ಚಿತ್ರದುರ್ಗ
ಕೆಲವು ತಿಂಗಳ ಹಿಂದಿನತನಕ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ಗ್ರಾಮೀಣ ವಿದ್ಯುತ್ ಸಂಪರ್ಕವಿತ್ತು. ಇದರಿಂದ ಆಸ್ಪತ್ರೆಯ ವಿದ್ಯುತ್ ಪೂರೈಕೆಯಲ್ಲಿ ಬಹಳ ಏರುಪೇರಾಗುತ್ತಿತ್ತು.
ಅದನ್ನು ನಗರದ ವಿದ್ಯುತ್ ಸಂಪರ್ಕಕ್ಕೆ ಬದಲಾಯಿಸಿಕೊಡಲು ಗುತ್ತಿಗೆದಾರರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ಅಂದಾಜು ವೆಚ್ಚವನ್ನು ನೀಡಿದ್ದರು.
ಒಂದು ಬಾರಿ ಸಮಸ್ಯೆಯಾದಾಗ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ ಸಿ. ಕಳಸದವರು ಅಲ್ಲಿಂದಲೇ ಬೆಸ್ಕಾಂನ ಎಂ.ಡಿ.ಯಾಗಿದ್ದ ಮಹಾಂತೇಶ ಬೀಳಗಿಯವರಿಗೆ ದೂರವಾಣಿ ಕರೆ ಮಾಡಿದರು. ಗ್ರಾಮೀಣ ವಿದ್ಯುತ್ ಸರಬರಾಜಿನಿಂದ ಆಸ್ಪತ್ರೆಯ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಆಸ್ಪತ್ರೆಯನ್ನು ನಗರ ವ್ಯಾಪ್ತಿಗೆ ಬರುವಂತೆ ಬದಲಾಯಿಸಿ ಎಂದು ಕೇಳಿದರು.
ಮರು ದಿವಸವೇ ಚಿತ್ರದುರ್ಗದ ಬೆಸ್ಕಾಂನ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಒಂದು ವಾರದೊಳಗೆ ಕೇವಲ ನಾಲ್ಕು ಲಕ್ಷ ರೂಪಾಯಿಗಳಿಗೆ ಅಂದಾಜು ವೆಚ್ಚವನ್ನ ಸಿದ್ದಪಡಿಸಿದರು. ನಂತರ ಅಷ್ಟೇ ವೇಗದಿಂದ ಆಸ್ಪತ್ರೆಗೆ ನಗರದ ವಿದ್ಯುತ್ ಸಂಪರ್ಕವನ್ನು ಕೊಟ್ಟರು.
ಒಂದೇ ಒಂದು ಫೋನ್ ಕರೆಗೆ ಬೆಲೆ ಕೊಟ್ಟು ಇಷ್ಟು ಕೆಲಸವನ್ನು ಮಾಡಿಕೊಟ್ಟು ಮಹಾಂತೇಶ್ ಬೀಳಗಿ ಶ್ರೀ ಮಠಕ್ಕೆ ಒಂದು ಕೋಟಿಗೂ ಹೆಚ್ಚು ರೂಪಾಯಿ ಉಳಿಸಿದರು.
ಇಂತಹ ಅಪರೂಪದ ವ್ಯಕ್ತಿ ನಮ್ಮ ನಡುವೆಯೇ ಸದ್ದುಗದ್ದಲವಿಲ್ಲದೆ ಆದರ್ಶಪ್ರಾಯವಾಗಿ ಬದುಕಿದ್ದರು. ಸತ್ಕಾರ್ಯಗಳನ್ನು ಮಾಡುವುದು ಮತ್ತೊಬ್ಬರ ಪ್ರಶಂಸೆಗಲ್ಲ ಬದುಕಿನ ಸಂತೃಪ್ತಿಗಾಗಿ ಎಂಬ ಸಂದೇಶವನ್ನು ಸಾರಿ ಇಷ್ಟು ಬೇಗ ಮರೆಯಾಗಿದ್ದು ನೋವಿನ ಸಂಗತಿ.
