ಧಾರವಾಡ:
ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತಿದೊಡ್ಡ ಸಂವಿಧಾನವಾಗಿದ್ದು, ಇದು ಸರ್ವರಿಗೂ ಮೂಲಭೂತ ಹಕ್ಕುಗಳನ್ನು ನೀಡಿ ಪ್ರತಿ ಪ್ರಜೆಯ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ ಎಂದು ಧಾರವಾಡದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅಭಿಪ್ರಾಯಪಟ್ಟರು.
ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜುದಲ್ಲಿ ಕಾಲೇಜಿನ ಎನ್ ಎಸ್ ಎಸ್ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನಮ್ಮ ಸಂವಿಧಾನ ಹೇಳುವ ಎಲ್ಲಾ ಗುಣಾತ್ಮಕ ಅಂಶಗಳು ವಿಶ್ವಗುರು ಬಸವಣ್ಣನವರ ವಚನಗಳಲ್ಲಿ ಧ್ವನಿಸಿವೆ. ಸಮಸಮಾಜಕ್ಕೆ ಶ್ರಮಿಸಿದ ಗುರು ಬಸವಣ್ಣನವರು ನಮ್ಮ ಸಂವಿಧಾನದ ಎಲ್ಲಾ ಆಶಯಗಳನ್ನು ಅಂದೇ ಅನುಷ್ಠಾನಕ್ಕೆ ತಂದಿದ್ದರು ಎಂದು ನುಡಿದರು.
ಪ್ರಾಚಾರ್ಯರಾದ ಡಾ.ಎಸ್. ಆರ್. ಮಂಜುಳಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿವಿ ಸಿಂಡಿಕೇಟ್ ಹಾಗೂ ಕಾಲೇಜ್ ಆಡಳಿತ ಮಂಡಳಿ ಸದಸ್ಯ ರಾಬರ್ಟ್ ದದ್ದಾಪುರಿ, ಪ್ರೊ. ಶಿವಕುಮಾರ್ ಎಂ. ಎ, ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು.
ಡಾ. ಶಶಿರೇಖಾ ಮಾಳಗಿ ಅವರಿಂದ ಸ್ವಾಗತ, ವಿದ್ಯಾರ್ಥಿನಿ ಕು. ವೈಷ್ಣವಿ ಹಿರೇಮಠ ಅವರಿಂದ ನಿರೂಪಣೆ ಜರುಗಿತು.
