ಸಂಸ್ಕಾರಗಳು ಅಭ್ಯಾಸವಾದರೆ ಪ್ರಯೋಜನವಿಲ್ಲ : ಶರತಚಂದ್ರ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಅಭ್ಯಾಸವಾದ ಸಂಸ್ಕಾರಗಳು ಪ್ರಯೋಜನವಿಲ್ಲ, ಭಕ್ತಿ ಮತ್ತು ಮನದ ಅರ್ಪಣೆ ಇದ್ದಾಗ ಮಾತ್ರ ಸಂಸ್ಕಾರಗಳು  ಉಪಯುಕ್ತ ಮತ್ತು ಸತ್ಯಶುದ್ದತೆಯ ಹಾದಿಯನ್ನು ಕಟ್ಟಿಕೊಡುತ್ತವೆ ಎಂದು ಮೈಸೂರಿನ ಕುಂದೂರು ಮಠದ ಡಾ. ಶರತಚಂದ್ರ ಸ್ವಾಮಿಗಳು ಹೇಳಿದರು.

ನಗರದ ಗುರುವಣ್ಣದೇವರ ಮಠದಲ್ಲಿ ನಡೆದ ಸಂಸ್ಮರಣೋತ್ಸವ, ಕಾರ್ತಿಕ ದೀಪೋತ್ಸವ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭ್ಯಾಸಬಲದಿಂದ ಪೂಜೆ ಮಾಡುವುದು ಕೇವಲ ಯಾಂತ್ರಿಕವೇ ಹೊರತು ಉಪಯುಕ್ತವಲ್ಲ, ಹಾಗಾಗಿ ಕರ್ಮಾಚರಣೆಗಳ ಬದಲಿಗೆ ಮನದಾಚರಣೆಗಳು ನಡೆಯಬೇಕು, ವಚನಗಳ ಸತ್ವವನ್ನು ಅರಿತು ಚೆಂದ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತುಮಕೂರು ಸಿದ್ದಗಂಗಾಮಠದ ಪೂಜ್ಯ ಸಿದ್ದಲಿಂಗಸ್ವಾಮಿಗಳು ಮಾತನಾಡಿ, ಗುರುವಣ್ಣದೇವರ ಮಠದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳ ಸೇವಾಕಾರ್ಯವನ್ನು ಸ್ಮರಿಸಿ ಶ್ರೀಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹತ್ತೊಂಬತ್ತನೆಯ ಶತಮಾನದ ಶ್ರೀಗಳಾದ ನಂಜುಂಡಸ್ವಾಮಿಗಳ ಕೃತಿಯನ್ನು ಸಂಗ್ರಹಿಸಿ ಇಂದು ಪುನರ್ ಪ್ರಕಟನೆ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಪ್ರಶಂಸಿದರು.

ಗ್ರಂಥಗಳನ್ನು ಮುಟ್ಟಿ ಕೈ ತೊಳೆದುಕೊಳ್ಳುವುದಕ್ಕಿಂತ ಕೈತೊಳೆದು ನಮಿಸಿ ಗ್ರಂಥವನ್ನು ಓದಿ ಅಧ್ಯಯನ ಮಾಡಬೇಕೆಂದು ಅಭಿಪ್ರಾಯಪಟ್ಟರು. ಭಕ್ತಿಪ್ರಿಯ ಕೂಡಲಸಂಗಮದೇವ ಎಂಬ ಮಹಾತ್ಮ ಬಸವಣ್ಣನವರ ಸಂದೇಶವನ್ನು ಬದುಕಿನಲ್ಲಿ ಪರಿಪಾಲಿಸಬೇಕೆಂದು ಕರೆ ನೀಡಿದರು.

ಮಠಗಳು ಮತ್ತು ಭಕ್ತರ ನಡುವೆ ಅವಿನಾಭವ ಸಂಬಂಧ ಬೆಳೆದು ಮುಂದಿನ ಪೀಳಿಗೆಗೂ ಅದು ವರ್ಗಾವಣೆಯಾಗಬೇಕು, ಮಕ್ಕಳಲ್ಲಿ ನಮ್ಮ ವಚನ ತತ್ವಗಳು ಪಸರಿಸಬೇಕು ಎಂದು ಹೇಳಿದರು.

ವಚನಜ್ಯೋತಿ ಬಳಗದ ಪಿನಾಕಪಾಣಿ ಮತ್ತು ಸಂಗಡಿಗರು ವಚನ ಸಂಗೀತವನ್ನು ನಡೆಸಿಕೊಟ್ಟರು.

ಗುರುವಣ್ಣದೇವರ ಮಠದ ಪೂಜ್ಯ ನಂಜುಂಡಸ್ವಾಮಿಗಳು ಮಾತನಾಡಿ, ಪ್ರತಿವರ್ಷ ತಮ್ಮ ಮಠದ ಹಿರಿಯ ಶ್ರೀಗಳು ನೂರು ವರ್ಷಗಳ ಹಿಂದೆ ಬರೆದ ಕೃತಿಗಳನ್ನು ಪ್ರತಿವರ್ಷ ಒಂದೊಂದು ಕೃತಿ ಪುನರ್ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಕನಕಪುರ ದೇಗುಲಮಠದ ಪೂಜ್ಯ ಚನ್ನಬಸವಸ್ವಾಮಿಗಳು, ಮಾಜಿಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ, ಮಾಜಿ ಉಪ‌ಮಹಾಪೌರ ಬಿ.ಎಸ್. ಪುಟ್ಟರಾಜು, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ವೈದ್ಯ ಡಾ. ಶಂಕರಲಿಂಗಯ್ಯ, ರಂಗವಿಮರ್ಶಕ ಡಾ. ರುದ್ರೇಶ ಅದರಂಗಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *