ದಾವಣಗೆರೆ
“ಶಾಮನೂರು ಶಿವಶಂಕರಪ್ಪನವರು 95ನೇ ವಸಂತಕ್ಕೆ ಕಾಲಿಟ್ಟ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. 100 ವರ್ಷ ಪೂರೈಸುತ್ತಾರೆ ಎಂದುಕೊಂಡಿದ್ದೆವು. ಆದರೆ ನಮ್ಮನ್ನಗಲಿದ್ದು ಬಹಳ ನಷ್ಟವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲ್ಲೇಶ್ವರ ಮಿಲ್ ಬಳಿ ಶುಕ್ರವಾರ ನಡೆದ ನುಡಿನಮನ ಹಾಗೂ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯ ಮಾಡಿದ್ದಕ್ಕಾಗಿ ಶಾಮನೂರು ಅವರು ನನಗೆ ಒಂದು ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕ ಎಂದು ಹೇಳುತ್ತೇನೆ. ಅವರು ಗೆದ್ದಿದ್ದು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ, ಅಲ್ಲಿ ಲಿಂಗಾಯತರು ಕಡಿಮೆ. ಆದ್ರೂ ಜನಪ್ರಿಯತೆಯಿಂದ ಜಯಿಸಿದ್ದರು” ಎಂದು ತಿಳಿಸಿದರು.

“ದಾವಣಗೆರೆ ಜವಳಿ ನಗರವಾಗಿತ್ತು. ಅದು ಅವನತಿಯಾದ ಮೇಲೆ ವಿದ್ಯಾಕಾಶಿ ಆಯಿತು. ಅದಕ್ಕೆ ಶಾಮನೂರು ಶಿವಶಂಕರಪ್ಪನವರೇ ಕಾರಣ. 62 ವಿದ್ಯಾಸಂಸ್ಥೆಗಳನ್ನು ಕಟ್ಟಿರುವುದು ಆಶ್ಚರ್ಯಕರ ವಿಚಾರ. ಅವರೊಬ್ಬ ಮನುಷ್ಯಪ್ರೇಮಿ, ಅಜಾತಶತ್ರು,” ಎಂದು ಕೊಂಡಾಡಿದರು.
“ನಾನು ಅವರನ್ನು ಯಾವಾಗಲೂ ಯಜಮಾನ್ರೇ ಎಂದು ಕರೆಯುತ್ತಿದ್ದೆ. ಮತ್ತೊಂದು ಚುನಾವಣೆಗೆ ನಿಲ್ತೀರಾ ಎಂದು ಕೇಳಿದ್ದೆ? ಹೌದು, ನಿಲ್ತೀನಿ ಎಂದಿದ್ದರು. ಅಷ್ಟು ಉತ್ಸಾಹ ಅವರಿಗಿತ್ತು. ಬಡವರು ವಯಸ್ಸಾದವರ ದಾನಿ. ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಹುಟ್ಟು ಆಕಸ್ಮಿಕ, ಸಾವು ಗ್ಯಾರಂಟಿ. ಇದರ ಮಧ್ಯೆ ನಾವು ಏನು ಮಾಡಿದೆವು ಎಂಬುದು ಮುಖ್ಯ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತಲ್ಪಟ್ಟ ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣಗೊಳಿಸಿದರು.
ಯೋಗಿಗಿಂತ ಉಪಯೋಗಿ ಮೇಲು
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ಯೋಗಿ ಎಂದು ಕರೆಸಿಕೊಳ್ಳುವ ಬದಲಿಗೆ ಉಪಯೋಗಿ ಎಂದು ಕರೆಸಿಕೊಳ್ಳುವುದು ಮೇಲು. ಅವರಿಗೆ ಹೃದಯ ಶ್ರೀಮಂತಿಕೆ ಇತ್ತು. ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎಂಬುದು ಬದುಕಿದ್ದಾಗ ತಿಳಿಯುತ್ತದೆ. ಅವರ ಬದುಕು ಬದಲಾವಣೆ ಮಾಡಿದ್ದಾರೆ ಎಂಬುದು ಮುಖ್ಯ. ಶಾಮನೂರು ಶಿವಶಂಕರಪ್ಪರ ಆದರ್ಶಗಳು ಉಳಿದಿವೆ ಎನ್ನಲು ಈ ಜನಸ್ತೋಮ ಸಾಕ್ಷಿ” ಎಂದರು.
“ಕೋವಿಡ್ ಸಂದರ್ಭದಲ್ಲಿ ಹತ್ತಾರು ಕೋಟಿ ಹಣ ಕೊಟ್ಟು ಲಸಿಕೆ ಕೊಡಿಸಿದ್ದರು. ಅವರೆಲ್ಲರ ಮಕ್ಕಳು, ಮೊಮ್ಮಕ್ಕಳು, ದಾನ ಧರ್ಮ ಮುಂದುವರೆಸಿಕೊಂಡು ಹೋಗಬೇಕು. ಎಲ್ಲ ಜಾತಿ, ಧರ್ಮದ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಎಲ್ಲ ಶ್ರೀಗಳು, ಧರ್ಮದ ಗುರುಗಳು ನಮನ ಸಲ್ಲಿಸಲು ಆಗಮಿಸಿದ್ದಾರೆ. ಧಾರ್ಮಿಕವಾಗಿ, ರಾಜಕೀಯವಾಗಿ, ವ್ಯಾಪಾರ ಕ್ಷೇತ್ರದಲ್ಲಿ ಅವರು ಶ್ರೇಷ್ಠ ಸೇವೆ ಮಾಡಿದ್ದಾರೆ” ಎಂದು ಗುಣಗಾನ ಮಾಡಿದರು.

ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ “ಶಾಮನೂರು ಶಿವಶಂಕರಪ್ಪ ಅವರನ್ನು ಕಳೆದುಕೊಂಡಿದ್ದು ನನ್ನ ಹಿರಿಯಣ್ಣನನ್ನೇ ಕಳೆದುಕೊಂಡಂತಾಗಿದೆ” ಎಂದು ಅವರು ಭಾವುಕರಾಗಿ ನುಡಿದರು.

“ಶಾಮನೂರು ಶಿವಶಂಕರಪ್ಪ ಅವರು ಉದ್ಯಮಿ ಮತ್ತು ರಾಜಕಾರಣಿ—ಎರಡೂ ಕ್ಷೇತ್ರಗಳಲ್ಲಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ದಾವಣಗೆರೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಗರವನ್ನು ವಿದ್ಯಾಕಾಶಿಯಾಗಿ ರೂಪಿಸಿದ ಮಹತ್ವ ಅವರಿಗೆ ಸಲ್ಲುತ್ತದೆ” ಎಂದು ಯಡಿಯೂರಪ್ಪ ಹೇಳಿದರು.

ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿಯೂ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದಾರೆಂದು ಸ್ಮರಿಸಿದರು.
“ಲಿಂಗಾಯತ ಹಾಗೂ ವೀರಶೈವ ಒಂದೇ ಎಂಬ ದೃಢ ನಿಲುವನ್ನು ಅವರು ಸದಾ ಹೊಂದಿದ್ದರು. ಸಮಾಜದಲ್ಲಿ ಬಿರುಕು ಮೂಡುವಂತಹ ಸಂವೇದನಶೀಲ ಸಂದರ್ಭಗಳಲ್ಲೂ ಎಲ್ಲರನ್ನು ಒಂದಾಗಿಸಿ ಕೊಂಡೊಯ್ದ ನಾಯಕ ಶಾಮನೂರು ಶಿವಶಂಕರಪ್ಪ” ಎಂದು ಯಡಿಯೂರಪ್ಪ ಕೊಂಡಾಡಿದರು.

ಕರ್ನಾಟಕ ರತ್ನ ಬಿರುದು ಕೊಡಿ
ಶಾಮನೂರು ಶಿವಶಂಕರಪ್ಪ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದರು. ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರೊಬ್ಬ ವ್ಯಕ್ತಿಯಲ್ಲ. ಮಹಾನ್ ಶಕ್ತಿ. ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಕೊಡ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರ ಬಯಸುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಹೆಚ್.ಕೆ. ಪಾಟೀಲ್, ವಿಧಾನಸಭೆ ಮುಖ್ಯಸಚೇತಕ ಅಶೋಕ್ ಎಂ ಪಟ್ಟಣ್, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಬಸವರಾಜ್ ವಿ ಶಿವಗಂಗಾ, ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ , ಶ್ರೀ ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷ, ಮಾಜಿ ಸಚಿವರುಗಳಾದ ಎಸ್.ಎ. ರವೀಂದ್ರನಾಥ್, ರೇಣುಕಾಚಾರ್ಯ, ಹೆಚ್. ಆಂಜನೇಯ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಾಡಾಳು ವಿರೂಪಾಕ್ಷಪ್ಪ ಮತ್ತು ಪೂರ್ವ ವಲಯ ಪೊಲೀಸ್ ಮಹಾನೀರಿಕ್ಷಕ ಡಾ; ಬಿ.ಆರ್. ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಎಸ್.ಪಿ. ಉಮಾಪ್ರಶಾಂತ್ ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಾಸ್ರಾವಿಕವಾಗಿ ಮಾತನಾಡಿದರು. ಶಾಮನೂರು ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಬಂದುಬಳಗದವರು ಭಾಗವಹಿಸಿದ್ದರು.
ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಜಿಗಳವರು, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳು, ಭಗೀರಥ ಗುರುಪೀಠದ ಶ್ರೀಪುರಷೋತ್ತಮಾನಂದಪುರಿ ಸ್ವಾಮೀಜಿಗಳು, ಕೂಡಲ ಸಂಗಮ ಮಹಾಪೀಠದ ಶ್ರೀ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೋಡಿಮಠದ ಡಾ; ಶಿವಾನಂದ ಶಿವಯೋಗಿ, ಪಂಚಮಸಾಲಿ ಪೀಠದ ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ, ಬಾಳೇಹೊನ್ನುರು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಜಗದ್ಗುರು ಶ್ರೀ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು, ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದ್ದರು.
