ತರೀಕೆರೆ
ಡಾ. ಪಂಡಿತರಾಧ್ಯ ಶ್ರೀಗಳಿಗೆ ಬಸವ ದೀಕ್ಷೆಯಾಗಿ ಇಂದಿಗೆ 48 ವರ್ಷ ತುಂಬಿದ ಹರ್ಷ.
ಬಲಿದಾನವನ್ನು ಸಹನೆಯಿಂದಲೇ ಸ್ವೀಕರಿಸಿದ ಶಾಂತಿಯ ರಾಯಭಾರಿ ಏಸುಕ್ರಿಸ್ತ ಮತ್ತು ಬಸವಣ್ಣನವರ ಅನುಭವ ಮಂಟಪದಲ್ಲಿ ಸುಜ್ಞಾನದ ಕೀರ್ತಿಯಾಗಿದ್ದ ಮಾದರ ಚೆನ್ನಯ್ಯ ಹುಟ್ಟಿದ ದಿನದಂದೇ ಜನಕಲ್ಯಾಣಕ್ಕಾಗಿ, ಮನಕಲ್ಯಾಣಕ್ಕಾಗಿ, ಲೋಕಕಲ್ಯಾಣಕ್ಕಾಗಿ ಮಠದ ಜವಾಬ್ದಾರಿ ವಹಿಸಿಕೊಂಡು; ಗೊಡ್ಡು ಸಂಪ್ರದಾಯಗಳ ಪರ ಹೆಚ್ಚಿರುವವರ ನಡುವೆ ಬಸವತತ್ವಗಳ ಮುಖೇನ ಯಶಸ್ಸು ಕಾಣುವ ಕಷ್ಟದ ಸಾಧನೆಯನ್ನು ಮಾಡುವಲ್ಲಿ ಪೂಜ್ಯ ಪಂಡಿತರಾಧ್ಯರು ಸಫಲರಾಗಿದ್ದಾರೆ.
ಬಸವಾದಿ ಪ್ರಮಥರ ಕಲ್ಯಾಣದ ಬೆಳಕನ್ನು ಹರಡುವುದೆಂದರೆ ಸತ್ಯಗಳ ಜೊತೆ ಪ್ರಯೋಗಕ್ಕೆ ಇಳಿಯುವುದು. ಬಸವಾದಿ ಶರಣರು ತೋರಿಸಿದ್ದ ನ್ಯಾಯ ಮತ್ತು ನಿಷ್ಠೂರದ ಹಾದಿಯಲ್ಲಿ ಒಂದು ಮಠವನ್ನು ಕಟ್ಟುವ, ಅದೇ ತತ್ವದಡಿಯಲ್ಲಿ ಸಮಾಜವನ್ನು ಕಟ್ಟುವ ಬಲು ತ್ರಾಸದಾಯಕ ಸವಾಲನ್ನು ಸ್ವೀಕರಿಸಿ 12ನೇ ಶತಮಾನ ಮತ್ತು 21ನೇ ಶತಮಾನದ ನಡುವೆ ಕಲ್ಯಾಣದ ಸೇತುವೆಯೊಂದನ್ನು ಕಟ್ಟುವಲ್ಲಿ
ಪೂಜ್ಯ ಪಂಡಿತರಾಧ್ಯರು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.
ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ಬದುಕಿನುದ್ದಕ್ಕೂ ನಡೆಯುವುದು ಕಷ್ಟ ಎನ್ನುವುದನ್ನು ಸುಲಭ ಮಾಡಿಕೊಂಡು ಬದುಕುತ್ತಿರುವ ಬೆರಳೆಣಿಕೆಯ ಶ್ರೀಗಳಲ್ಲಿ ಸಾಣೇಹಳ್ಳಿ ಪೂಜ್ಯರೇ ಪ್ರಥಮರು ಮತ್ತು ಪ್ರಮಥರು.
ಸ್ವಾಮೀಜಿ ಅಂದರೆ ಕಾವಿದಾರಿ ಅಷ್ಟೇಯಲ್ಲ, ಸ್ವಾಮೀಜಿ ಅಂದರೆ ಸರ್ವರಿಗೂ ಲೇಸನ್ನು ಬಯಸುವ ಬಸವತನವನ್ನು, ಬದುಕಿನ ಅಹಿಂಸಾ ಸಿದ್ಧಾಂತದ ಮೂಲಕ ಶರಣರ ಚಿಂತನೆಗಳೊಂದಿಗೆ ತಾನು ಮೊದಲು ಬೆಸೆದುಕೊಂಡು, ಅದರಂತೆ ಬದುಕಿ, ನುಡಿದಂತೆ ನಡೆದು, ನಡೆದಂತೆ ನುಡಿದು ಜನಕಲ್ಯಾಣಕ್ಕಾಗಿ ಸವೆಯುತ್ತಿರುವ ಸಾಣೇಹಳ್ಳಿ ಪೂಜ್ಯರ ಬಗ್ಗೆ ಬರೆಯಲು ಪದಗಳೇ ಸೋಲುತ್ತವೆ. ಜೊತೆಗೆ ನನ್ನ ಜ್ಞಾನವೂ ಸಾಲದು.
