ಕಲಬುರಗಿ:
ಕಳೆದ 14 ವರ್ಷಗಳಿಂದ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬಸವ ಸಮಿತಿಯ ಅಕ್ಕನ ಬಳಗವು ನಗರದ ಅನುಭವ ಮಂಟಪದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಪುಷ್ಪಾ ವಾಲಿ ಅವರ ಸರ್ವಾಧ್ಯಕ್ಷತೆಯಲ್ಲಿ 15ನೇ ಮಹಾದೇವಿ ಅಕ್ಕಗಳ ಸಮ್ಮೇಳನ ಡಿ.13 ಮತ್ತು 14ರಂದು ನಡೆಯುತ್ತಿದೆ.
ಈ ಬಾರಿಯ ಸಮ್ಮೇಳನದಲ್ಲಿ ಶನಿವಾರ ಸಂಜೆ ಜರುಗಿದ ಸೊನ್ನಲಗಿ ಸಿದ್ಧರಾಮ ಎಂಬ ಅಮರ ಹಿರೇಮಠ ಅವರ ರಚನೆ ಮತ್ತು ನಿರ್ದೇಶನದ ರೂಪಕ ಗಮನ ಸೆಳೆಯುವಂತಿತ್ತು.

ಜಯಶ್ರೀ ಚಟ್ನಳ್ಳಿ, ಅನುರಾಧಾ, ಸರೋಜಾ ಜಾಕರೆಡ್ಡಿ, ಮೈತ್ರಾ ಕುಣಚಿ, ಸಾಕ್ಷಿ ಸತ್ಯಂಪೇಟೆ ಮುಂತಾದ ಗೃಹಿಣಿಯರು ಸೇರಿ ಆಭ್ಯಾಸ ಮಾಡಿ (practice) ನಟಿಸಿದ ಈ ನಾಟಕ ಸಿದ್ದರಾಮಯ್ಯ ಮತ್ತು ಮಲ್ಲಯ್ಯನ ಭೇಟಿಯಿಂದ ಶರಣನಾದ ಪರಿಯನ್ನು ಬಿಚ್ಚಿಡುವಂತಿತ್ತು.
ರೂಪಕದ ಸಾರಾಂಶ:
ಸಿದ್ಧರಾಮ ಮಲ್ಲಯ್ಯ ಎಂದು ಕೂಗಿದಾಗ ಪ್ರತ್ಯಕ್ಷನಾಗುವ ಮಲ್ಲಯ್ಯ ಮಗುವನ್ನು ಸಂತೈಸಲು ಪ್ರಯತ್ನಪಡುತ್ತಾನೆ. ಇಲ್ಲ ನೀನು ಮೋಸಗಾರ. ದೇವರೊಬ್ಬನೆ ಎಂದು ಹೇಳುತ್ತಿ, ನಾ ಕರೆದಾಗ ಏಕೆ ಬರುವುದಿಲ್ಲ. ಇಗೋ ನಾ ತಂದ ಅಂಬಲಿ, ಮಜ್ಜಿಗಿ, ಮೊಸರನ್ನ ತಿನ್ನು ಎಂಬ ಸನ್ನಿವೇಶದಿಂದ ಆರಂಭವಾಗುವ ಈ ರೂಪಕ, ಸಿದ್ಧರಾಮ ಮತ್ತು ಮಲ್ಲಯ್ಯರ ಮಧ್ಯೆ ಅತ್ಯಂತ ಗಹನವಾದ ಮತ್ತು ಸುಧೀರ್ಘ ಸಂವಾದ ನಡೆದು ಕೊನೆಗೆ ಸಿದ್ಧರಾಮ ಸಾಕ್ಷಾತ್ ಶಿವನಿಂದ ಲಿಂಗದೀಕ್ಷೆ ಪಡೆದು ಸೊನ್ನಲಿಗೆಯ ಶ್ರೇಷ್ಠ ಶರಣನಾಗಿ ಮೆರೆಯುತ್ತಾನೆ. ಆಗ ಎಲ್ಲರೂ ಶ್ರೀ ಸಿದ್ಧರಾಮೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷ ಹಾಕುವ ಸನ್ನಿವೇಶದೊಂದಿಗೆ ರೂಪಕ ಮುಕ್ತಾಯವಾಗುತ್ತದೆ.

ಸುಗ್ಗವ್ವೆಯ ಪಾತ್ರದಲ್ಲಿ ಅನುರಾಧಾ, ಮುದ್ದುಗೌಡನ ಪಾತ್ರದಲ್ಲಿ ಮೈತ್ರಾ ಕುಣಚಿ, ಮಲ್ಲಯ್ಯನ ಪಾತ್ರದಲ್ಲಿ ಜಯಶ್ರೀ ಚಟ್ನಳ್ಳಿ, ಸಿದ್ಧರಾಮನ ಪಾತ್ರದಲ್ಲಿ ಸರೋಜಾ ಜಾಕರೆಡ್ಡಿ, ಹಿರಿಯನ ಪಾತ್ರದಲ್ಲಿ ಸಾಕ್ಷಿ ಶಿವರಂಜನ ಸತ್ಯಂಪೇಟೆ, ಕಂಬಿ ಹಿರಿಯನ ಪಾತ್ರದಲ್ಲಿ ರಾಜೇಶ್ವರಿ ಕೆರೂರ ಮಿಂಚಿದರು.
ಸುಮಾರು 20 ನಿಮಿಷದ ಈ ರೂಪಕ ಸಿದ್ದರಾಮನ ಶರಣ ಚರಿತ್ರೆಯನ್ನು ಕಟ್ಟಿಕೊಡುವಂತಿತ್ತು. ಮಹಿಳೆಯರೇ ಸೇರಿಕೊಂಡು ಅವರುಗಳೇ ಸ್ತ್ರೀ-ಪುರುಷ ಪಾತ್ರಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಅನಿಸಿಕೊಂಡರು.

