‘ಬೆಡಗು-ಬೆಳಗು’ ಮತ್ತು ‘ಬಸವಣ್ಣ: ಸಾಂಸ್ಕೃತಿಕ ನಾಯಕ’ ಕೃತಿಗಳು ಬಿಡುಗಡೆ
ಶಿವಮೊಗ್ಗ:
ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಬಸವ ಕೇಂದ್ರದಿಂದ ಚಿಂತನ ಕಾರ್ತಿಕ ಸಮಾರೋಪ ಸಮಾರಂಭ ನಡೆಯಿತು.
ಇದೇ ವೇಳೆ ಬಸವ ಮರುಳಸಿದ್ಧ ಸ್ವಾಮೀಜಿ ಅವರ ‘ಬೆಡಗು–ಬೆಳಗು’ ಮತ್ತು ಕುವೆಂಪು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಪ್ರಶಾಂತ ನಾಯಕ ಅವರ ‘ಬಸವಣ್ಣ: ಸಾಂಸ್ಕೃತಿಕ ನಾಯಕ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ‘ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ದೂರ ಮಾಡಿಕೊಂಡು ಬದುಕು ಸಾಗಿಸಬೇಕಿದೆ. ಇನ್ನೊಬ್ಬರಿಗೆ ಕೆಡಕು ಬಯಸದೇ ಜಗತ್ತಿಗೆ ಜ್ಞಾನದ ದೀಪ ಹಚ್ಚಬೇಕಿದೆ.
ಅಲ್ಲಮಪ್ರಭು ದೇವರು ಮೊದಲ ಪ್ರಜಾಪ್ರಭುತ್ವದ ಮಾದರಿಯಾದ ಅನುಭವ ಮಂಟಪದ ಪ್ರಥಮ ಅಧ್ಯಕ್ಷ ಎಂಬುದು ಕನ್ನಡ ನಾಡಿನ ಜನರೆಲ್ಲರಿಗೂ ಹೆಮ್ಮೆ. ಬಸವಣ್ಣನವರ ಸಮಾಜೋ-ಧಾರ್ಮಿಕ ಕಳಕಳಿಯ ಕಾರಣದಿಂದ ಸ್ಥಾಪನೆಯಾದ ಅನುಭವ ಮಂಟಪ ಕರ್ನಾಟಕದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದೆ’ ಎಂದರು.

ಇದೇ ವೇಳೆ ಅಲ್ಲಮಪ್ರಭುದೇವರ ಜನ್ಮಸ್ಥಳದಲ್ಲಿ ಪ್ರಭುದೇವರ ಮನೆಯ ನಿವೇಶನದಲ್ಲಿ ಸ್ಮಾರಕ ನಿರ್ಮಿಸಲು ಇದ್ದ ಎಲ್ಲ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಗುದ್ದಲಿ ಪೂಜೆಯನ್ನು ಸಂಸದ ಬಿ. ವೈ. ರಾಘವೇಂದ್ರ, ಶಿಕಾರಿಪುರ ಶಾಸಕ ಬಿ. ವೈ. ವಿಜಯೇಂದ್ರ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಿರುವುದನ್ನು ಸ್ಮರಿಸಿಕೊಂಡು ಸಭೆಯು ಅವರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿತು.
ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಇದ್ದರು.
ನಿವೃತ್ತ ಕುಲಪತಿ ಮಲ್ಲೇಪುರಂ ವೆಂಕಟೇಶ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೇಶ್, ಈ. ವಿಶ್ವಾಸ, ಧೀರರಾಜ ಹೊನ್ನವಿಲೆ ಮತ್ತಿತರರು ಇದ್ದರು.
