ಬೆಳಗಾವಿ:
ಸಮಾಜದ ಅಭಿವೃದ್ಧಿ ಸಾಧಿಸಬೇಕಾದರೆ ಚದುರಿ ಭಿನ್ನವಾಗಿರುವ ಎಲ್ಲರೂ ಒಗ್ಗೂಡಿ, ಸಮರ್ಥ ನಾಯಕತ್ವದಲ್ಲಿ ಮುಂದುವರೆದರೆ ಮಾತ್ರ ಸಾಧ್ಯವಾಗುತ್ತದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ ತಿಳಿಸಿದರು.
ರವಿವಾರ ಮಹಾಂತೇಶ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ‘ ವಚನ ಚಿಂತನ ಮತ್ತು ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಹಾಕಿಕೊಟ್ಟ ಬುನಾದಿ, ಆ ಏಕತೆ ಈಗ ಕಾಣಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಒಂದಾಗಬೇಕಿದೆ. ಬಲಾಢ್ಯವಾಗಿರುವ ಲಿಂಗಾಯತ ಸಮಾಜಕ್ಕೆ ಬಲಬರಲು ಒಂದಾಗುವುದು ಪ್ರಸ್ತುತ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ರತ್ನಪ್ರಭ ಹೇಳಿದರು.
ಲಿಂಗಾಯತ ವೀರಶೈವ ಮಹಾಸಭಾ ವತಿಯಿಂದ ವಿದ್ಯಾರ್ಥಿನಿಯರ ವಸತಿ ನಿಲಯ ಪೂರ್ಣಗೊಳಿಸಿ ಉದ್ಘಾಟನೆ ಮಾಡುವಲ್ಲಿ ವಿಶೇಷ ಸೇವೆ ಸಲ್ಲಿಸಿದ ರತ್ನಪ್ರಭಾ ಬೆಲ್ಲದ ಅವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

2025 ನೇ ಸಾಲಿನ ವಿಶೇಷ ಸೇವಾ ವಿಭಾಗದಲ್ಲಿ ಬುಡಬುಡಕೆ ಕಲಾವಿದ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ವಿಜೇತರಾದ ಪುಂಡಲಿಕ ಶಾಸ್ತ್ರಿ ಅವರನ್ನು ಸಹ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಆಚಾರ ನಡೆ-ನುಡಿಗಳಲ್ಲಿ ಒಂದಾಗಿದ್ದರೂ, ಅಭಿಪ್ರಾಯಗಳ ಭಿನ್ನತೆಯಿಂದ ಸಮಾಜದಲ್ಲಿ ಸ್ವಲ್ಪ ಬಿರುಕು ಉಂಟಾಗಿದೆ. ಎಲ್ಲರೂ ಚರ್ಚಿಸುವ ಮೂಲಕ ಒಗ್ಗೂಡಿ ಮುಂದುವರೆಯೋಣ ಎಂದರು.
ಶಂಕರ ಗುಡಸ, ವಿ.ಕೆ. ಪಾಟೀಲ ಶರಣರ ವಿಚಾರ ಮತ್ತು ಪ್ರಸ್ತುತ ಸಮಾಜ ಕುರಿತಾಗಿ ಮಾತನಾಡಿದರು.
ಆನಂದ ಕರ್ಕಿ, ಸುರೇಶ ನರಗುಂದ, ಶಿವಾನಂದ ನಾಯಕ, ಬಾಬು ತಿಗಡಿ ಶಿವಾನಂದ ತಲ್ಲೂರ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ, ಬಸವರಾಜ ಕರಡಿಮಠ, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಸಿ.ಎಂ ನರಸನ್ನವರ, ಆರ್. ಅನೀಲ, ಸುದೀರ ರಘಶೆಟ್ಟಿ, ಜಯಶ್ರೀ ಚವಲಗಿ, ಶ್ರೀದೇವಿ ನರಗುಂದ, ಮಂಗಳ ಕಾಕತಿಕರ, ಮಹದೇವ ಕೆಂಪಿಗೌಡ್ರ, ಸುನಂದ ಕೆಂಪಿಗೌಡ್ರ, ಜಯಶ್ರೀ ನಷ್ಟೆ, ವಿದ್ಯಾ ಕರ್ಕಿ ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಎಂ.ವೈ. ಮೆಣಸಿನಕಾಯಿ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
