ಗಡಿನಾಡಿನಲ್ಲಿ ಕನ್ನಡ ದೀಪ ಹಚ್ಚಿದ ನಾಗನೂರು, ಭಾಲ್ಕಿ ಶ್ರೀಗಳು

ನರಗುಂದ :

ಈ ನಾಡಿನ ಹಲವಾರು ಮಠ ಮಾನ್ಯಗಳು ಸರ್ವರಿಗೂ ಶಿಕ್ಷಣವನ್ನು ಧಾರೆಯೆರೆದು ಶಿಕ್ಷಣ ಕ್ರಾಂತಿಯನ್ನು ಮಾಡಿವೆ. ಶಿಕ್ಷಣದ ಜೊತೆಜೊತೆಗೆ ಪರಭಾಷಿಕರ ಹಾವಳಿಯಲ್ಲಿಯೂ ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ತೆರೆಯುವುದರ ಮೂಲಕ ಕನ್ನಡ ದೀಪ ಪ್ರಜ್ವಲಿಸಿದ ಕೀರ್ತಿ ಪೂಜ್ಯ ನಾಗನೂರು ಹಾಗೂ ಪೂಜ್ಯ ಭಾಲ್ಕಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಶಲವಡಿಯ ಖ್ಯಾತ ಪ್ರವಚನಕಾರರಾದ ಶ್ರೀವೀರಯ್ಯ ಶಾಸ್ತ್ರಿಗಳು ಬಣ್ಣಿಸಿದರು.

ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಗರದ ಶ್ರೀ ಸಿದ್ದೇಶ್ವರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗಡಿನಾಡಿನಲ್ಲಿ ಕನ್ನಡ ಕಟ್ಟಿದ ಪೂಜ್ಯಶ್ರೀ ನಾಗನೂರು ಶಿವಬಸವ ಶ್ರೀಗಳ ಹಾಗೂ ಪೂಜ್ಯಶ್ರೀ ಬಾಲ್ಕಿ ಚೆನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕೆ ನಮ್ಮ ನಾಡಿನ ಮಠಗಳಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರ್‌ನ ಭಾಲ್ಕಿ ಮಠಗಳ ಕೊಡುಗೆ ಅಪಾರ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಅರಿವು ಕೊಟ್ಟು ತ್ರಿವಿದ ದಾಸೋಹ ನಿರಂತರವಾಗಿ ಮಾಡುತ್ತಿವೆ.

ಮಠಗಳು ಸಂಸ್ಕಾರ ಸಂಸ್ಕೃತಿಯ ಕೊಂಡಿಯಂತೆ ಸಮುದಾಯವನ್ನು ಸನ್ಮಾರ್ಗದತ್ತ ಸಾಗಿಸುವ ಕಾರ್ಯ ಮಾಡುವುದರೊಂದಿಗೆ ಸದ್ಬಾವ ಸಮಾಜವನ್ನು ನಿರ್ಮಿಸುತ್ತವೆ ಎಂದು ಹೇಳಿದರು.

ಪ್ರಾಚಾರ್ಯರಾದ ಪ್ರೊ. ಸಿ. ಎಸ್. ಸುಳ್ಳದ ಮಾತನಾಡಿ, ಸಂದಿಗ್ದ ಸ್ಥಿತಿಯಲ್ಲಿ ಕನ್ನಡ ಭಾಷೆಗೆ ಕುಸುಮಕೊಟ್ಟು ಖಂಡ ಕರ್ನಾಟಕವನ್ನು ಅಖಂಡ ಕರ್ನಾಟಕದ ಕನಸು ಕಟ್ಟಿ ಯಶಸ್ವಿಯಾದವರು ಪೂಜ್ಯದ್ವಯರು.

ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಫಜಲ್ ಅಲಿ ಆಯೋಗಕ್ಕೆ ಹಾಗೂ ಮಹಾಜನ್ ಆಯೋಗಕ್ಕೆ ನೇರ ವರದಿಯನ್ನು ನೀಡಿ ಬೆಳಗಾವಿ ನಮ್ಮದೆ ಎಂದು ನಾಗನೂರು ರುದ್ರಾಕ್ಷಿ ಮಠದ ಶಿವಬಸವ ಶ್ರೀಗಳು ಬೆಳಗಾವಿಯನ್ನು ಉಳಿಸಿದರು. ಕರ್ನಾಟಕದ ಮುಕುಟದಂತಿರುವ ಬೀದರ್ ಉಳಿದಿದೆ ಅಂದರೆ ಬಾಲ್ಕಿಯ ಚೆನ್ನಬಸವ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ನಿರ್ದೇಶಕರಾದ ಪ್ರೊ. ಆರ್. ಕೆ. ಐನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ರಾಂತ ಉಪನ್ಯಾಸಕರಾದ ಪ್ರೊ. ಎಸ್. ಬಿ. ಭಜಂತ್ರಿ, ಹಿರಿಯ ಉಪನ್ಯಾಸಕ ಡಾ. ಎಮ್. ಪಿ. ಕುಲಕರ್ಣಿ, ಪ್ರೊ. ಬಿ. ಎಮ್. ಲಂಕೆನ್ನವರ, ಪ್ರೊ. ದಂಡನಾಯ್ಕರ, ಯುವ ಕವಿ ