ಲಿಂಗಾಯತ ಇತಿಹಾಸ ತಿರಸ್ಕರಿಸುವವರು ಲಿಂಗಾಯತ ಸಮಾಜವನ್ನೂ ತಿರಸ್ಕರಿಸಲಿ
ಬೆಂಗಳೂರು
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳ 1066ನೇ ಜಯಂತಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಶ್ರೀಮಠದ ಮಠಾಧಿಪತಿ ಪೂಜ್ಯ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು, “ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಶ್ರೀಮಠದ ಪ್ರಥಮ ಜಗದ್ಗುರುಗಳಾಗಿದ್ದು, ಈ ಮಠಕ್ಕೆ 10ನೇ ಶತಮಾನದಿಂದಲೂ ಅಸ್ತಿತ್ವವಿದೆ” ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ “ಆದಿಯೋಗಿಗಳು ನಿಜವಾಗಿಯೂ 10ನೇ ಶತಮಾನದಲ್ಲಿ ಇದ್ದರೇ?”, “ಆ ಕಾಲದ ಮಠವು ಲಿಂಗಾಯತ ಅಥವಾ ವೀರಶೈವ ಪರಂಪರೆಗೆ ಸೇರಿದ್ದಿತ್ತೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ಸಾಮಾನ್ಯ ಲಿಂಗಾಯತರು ಹಾಗೂ ಬಸವಾಭಿಮಾನಿಗಳಲ್ಲಿ ಚರ್ಚೆ ಮತ್ತು ಗೊಂದಲಕ್ಕೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ವಿಷಯವನ್ನು ಭಾವನಾತ್ಮಕವಾಗಿ ಅಲ್ಲ, ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಯ ಆಧಾರದಲ್ಲಿ ಪರಿಶೀಲಿಸುವುದು ಅಗತ್ಯವಾಗಿದೆ.

ಮೊದಲು ಸ್ಪಷ್ಟಪಡಿಸಬೇಕಾದ ಸತ್ಯವೇನೆಂದರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಉದ್ಭವಿಸಿದ ಸಾಮಾಜಿಕ–ಧಾರ್ಮಿಕ ಚಳವಳಿಯಾಗಿದೆ. 10ನೇ ಶತಮಾನದಲ್ಲಿ ಲಿಂಗಾಯತ ಅಥವಾ ವೀರಶೈವ ಎಂಬ ಪ್ರತ್ಯೇಕ ಧರ್ಮ ಅಥವಾ ಸಂಪ್ರದಾಯ ಅಸ್ತಿತ್ವದಲ್ಲಿರಲಿಲ್ಲ. ಆದ್ದರಿಂದ 10ನೇ ಶತಮಾನದಲ್ಲಿ ಇದ್ದಿರಬಹುದಾದ ಯಾವುದೇ ಮಠವನ್ನು “ಲಿಂಗಾಯತ ಮಠ” ಎಂದು ಕರೆಯುವುದು ಐತಿಹಾಸಿಕವಾಗಿ ಸರಿಯಲ್ಲ.
ಕಾಳಾಮುಖ ಪರಂಪರೆ
10ನೇ ಶತಮಾನದ ಶಾಸನಗಳು, ತಾಮ್ರಶಾಸನಗಳು ಹಾಗೂ ಪುರಾತತ್ವ ಅಧ್ಯಯನಗಳಿಂದ ತಿಳಿದುಬರುವಂತೆ, 9ರಿಂದ 11ನೇ ಶತಮಾನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಳಾಮುಖ ಶೈವ ಪರಂಪರೆ ಅತ್ಯಂತ ಪ್ರಬಲವಾಗಿತ್ತು.
ಕಾಳಾಮುಖರು ಪಾಶುಪತ ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದು, ಶಿವನ ಆರಾಧನೆ, ಭಸ್ಮಧಾರಣೆ, ವ್ರತ–ನಿಯಮಗಳು ಹಾಗೂ ಶೈವ ಆಗಮಾಧಾರಿತ ಆಚರಣೆಗಳನ್ನು ಪಾಲಿಸುತ್ತಿದ್ದರು.
