ಹುಲಸೂರ:
ಬೀದರ ಜಿಲ್ಲೆಯ ಮಹಾನ್ ಚೇತನರಾದ ಪೂಜ್ಯ ಬಸವಕುಮಾರ ಶಿವಯೋಗಿಗಳು, ಭಾಲ್ಕಿ ಹಿರೇಮಠದ ಪೂಜ್ಯ ಚನ್ನಬಸವ ಪಟ್ಟದ್ದೇವರು ಹಾಗೂ ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಜಿಲ್ಲೆಯ ಕೀರ್ತಿಪತಾಕೆಯನ್ನು ನಾಡಿನುದ್ದಕ್ಕೂ ಪಸರಿಸಿದವರು ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಬಸವ ಕೇಂದ್ರ ತಾಲೂಕು ಘಟಕ, ಹುಲಸೂರ ವತಿಯಿಂದ ಹಮ್ಮಿಕೊಂಡಿರುವ ಪೂಜ್ಯ ಲಿಂಗೈಕ್ಯ ಜಗದ್ಗುರು ಬಸವಕುಮಾರ ಶಿವಯೋಗಿಗಳ 50ನೇ ಪುಣ್ಯ ಸ್ಮರಣೆಯ ನಿಮಿತ್ಯ, ಪ್ರತಿ ಹಳ್ಳಿಗಳಲ್ಲಿ ಶರಣ ಸಂದೇಶ ಯಾತ್ರೆ ಕಾರ್ಯಕ್ರಮಗಳನ್ನು ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಶ್ರೀ ಗುರು ಬಸವೇಶ್ವರ ಸಂಸ್ಥಾನಮಠ ಹುಲಸೂರಿನ ಪೂಜ್ಯರ ಸಂಕಲ್ಪ ಮಾರ್ಗದರ್ಶನದಲ್ಲಿ, ಹಳ್ಳಿಗಳಲ್ಲಿ ಶರಣರ ಜೀವನ ಮತ್ತು ಶರಣ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಶಿವಯೋಗಿಗಳ, ಧರ್ಮ ಪ್ರಸಾರಕರ ಜೀವನ ಸಂದೇಶವನ್ನು ತಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಲಸೂರಿನ ಬಸವ ಕೇಂದ್ರ ತಾಲೂಕ ಘಟಕದ ಅಧ್ಯಕ್ಷರಾದ ಶರಣ ಆಕಾಶ ಖಂಡಾಳೆ ಮಾತನಾಡಿ, ಪ್ರಭುದೇವ ಮಹಾಸ್ವಾಮೀಜಿ 770 ಗ್ರಾಮಗಳಲ್ಲಿ ಪ್ರವಚನ ಮಾಡಬೇಕೆಂಬ ಸಂಕಲ್ಪ ಹೊತ್ತಿದ್ದಾರೆ. ಅವರ ಸಂಕಲ್ಪ ನಮ್ಮೆಲ್ಲರ ಸಂಕಲ್ಪ, ಅವರ ಪ್ರವಚನಗಳು ಹಳ್ಳಿ ಹಳ್ಳಿಗಳಲ್ಲಿ ಆಯೋಜಿಸುವುದರ ಮೂಲಕ ಧರ್ಮ ಪ್ರಚಾರಕ್ಕೆ ಸಹಕರಿಸೋಣ ಎಂದು ನುಡಿದರು.
ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣತಾಯಿ ಅವರ ಜೀವನ ಸಂದೇಶ ಕುರಿತು ಮಾತನಾಡಿರುವ ಪ್ರಜ್ವಲ ರಾಜೋಳೆ, ಅಕ್ಕ ಅನ್ನಪೂರ್ಣತಾಯಿಯವರು ಕಿರಿದಾದ ವಯಸ್ಸಿನಲ್ಲಿಯೇ ಅಪಾರ ಜ್ಞಾನವಂತರು. ಪ್ರವಚನ ಹಾಗೂ ಸಾಹಿತ್ಯದ ಮೂಲಕ ಜ್ಞಾನವನ್ನು ಧಾರೆ ಎರೆಯುತ್ತ ಜನಜಾಗ್ರತಿ ಗೈದಿರುವರು.

ಕನ್ನಡ ಸ್ನಾತಕೋತ್ತರ ಮತ್ತು ಕಾನೂನು ಪದವಿಧರೆಯಾದ ಅಕ್ಕನವರು ತಮ್ಮ ನಿರ್ಭೀತ ನಿಲುವು, ಸಮಾಜೋದ್ಧಾರದ ಕಳಕಳಿ ಹೊಂದಿದ್ದರು. ಬಸವತತ್ವ ನಿಷ್ಠೆಯ ಅಪೂರ್ವ ಪ್ರವಚನ, ಬಸವ ಜ್ಯೋತಿ ಮತ್ತು ಶರಣ ಸಂಗಮ ಕಾರ್ಯಕ್ರಮಗಳ ಮೂಲಕ ಹಳ್ಳಿ ಪಟ್ಟಣಗಳ ಜನರನ್ನು ಅನುಭವ ಪಥದತ್ತ ಆಕರ್ಷಿಸಿದವರು.
ಲಿಂಗಾಯತ ಮಹಾಮಠ ಮತ್ತು ಬಸವ ಸೇವಾ ಪ್ರತಿಷ್ಠಾನ ಹುಟ್ಟು ಹಾಕಿ ತನ್ಮೂಲಕ ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ವಚನ ಪಠಣ ಅಭಿಯಾನ, ಶಿವಯೋಗ ಸಾಧಕರ ಕೂಟ, ವಾರದ ಅನುಭವ ಮಂಟಪ ಮತ್ತು ಬಸವ ಭಾರತಿ ಸಂಸ್ಕಾರ ಶಿಬಿರ, ನೀಲಮ್ಮನ ಬಳಗ, ಮುಂತಾದ ಯೋಜನೆಗಳಿಂದ ಕುಟುಂಬಗಳಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿದವರು.
ವಚನ ವಿಜಯೋತ್ಸವದ ಮೂಲಕ ವಚನಗಳ ಮೆರವಣಿಗೆ, ವಚನ ಸಾಹಿತ್ಯಕ್ಕೆ ಪಟ್ಟಕಟ್ಟುವಿಕೆ, ಅವರ ವಿನೂತನ ಮಾದರಿಯ ಕಾರ್ಯಕ್ರಮಗಳು.
ಲಿಂಗಾಯತ ಮಹಾಮಠ ಬಸವಗಿರಿ ಬೀದರ ಬಸವಭಕ್ತರ ತಾತ್ವಿಕ ಶ್ರದ್ಧಾ ಕೇಂದ್ರವಾಗಿದೆ. ಬಸವಗಿಯಲ್ಲಿ ಗುರುವಚನ ಪರುಷಕಟ್ಟೆ ನಿರ್ಮಿಸುತ್ತಿರುವುದು ಅಕ್ಕನವರ ಮಹಾದಾಸೆಯಾಗಿತ್ತು .
ಅಕ್ಕನವರು ಸಮಾಜಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿರುವುದೇನೆಂದರೆ ಅದು ಪ್ರಭುದೇವ ಮಹಾಸ್ವಾಮೀಜಿಯವರು. ಅಕ್ಕನವರ ಕನಸು ನನಸು ಮಾಡಲು ಪೂಜ್ಯರು ಹಗಲಿರಳು ಶ್ರಮಿಸುತ್ತಾ ನಮ್ಮಂತ ಮಕ್ಕಳಲ್ಲಿ ಮಕ್ಕಳಾಗಿ, ಯುವಕರಲ್ಲಿ ಯುವಕರಾಗಿ, ಹಿರಿಯರಲ್ಲಿ ಹಿರಿಯರಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರವಚನ ಮುಖಾಂತರ ಬಸವತತ್ವ ಬಿತ್ತುತ್ತಿದ್ದಾರೆ ಎಂದು ತಿಳಿಸಿದರು.
ಲಿಂಗಾಯತ ಸೇವಾದಳ ಗೋರಟಾ ಗ್ರಾಮದ ಅಧ್ಯಕ್ಷರಾದ ಶರಣ ಸುಪ್ರೀತ ಪತಂಗೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶಂಕ್ರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಲಿಂಗಾಯತ ಸೇವಾದಳದ ಹಾಲಳ್ಳಿಯ ಅಧ್ಯಕ್ಷರಾದ ಶರಣ ಸದಾನಂದ ಬಿರಾದರ ಸ್ವಾಗತ ಕೋರಿದರು. ದತ್ತಾತ್ರಿ ಪಾಟೀಲ ನಿರೂಪಣೆ ಗೈದರು. ನೀಲಮ್ಮನ ಬಳಗದ ಶರಣೆಯರು ಹಾಗೂ ಗ್ರಾಮದ ಹಿರಿಯರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
