ಎಲ್ಲರೂ ಗೌರವಿಸುವ ಸುತ್ತೂರು ಸ್ವಾಮೀಜಿ: ಬಿ.ಎಲ್.‌ಸಂತೋಷ್‌ ಪ್ರಶಂಸೆ

ಬಸವ ಮೀಡಿಯಾ
ಬಸವ ಮೀಡಿಯಾ

ಮಳವಳ್ಳಿ

ಸುತ್ತೂರು ಶ್ರೀಮಠ ಎಲ್ಲ ಧರ್ಮಗಳನ್ನು ಒಂದೂಗೂಡಿಸಿ‌ ಭಾವೈಕ್ಯ ಸಾರತ್ತಿದೆ. ಅದಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀಮಠವನ್ನು ಎಲ್ಲರೂ ಗೌರವಿಸುತ್ತಿದ್ದಾರೆ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.‌ಸಂತೋಷ್‌ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿ ಅವರ 1066ನೇ ಜಯಂತ್ಯುತ್ಸವದಲ್ಲಿ ನಾಲ್ಕನೇ ದಿನವಾದ ಗುರುವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಜನರ ಮನದಲ್ಲಿ ವಿಶಾಲವಾದ ಮನೋಭಾವ ಮೂಡಿ ಸಮಾಜದಲ್ಲಿನ ಅಹಿಷ್ಣುತೆ ಕಡಿಮೆಯಾಗುತ್ತದೆ.

‘ಧರ್ಮದ ಹೆಸರಿನಲ್ಲಿ ಬಡಿದಾಡಬಾರದು, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಕನಿಷ್ಠ ಎಂದು ಆಲೋಚಿಸುವ ಬದಲು ಸತ್ಯದ ಕಡೆ ಕೊಂಡೊಯ್ಯುವ ಯಾವುದೇ ಧರ್ಮವಾದರೂ ಸರಿ ಅದನ್ನು ನಾವು ಗೌರವಿಸಬೇಕು’ ಎಂದು ಬಿ.ಎಲ್. ಸಂತೋಷ್‌ ಕರೆ ನೀಡಿದರು

ಜಮಾತ್‌ ಕಾರ್ಯದರ್ಶಿ ಭಾಷಣ

ಉಡುಪಿ ಜಮಾತ್‌ ಎ ಇಸ್ಲಾಮಿ ಹಿಂದ್‌ ಕಾರ್ಯದರ್ಶಿ ಅಕ್ಬರ್‌ ಅಲಿ ಸಾಮಾಜಿಕ ಭಾವೈಕ್ಯತೆ ಎಂಬ ವಿಷಯವಾಗಿ ಮಾತನಾಡಿ ನಾಡಿನಲ್ಲಿಂದು ಮಾನವೀಯತೆ ಮೌಲ್ಯ ಕುಸಿಯುತ್ತಿದೆ. ಅನೇಕರು ಹೆತ್ತ ತಂದೆ- ತಾಯಂದಿರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ಮೌಲ್ಯವನ್ನು ಹಾಳು ಮಾಡುತ್ತಿದ್ದಾರೆ, ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

ಶಿವರಾಜ್ ಕುಮಾರ್ ಹಾಡು

‘ವಿಚಾರ ಲಹರಿ’ ಕೃತಿ ಬಿಡುಗಡೆಗೊಳಿಸಿ ಚಲನಚಿತ್ರ ನಟ ಶಿವರಾಜ್‌ ಕುಮಾರ್‌ ಮಾತನಾಡಿ, ನಾಡಿನಲ್ಲಿ ಸುತ್ತೂರು ಮಠದ ಸೇವೆ ಅನನ್ಯವಾಗಿದೆ. ನಮ್ಮ ಕುಟುಂಬ ಹಿಂದಿನಿಂದಲೂ ಮಠದೊಂದಿಗೆ ಬಾಂಧವ್ಯ ಹೊಂದಿದೆ ಎಂದು ಸ್ಮರಿಸಿದರು.

‘ಮುತ್ತಣ್ಣ ಪೀಪಿ ಊದುವ ಮುತ್ತಣ್ಣ ಡೋಲು ಬಡಿಯುವ’, ‘ಗೊಂಬೆ ಹೇಳುತೈತೆ’ ಮುಂತಾದ ಗೀತೆಗಳನ್ನು ಹಾಡಿ, ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಮುರುಗೇಶ್‌ ನಿರಾಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಕೆ ಆರ್‌ ಐ ಡಿಎಲ್‌ ಮಾಜಿ ಅಧ್ಯಕ್ಷ ರುದ್ರೇಶ್‌, ತೋಂಟದಾರ್ಯ, ಉದ್ಯಮಿಗಳಾದ ಅಮರ್‌ ನಾಥ್‌ ಗೌಡ, ನಿಶಾಂತ್‌, ಉಮಾಪತಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಮಾರೇಹಳ್ಳಿ ಆದರ್ಶ ಶಾಲೆ, ಭೂವಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ರೂಪಕ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
4 Comments

Leave a Reply

Your email address will not be published. Required fields are marked *