ಇತಿಹಾಸಕಾರರಾದ ಡಾ. ಡಿ.ಸಿ. ಸಿರ್ಕಾರ್, ಡಾ. ಎಂ. ಚಿದಾನಂದಮೂರ್ತಿ, ಪ್ರೊ. ಶೆಟ್ಟರ್ ಮುಂತಾದವರು ತಮ್ಮ ಸಂಶೋಧನಾ ಕೃತಿಗಳಲ್ಲಿ, ಕರ್ನಾಟಕದ ಅನೇಕ ಪುರಾತನ ಮಠಗಳು ಮೊದಲಿಗೆ ಕಾಳಾಮುಖ ಶೈವ ಕೇಂದ್ರಗಳಾಗಿದ್ದವು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಈ ಹಿನ್ನೆಲೆಯನ್ನು ಗಮನಿಸಿದರೆ, 10ನೇ ಶತಮಾನದಲ್ಲಿ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಕಾಳಾಮುಖ ಶೈವ ಪರಂಪರೆಯ ಸ್ವಾಮಿಯಾಗಿದ್ದಿರಬೇಕು ಎಂದು ಹೇಳಬಹುದು.
ಬಸವಯುಗ
12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದ ಶರಣರು ಅಂದಿನ ಶೈವ ಧರ್ಮದ ಒಳಗೇ ಒಂದು ಮಹತ್ವದ ಕ್ರಾಂತಿಯನ್ನು ಆರಂಭಿಸಿದರು.
ಜಾತಿ ವ್ಯವಸ್ಥೆ, ಕರ್ಮಕಾಂಡ, ಮಠ–ಮಂದಿರದ ಪುರೋಹಿತಶಾಹಿಯನ್ನು ತಿರಸ್ಕರಿಸಿ, ಇಷ್ಟಲಿಂಗ ಧಾರಣೆ, ಅನುಭವ ಮಂಟಪ, ಕಾಯಕ–ದಾಸೋಹ ಎಂಬ ಮಾನವೀಯ ತತ್ವಗಳನ್ನು ಪ್ರತಿಷ್ಠಾಪಿಸಿದರು. ಇದುವೇ ಲಿಂಗಾಯತ ಧರ್ಮದ ಮೂಲತತ್ವ.
ಈ ಕಾಲಘಟ್ಟದಲ್ಲಿ ಕಾಳಾಮುಖ ಶೈವ ಪರಂಪರೆಯ ಅನೇಕ ಸ್ವಾಮಿಗಳು ಮತ್ತು ಶೈವಸ್ಥಾನಗಳು ಬಸವತತ್ವದ ಪ್ರಭಾವಕ್ಕೆ ಒಳಗಾಗಿ, ತಮ್ಮ ಮೂಲ ಶೈವ ಆಚರಣೆಗಳನ್ನು ತೊರೆದು ಇಷ್ಟಲಿಂಗಧಾರಿಗಳಾಗಿ ಲಿಂಗಾಯತ ಧರ್ಮವನ್ನು ಅನುಸರಿಸಿದರು. ಇದು ಕೇವಲ ಧಾರ್ಮಿಕ ಬದಲಾವಣೆ ಮಾತ್ರವಲ್ಲ, ಒಂದು ದೊಡ್ಡ ಸಾಮಾಜಿಕ ಪರಿವರ್ತನೆಯಾಗಿತ್ತು.
ವಿರಕ್ತ ಪರಂಪರೆ
ಬಸವಯುಗದ ನಂತರ ಲಿಂಗಾಯತ ಧರ್ಮದಲ್ಲಿ ವಿರಕ್ತ ಮಠಗಳ ಪರಂಪರೆ ರೂಪುಗೊಂಡಿತು. ಈ ಮಠಗಳು ಶೈವ ಆಗಮಾಧಾರಿತವಲ್ಲ; ಬದಲಾಗಿ ವಚನ ಸಾಹಿತ್ಯ, ಶರಣ ಸಂಪ್ರದಾಯ ಮತ್ತು ಬಸವಾದಿ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಮುಂದುವರಿದವು.
ಇಂದಿನ ಸುತ್ತೂರು ಮಠದ ಆಚರಣೆಗಳನ್ನು ಪರಿಶೀಲಿಸಿದರೆ ಅಲ್ಲಿ ಇಷ್ಟಲಿಂಗ ಪೂಜೆ, ವಚನ ಪಾಠ, ಶರಣ ಸಂಪ್ರದಾಯ ಇದೆ. ಶ್ರೀಮಠವು ಶೈವ ಪರಂಪರೆಯಿಂದ ವಿರಕ್ತ ಪರಂಪರೆಗೆ ಹೊರಳಿರುವುದು ಕಾಣಿಸುತ್ತದೆ.

