ವಚನ, ಗಾದೆಗಳಿಂದ ಮಕ್ಕಳು ಜೀವನಾನುಭವ ಪಡೆದುಕೊಳ್ಳಬೇಕು: ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ

ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ಎನ್ನುವ ವಿಷಯ ಕುರಿತಂತೆ ‘ದಂದಣ ದತ್ತಣ’ಗೋಷ್ಠಿ ನಡೆಯಿತು.

ಈ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ‘ಮಂಗ ಇದ್ದ ತೋಟ ಹಾಳು, ಸ್ವಾಮಿ ಇದ್ದ ಊರು ಹಾಳು’ ಈ ಗಾದೆ ಅಸಮರ್ಥ ಅಥವ ಅತಿಕ್ರಮಣ ಮಾಡುವ ವ್ಯಕ್ತಿಗಳಿಂದ ಆಗುವ ಹಾನಿಯನ್ನು ಸೂಚಿಸುತ್ತದೆ. ಕೋತಿ ತೋಟವನ್ನು ನಾಶ ಮಾಡಿದರೆ, ಕಪಟಿ ಅಯೋಗ್ಯ ವ್ಯಕ್ತಿಗಳು ಇಡೀ ಊರನ್ನೇ ಹಾಳು ಮಾಡುವರು ಎನ್ನುವ ಭಾವ ಈ ಗಾದೆಯಲ್ಲಿದೆ.

ಮಂಗನ ಸ್ವಭಾವ ಚಂಚಲತೆ. ಅದಕ್ಕೆ ಒಂದು ವಸ್ತುವಿನ ಬೆಲೆ ಏನು ಎನ್ನುವುದು ಗೊತ್ತಿರುವುದಿಲ್ಲ. ಅದು ತೋಟಕ್ಕೆ ನುಗ್ಗಿದರೆ ತನಗೆ ಬೇಕಾದ ಹಣ್ಣನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಮರಗಳ ರೆಂಬೆಗಳನ್ನು ಮುರಿಯುವುದು, ಕಾಯಿಗಳನ್ನು  ಕಿತ್ತು ಎಸೆಯುವುದು, ಗಿಡಗಳನ್ನು ತುಳಿಯುವ ಮೂಲಕ ಇಡೀ ತೋಟವನ್ನೇ ಹಾಳು ಮಾಡುತ್ತವೆ. ಅಂದರೆ ಒಬ್ಬ ಜವಾಬ್ದಾರಿಯಿಲ್ಲದ ವ್ಯಕ್ತಿ ಒಂದು ಗುಂಪಿನಲ್ಲಿದ್ದರೆ  ಇಡೀ ವ್ಯವಸ್ಥೆ ಹಾಳಾಗುತ್ತದೆ.

ಸ್ವಾಮಿಗಳಿದ್ದ ಊರು ಹಾಳು ಎಂದರೆ ಇಲ್ಲಿ ಸ್ವಾಮಿಗಳೆಂದರೆ ನಿಜವಾದ ಜ್ಞಾನಿಗಳಲ್ಲ. ಬದಲಿಗೆ ಸೋಗಲಾಡಿಗಳು. ಕೆಲಸ ಮಾಡದೇ  ಜನರನ್ನು ದಾರಿ ತಪ್ಪಿಸುವ ಕಪಟಿಗಳು. ಒಂದು ಊರಿನಲ್ಲಿ ಅಥವಾ ಸಮಾಜದಲ್ಲಿ ಇಂತಹ ಅಯೋಗ್ಯರು ಹೆಚ್ಚಾದಾಗ ಅವರು ಜನರ ನಡುವೆ ಭೇದಭಾವ ಹುಟ್ಟಿಸಬಹುದು, ಮೂಢನಂಬಿಕೆಗಳನ್ನು ಹರಡಬಹುದು. ಇಂಥವರಿಂದ ಊರಿನ ಸಂಸ್ಕೃತಿ ಮತ್ತು ನೆಮ್ಮದಿ ಹಾಳು ಮಾಡಬಹುದು ಎಂಬುದು ಈ ಗಾದೆಯ ಮಾತಿನ ಅರ್ಥ. 

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮಠಾಧಿಪತಿಗಳ ಒಕ್ಕೂಟದಿಂದ ಇಡೀ ಕರ್ನಾಟಕದಾದದ್ಯಂತ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ ಯಶಸ್ವಿಯಾಗಿದ್ದನ್ನು ಕಂಡು ಸಹಿಸಲಾರದೇ ಸೋಗಲಾಡಿ ಕೆಲವು ಸ್ವಾಮಿಗಳು ಇಡೀ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿದ್ದನ್ನು ನೋಡಿದ್ದೇವೆ. ಇಂಥವರಿಂದಲೇ ಈ ಗಾದೆ ಹುಟ್ಟಿಕೊಂಡಿರಬಹುದು.

ವೇದಗಳು ಸುಳ್ಳಾಗಬಹುದು ಆದರೆ ಗಾದೆಗಳು ಸುಳ್ಳಾಗದು. ೧೨ನೆಯ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಗಾದೆಗಳು ಹೇರಳವಾಗಿ ಬಂದಿವೆ. ಶರಣರು ಜನಸಾಮಾನ್ಯರಿಂದ ಬಂದವರು. ಅವರ ಅನುಭವಗಳು ಗಾದೆಗಳ ಮಾತಾಗಿವೆ. ಗಾದೆಗಳು ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುತ್ತವೆ.

ಮನುಷ್ಯ ಸುಳ್ಳು ಹೇಳಿ ದೊಡ್ಡವನಾಗುವುದಲ್ಲ. ಸತ್ಯದ ಮಾರ್ಗದಲ್ಲಿ ಸಾಗಿದಾಗ  ದೊಡ್ಡ ವ್ಯಕ್ತಿಯಾಗುವನು. ಆಗ ಅವನಿಗೆ ಸಾವಿಲ್ಲ. ಅದಕ್ಕಾಗಿಯೇ ‘ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ಸಾವಿಲ್ಲ’ ಎನ್ನುವ ಗಾದೆ ಹುಟ್ಟಿಕೊಂಡಿರುವುದು. ಮೌಢ್ಯಗಳಿಂದ ಮುಕ್ತರಾಗಬೇಕು ಎನ್ನುವುದೇ ಗಾದೆಗಳ ಉದ್ದೇಶ. ಇವತ್ತು ಜ್ಞಾನ ಪಡೆದವರಿಗೇನು ಕೊರತೆ ಇಲ್ಲ. ಆದರೆ ಅನುಭವ ಪಡೆದವರು ವಿರಳ. ಅಂತಹ ಅನುಭವ ವಚನ, ಗಾದೆಗಳಿಂದ ಪಡೆದುಕೊಳ್ಳಬೇಕು.

ಬಸವತತ್ವ ಜೀವನೋಪಾಯಕ್ಕಾಗಿ ಅಲ್ಲ; ಜೀವನದ ಓರೆಕೋರೆಗಳನ್ನು ತಿದ್ದಿಕೊಳ್ಳಲಿಕ್ಕೆ. ವಚನಗಳಲ್ಲಿ ಸಾಕಷ್ಟು ಗಾದೆ ಮಾತುಗಳು ಸಿಗುತ್ತವೆ. ವಿದ್ಯಾರ್ಥಿಗಳು ಪ್ರತಿದಿನ ವಚನಗಳನ್ನು ಓದುವುದನ್ನು, ಹಾಡುವುದನ್ನು ಕಲಿಯಬೇಕು. ಅದರ ಮೂಲಕ ಜೀವನದ ಅನುಭವವನ್ನು ಪಡೆದುಕೊಳ್ಳಬೇಕು. ವಚನಗಳನ್ನು ಹಾಡುವುದು ಮುಖ್ಯವಲ್ಲ. ಹಾಡಿನ ಹಿಂದಿನ ಭಾವ ನಮ್ಮ ಬದುಕಿನ ಬಂಡವಾಳವಾದಾಗ ಮಾತ್ರ ಬದುಕು ಸಾರ್ಥಕವಾಗುವುದು ಎಂದರು.

ಗೋಷ್ಠಿಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್ ಮಾತನಾಡಿ ಈ ದಂದಣ ದತ್ತಣ ಗೋಷ್ಠಿ ಇಲ್ಲಿನ ಮಕ್ಕಳಿಗೆ ಒಂದು ಭದ್ರಬುನಾದಿಯಾಗುತ್ತದೆ. ಸಂಸ್ಕೃತಿ ಬೇರಾದರೆ ನಾಗರಿಕತೆ ಮರ ಇದ್ದಂತೆ. ಅಂತಹ ಬೇರು ಸಾಣೇಹಳ್ಳಿಯಲ್ಲಿ ದೊರೆಯುತ್ತವೆ.