ದೇವರು ಮತ್ತು ಧರ್ಮದ ಹೆಸರಿನಲ್ಲಿ ಮನುಷ್ಯ ಬಂಧಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ವೇದಗಳ ಹಿಂದೆ ಹರಿಯದೇ, ಶಾಸ್ತ್ರಗಳ ಹಿಂದೆ ಸುಳಿಯದೇ, ಪುರಾಣಗಳ ಹಿಂದೆ ಬಳಲದೇ ಬಸವಾದಿ ಶರಣರ ಅಂಗಳದಲ್ಲಿದ್ದುಕೊಂಡು ದಯವಿಲ್ಲದ ಧರ್ಮಗಳಿಂದ ದೂರ ಸರಿದು, ತನಗೆ ಮುನಿದವರಿಗೆ ತಾನು ಮುನಿಯದೇ, ಕಾಯಕ ದಾಸೋಹ ಜಂಗಮ ಸೇವೆಯಂತಹ ತತ್ವಗಳ ಉತ್ಸವವನ್ನು ನಿತ್ಯೋತ್ಸವವನ್ನಾಗಿಸಿದ ಬಸವ ಜೀವಿ ಪೂಜ್ಯ ಪಂಡಿತರಾಧ್ಯರು “ಮತ್ತೆ ಕಲ್ಯಾಣಕ್ಕಾಗಿ” ವಿಶ್ರಮಿಸದೇ ಹೋರಾಡುತ್ತಿದ್ದಾರೆ.
ಪೂಜ್ಯರು ಬಸವ ಸಂಜೀವಿನಿಯಾಗಿ ನಾಡಿನ ಕಲ್ಯಾಣಕ್ಕಾಗಿ ಹೀಗೆ ಧಾರ್ಮಿಕ ನಾಯಕತ್ವವನ್ನು ಬಸವಾದಿ ಶರಣರ ಸತ್ವತತ್ವದಲ್ಲಿ ಹೊಯ್ಯುತ್ತಿರುವ ಸಾಣೇಹಳ್ಳಿ ಪೂಜ್ಯರ ನೆನಪೇ ಒಂದು ತಂಗಾಳಿ.
ಧೈರ್ಯ-ಸಮಾಧಾನ, ಪ್ರೀತಿ-ನೀತಿ, ಪರ-ವಿರೋಧ, ಒಪ್ಪುವ ತಿರಸ್ಕರಿಸು, ಅಂತರಂಗ – ಬಹಿರಂಗ, ಮೌಲ್ಯ – ಮೌಢ್ಯ, ಆ ಧರ್ಮ – ಈ ಧರ್ಮ ಇಂತಹ ಅನೇಕ ವಿಚಾರಗಳ ನಡುವೆ ಅದೆಷ್ಟೊಂದು ಪಾರದರ್ಶಕವಾದ ಆದರ್ಶಪೂರ್ಣ ನಿಲುವನ್ನು ತೋರಿಸಿರುವ ಸಾಣೇಹಳ್ಳಿ ಪೂಜ್ಯರ ಬಸವರ ಹಾದಿ ನಮಗೆಲ್ಲ ಕಲ್ಯಾಣದ ಸಂಭ್ರಮ.
ಇಂತಹ ಪೂಜ್ಯರ ಪರಂಪರೆಗಾಗಿ ಈ ನಾಡಿನ ನೆಲ ಹಸಿದಿದೆ. ಈ ತಳಿಯ ನಿಲುವುಗಳನ್ನು ಉಳಿಸಿ ಬೆಳೆಸುವಲ್ಲಿ ನಾವು ನೀವು ಜೀವನಪೂರ್ಣವೋ, ಒಂದು ದಿನವಾದರೂ ಸರಿ ಅಥವಾ ಒಂದೇ ಕ್ಷಣವಾದರೂ ಸರಿ ಪೂಜ್ಯರ ಹಾದಿಯಲ್ಲಿ ಸವೆಯೋಣ ನೆಮ್ಮದಿ ನಾಳೆಗಳಿಗಾಗಿ.
ಸಾಣೇಹಳ್ಳಿಯ ಡಾ. ಪಂಡಿತರಾಧ್ಯ ಪೂಜ್ಯರಿಗೆ ಪ್ರಣಾಮಗಳು.