ಜಯಂತಿ ಆಚರಣೆ
ಈ ಹಿನ್ನೆಲೆಯಲ್ಲಿ, 10ನೇ ಶತಮಾನದಲ್ಲಿ ಇದ್ದಿರಬಹುದಾದ ಕಾಳಾಮುಖ ಶೈವ ಸ್ವಾಮಿಯ ಜಯಂತಿಯನ್ನು, ಅದು ಕೂಡ ಭಾರತದ ರಾಷ್ಟ್ರಪತಿಗಳ ಸಮ್ಮುಖದಲ್ಲಿ, ವಿಜೃಂಭಣೆಯಿಂದ ಆಚರಿಸಿರುವುದು ಶೈವ ಪರಂಪರೆಯನ್ನು ಮಹಿಮೆಪಡಿಸಿದಂತಾಗಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಇಡೀ ಕಾರ್ಯಕ್ರಮದಲ್ಲಿ ಬಸವಣ್ಣನವರ ಹೆಸರು, ಫೋಟೋ ಕಾಣಿಸದಂತೆ ನೋಡಿಕೊಂಡಿರುವುದು ನೋಡಿದರೆ ಇವರಿಗೆ ಲಿಂಗಾಯತರಾಗಿರಲು ಇಷ್ಟವಿಲ್ಲವೆಂದು ತೋರುತ್ತದೆ.
ಇದು ಉದ್ದೇಶಪೂರ್ವಕವಾಗಿ ಲಿಂಗಾಯತ ಧರ್ಮವು ಶೈವ ಧರ್ಮದ ಉಪಶಾಖೆಯೆಂಬ ತಪ್ಪು ಕಲ್ಪನೆ ಬಿಂಬಿಸಿ ಬಸವಣ್ಣನವರ ಧಾರ್ಮಿಕ–ಸಾಮಾಜಿಕ ಕ್ರಾಂತಿಯನ್ನು ಅಳಿಸಲು ನಡೆಯುತ್ತಿರುವ ಪ್ರಯತ್ನದಂತೆ ತೋರುತ್ತದೆ.
ಇದರಿಂದ ಸಾಮಾನ್ಯ ಲಿಂಗಾಯತರು ಹಾಗೂ ಬಸವಾಭಿಮಾನಿಗಳಲ್ಲಿ ಗೊಂದಲ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಐತಿಹಾಸಿಕ ಪ್ರಾಮಾಣಿಕತೆಯಿರಲಿ
ಶ್ರೀಮಠದ ಪುರಾತನ ಇತಿಹಾಸವನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ನಂತರದ ಐತಿಹಾಸಿಕ ಬೆಳವಣಿಗೆಗಳನ್ನು ತಿರಸ್ಕರಿಸುತ್ತಿರುವುದು ಯಾವ ಕಾರಣಕ್ಕೆ?
ಇತಿಹಾಸವನ್ನು ಗೌರವಿಸುವುದೇ ಮಠದ ಗೌರವ. ಇತಿಹಾಸವನ್ನು ಮರೆತರೆ ಯಾರಿಗೂ ಶ್ರೇಯಸ್ಸಲ್ಲ. ಇದನ್ನು ಸುತ್ತೂರು ಸ್ವಾಮೀಜಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಿ. ಅವರು ಲಿಂಗಾಯತ ಇತಿಹಾಸವನ್ನು ತಿರಸ್ಕರಿಸುವಂತೆ ಲಿಂಗಾಯತ ಸಮಾಜವನ್ನೂ ತಿರಸ್ಕರಿಸಲಿ ನೋಡೋಣ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g
b

ಕಾಳಮುಖ ಶೈವರು ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮ ಸೇರಿರುವುದು ಸತ್ಯ
ಹೌದು . . . ಬಸವಾನುಯಾಯಿ ಮಲೈ ಮಹದೇಶ್ವರರು ಗುರು ಮಲ್ಲೇಶರರ ಪವಿತ್ರ ಪ್ರಾಂತ್ಯಗಳಲ್ಲಿ ಶೈವ ಸಂಪ್ರದಾಯದ ಕಾಳಾಮುಖಿಗಳನ್ನು ವೈಭವೀಕರಿಸುತ್ತಿರುವುದು… . ಆದೂ ಅಪ್ಪಟ ಶರಣ ಸಂಪ್ರದಾಯದ ಮಠದಿಂದ … ಏಕೆಂಬುದೇ ತಿಳಿಯದಂತೆ ಆಗಿದೆ !