳಾದ ರಾಹುಲ್ ಶಾ ಖಾದ್ರಿ, ಮುಸ್ತಫ ಖಾದ್ರಿ, ಸ್ಥಳದಾನಿಗಳಾದ ಕೆ. ಅಬ್ದುಲ್ ಅಜೀಜ್ ಮಾಸ್ಟರ್, ಸಲ್ಮಾ ಸಿದ್ದಿಕ್, ಜರ್ಮನ್ ದೇಶದ ಪ್ರಜೆ ಸೈಮನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಹಿಂದೂ, ಮುಸ್ಲಿಂ, ಲಿಂಗಾಯತರೆಲ್ಲ ಒಟ್ಟಾಗಿ ಸೇರಿ ಸಹಪಂಕ್ತಿ ಭೋಜನ ಸವಿದರು.
ಬೆಳಿಗ್ಗೆ ಬಸವ ಧ್ಯಾನಮಂದಿರದಲ್ಲಿ ಬಸವಲಿಂಗ ನಾಮಾವಳಿ ಪಠಣ, ಬಸವಧ್ವಜಾರೋಹಣ ನಡೆದವು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜರ್ಮನ್ ದೇಶದ ಪ್ರಜೆ ಯೋಗಿ ಸೈಮನ್ ಅವರನ್ನು ಸನ್ಮಾನಿಸಲಾಯಿತು. ಅಲ್ಲಮಪ್ರಭು, ಚೆನ್ನಬಸವಣ್ಣ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾಗಿ ಸೈಮನ್ ಅವರಿಬ್ಬರ ವಚನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ವರ್ಷದ ಒಂದಷ್ಟು ದಿನ ಇಲ್ಲಿಗೆ ಬಂದು ಉಳವಿ ಕಾಡು, ಗುಹೆಗಳಲ್ಲಿ ಧ್ಯಾನ ಮಾಡುತ್ತಾರೆ.
ದಾಂಡೇಲಿ ಬಸವ ಕೇಂದ್ರದ ಮುಖ್ಯಸ್ಥರಾದ ದೇವೇಂದ್ರಪ್ಪ, ಇಸಾಕ್, ಎಲ್ಲಪ್ಪ, ರಮ್ಮನಹಳ್ಳಿಯ ಸಾರ್ವಜನಿಕ ಬಂಧುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೌಹಾರ್ದತೆಯ ಕೇಂದ್ರ ಶ್ರೀ ಬಸವಧ್ಯಾನ ಮಂದಿರ 16 ವರ್ಷಗಳ ಹಿಂದೆ ಮೈಸೂರಿನ ಟಿಪ್ಪು ಟ್ರಸ್ಟ್ ನ ಜಾಹೀದುಲ್ಲಾಖಾನ್ ಹಾಗೂ ಸಲ್ಮಾ ಸಿದ್ಧಿಕ ದಂಪತಿ ಭಾವೈಕ್ಯತೆಯ ಪ್ರತೀಕವಾಗಿ, ಮೈಸೂರಿನಲ್ಲಿ ಸೌಹಾರ್ದತೆಯ ಸ್ವಂತರೆಂದು ಹೆಸರಾಗಿದ್ದ ಶ್ರೀ ಬಸವಲಿಂಗಮೂರ್ತಿ ಶರಣರಿಗೆ ರಮ್ಮನಹಳ್ಳಿಯಲ್ಲಿ ನಿವೇಶನವನ್ನು ದಾನ ಮಾಡಿದ್ದರು.

ನಂತರದಲ್ಲಿ ಶರಣರು ಬಸವಧ್ಯಾನ ಮಂದಿರದ ಕಟ್ಟಡ ನಿರ್ಮಾಣವನ್ನು ಮಾಡಿಕೊಂಡು ಅದನ್ನು ಭಾವೈಕ್ಯತೆಯ ಕೇಂದ್ರವನ್ನಾಗಿ ಮಾಡಿಕೊಂಡು, ಪ್ರತಿವರ್ಷ ನವಂಬರ್ ತಿಂಗಳ ಕಾರ್ತಿಕ ಮಾಸದ ಕೊನೆಯ ವಾರದಲ್ಲಿ ಸೌಹಾರ್ದತೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿರುವುದನ್ನು ಸ್ಮರಿಸಬಹುದು.