ಸಂಸ್ಕೃತಿಯ ಬೇರು ಜಾನಪದ. ಗಾದೆಗಳು ನಮ್ಮ ಬದುಕಿನ ದಿಕ್ಸೂಚಿ. ಗಾದೆ ನಮ್ಮ ಬದುಕಿನಲ್ಲಿ ನೈತಿಕತೆ ಬೆಳೆಸುವುದು. ನಮ್ಮ ಬದುಕಿನ ಜೀವನದಲ್ಲಿ ಆದ ಅನುಭವಗಳೇ ಗಾದೆಗಳು. ಇದನ್ನು ನಮ್ಮ ಹಿರಿಯರು ಕಟ್ಟಿಕೊಟ್ಟರು. ಜೀವನದ ಅನುಭವಕ್ಕೆ ಬರುತ್ತೋ ಅದು ಸಾರ್ವಕಾಲಿಕ ಸತ್ಯ. ಜೀವನದ ಅನುಭವ ಸಾರವೇ ಗಾದೆ. ಗಾದೆಗಳಲ್ಲಿ ಪೌರಾಣಿಕ, ಸಾಮಾಜಿಕ, ರಾಜಕೀಯ, ವೈದ್ಯಕೀಯ ಹೀಗೆ ಅನೇಕ ವಿಧಗಳನ್ನು ನೋಡಬಹುದು. ಮಾನವೀಯ ಸಂಬಂಧಗಳ ಬೆಸುಗೆ ಜಾನಪದ. ಶಿಷ್ಟ ಸಾಹಿತ್ಯ ವ್ಯಕ್ತಿಯೊಬ್ಬನ ಸೃಷ್ಟಿಯಾದರೆ ಗಾದೆ ಸಮಷ್ಠಿಯ ಸಾಹಿತ್ಯದ ಸೃಷ್ಟಿ ಎಂದರು. 

ಇನೋರ್ವ ಅತಿಥಿಗಳಾಗಿ ಆಗಮಿಸಿದ ಹೊಸದುರ್ಗದ ತಾಲ್ಲೂಕಿನ ಕಸಬಾ ಹೋಬಳಿಯ ಶಿಕ್ಷಣ ಸಂಯೋಜಕ ಎಂ. ಶಶಿಧರ ಮಾತನಾಡಿ  ಹೊಸದುರ್ಗ ತಾಲ್ಲೂಕಿನಲ್ಲಿ ನಾನು ಸೇವೆ ಮಾಡುತ್ತಿರುವುದು ನನ್ನ ಪುಣ್ಯ. ಪ್ರತಿವರ್ಷ ನಾನು ನಾಟಕೋತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ.  ದಂದಣ ದತ್ತಣ ಗೋಷ್ಠಿಯಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಕೆಗೆ ಅನುಕೂಲ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವ ವಿಷಯ ಕುರಿತಂತೆ ಖುಷಿ ಪಿ, ತನ್ವಿಕ ಅರಸಿ, ಪ್ರಾರ್ಥನ ಸಿ,  ಭೂಮಿಕ ಎ.ಪಿ, ಎಲ್.ಎಸ್. ವೇದಾಂತ, ಎಲ್.ಎಸ್. ಯಶ್ವಂತ ಮಾತನಾಡಿದರು.  ಅರವಿಂದ ಎಸ್.ಎಸ್. ಹಾಗೂ ಮನೋಜ ಹೆಚ್. ನಿರೂಪಿಸಿ ವಂದಿಸಿದರು.

ಅಕ್ಕನ ಬಳಗದವರು ಪ್ರಾರಂಭದಲ್ಲಿ ವಚನಗೀತೆಗಳನ್ನು ಹಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜನಪದ ಗೀತೆಗೆ ನೃತ್ಯ ಮಾಡಿದರು. ಈ ಸಂದರ್ಭದಲ್ಲಿ ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿಗಳು, ಶರಣ ಚಿಂತಕ ಜೆ.ಎಸ್. ಪಾಟೀಲ, ಅಜ್ಜಂಪುರ ಸೂರಿ ಶ್ರೀನಿವಾಸ, ಹಾಗೂ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *