ಲಿಂಗಾಯತ ವಿಧಿಗಳ ಪ್ರಕಾರ ಬಯಲಾದ ಬೀಳಗಿ ಸಹೋದರರು

ಬಸವ ಮೀಡಿಯಾ
ಬಸವ ಮೀಡಿಯಾ

ರಾಮದುರ್ಗ

ಪಟ್ಟಣದ ಹೊರವಲಯದಲ್ಲಿರುವ ಹೊಲದಲ್ಲಿ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಬುಧವಾರ 5:40ರ ವೇಳೆಗೆ ರಸ್ತೆ ಅಪಘಾತದಲ್ಲಿ ಮಡಿದ ಮಹಾಂತೇಶ ಬೀಳಗಿ ಮತ್ತವರ ಸಹೋದರರ ಅಂತ್ಯಕ್ರಿಯೆ ನಡೆಯಿತು.

ಕುಟುಂಬಸ್ಥರ, ಬಂದು ಮಿತ್ರರ ಆಕ್ರಂದನದ ನಡುವೆ ಮಹಾಂತೇಶ್ ಬೀಳಗಿ ಅಣ್ಣ ಸಿದ್ರಾಮಪ್ಪ ಮಹಾಂತೇಶ್ ಬೀಳಗಿ, ಶಂಕರ್ ಬೀಳಗಿ, ಈರಣ್ಣಾ ಬೀಳಗಿ ಹಾಗೂ ಈರಣ್ಣಾ ಶಿರಸಂಗಿ ಅವರ ಮೃತ ದೇಹಗಳಿಗೆ ಅಗ್ನಿಸ್ಪರ್ಶ ಮಾಡಿದರು.

ಮಹಾಂತೇಶ ಬೀಳಗಿ ಸೇರಿ ನಾಲ್ವರ ಮೃತದೇಹಗಳ ಅಂತ್ಯಕ್ರಿಯೆ ಸಂಜೆ ರಾಮದುರ್ಗ ಹೊರ ವಲಯದ ಅವರ ತೋಟದಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನಗಳ ಪ್ರಕಾರ ನೆರವೇರಿತು.

ಸಾವಿರಾರು ಜನರು ಒಲ್ಲದ ಮನಸ್ಸಿನಿಂದಲೇ ಅವರಿಗೆ ಅಂತಿಮ ವಿದಾಯ ಹೇಳಿದರು. ಈ ವೇಳೆ ಪತ್ನಿ ರೇಖಾ, ಪುತ್ರಿ ಚೈತನ್ಯ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಬುಧವಾರದ ಬೆಳವಣಿಗೆಗಳು

ಬೆಳಗ್ಗೆ 7:30ರ ಸುಮಾರಿಗೆ ಕಲಬುರಗಿಯಿಂದ ಮಹಾಂತೇಶ ಬೀಳಗಿ ಸೇರಿ ಮೂವರ ಮೃತದೇಹಗಳನ್ನು ರಾಮದುರ್ಗಕ್ಕೆ ತರಲಾಯಿತು.

ನವಿಪೇಟದಲ್ಲಿರುವ ಸ್ವಗೃಹದಲ್ಲಿ ಧಾರ್ಮಿಕ‌ ವಿಧಿವಿಧಾನ ನಡೆಯಿತು.

10 ಗಂಟೆಯ ಸುಮಾರಿಗೆ ರಾಮದುರ್ಗದ ಪಂಚಗಟ್ಟಿಮಠ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಆರು ಗಂಟೆಗಳ‌ವರೆಗೆ ಸಾವಿರಾರು ಜನರು, ಗಣ್ಯರು, ವಿದ್ಯಾರ್ಥಿಗಳು ಆಗಮಿಸಿ ಅಂತಿಮ‌ ದರ್ಶನ ಪಡೆದರು.

ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛ ಇಟ್ಟು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಇದೇ ವೇಳೆ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು‌.

ನಂತರ ಪಂಚಗಟ್ಟಿಮಠ ಶಾಲಾ‌ ಮೈದಾನದಿಂದ ಹಲಗತ್ತಿ ತೋಟದ ಮನೆವರೆಗೆ ಅಂತಿಮ ಯಾತ್ರೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಹಲವು ಸ್ವಾಮೀಜಿಗಳು ಭಾಗಿ:

ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗಚ್ಚಿನಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಚಂದರಗಿಯ ಗಡದೇಶ್ವರ ಸ್ವಾಮೀಜಿ, ಢವಳೇಶ್ವರ ಸ್ವಾಮೀಜಿ, ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಸ್ವಾಮೀಜಿ, ಅವರಾದಿಯ ಶಿವಮೂರ್ತಿ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ ಸೇರಿ ಮತ್ತಿತರರು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು

ಅಧಿಕಾರಿಗಳಿಂದ ಅಂತಿಮ ದರ್ಶನ:

ಶಾಸಕ ಅಶೋಕ ಪಟ್ಟಣ, ಜಿ.ಎಸ್.ಪಾಟೀಲ್, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ವೈ.ಎಸ್.ಪಾಟೀಲ, ಶಿವಾನಂದ ಕಾಪಶಿ, ವಿಜಯಮಹಾಂತೇಶ, ಸುರೇಶ ಇಟ್ನಾಳ್, ವೈಶಾಲಿ, ರವಿ ಚೆನ್ನಣ್ಣವರ, ಯಶೋಧಾ ವಂಟಗೋಡಿ, ಚನ್ನಬಸವಣ್ಣ ಲಂಗೋಟಿ, ಡಾ.ಭೀಮಾಶಂಕರ ಗುಳೇದ, ಹಣಮಂತರಾಯಪ್ಪ, ರಿಷಂತ್, ಯಶವಂತ ಗುರಿಕಾರ, ಗಂಗಾಧರಸ್ವಾಮಿ, ಗೋವಿಂದರೆಡ್ಡಿ, ಪದ್ಮಾ ಬಸವಂತಪ್ಪ, ಶಶಿಧರ ಕುರೇರ ಸೇರಿದಂತೆ 50ಕ್ಕೂ ಅಧಿಕ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಹಾಜರಿದ್ದು ಅಂತಿಮ ದರ್ಶನ ಪಡೆದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *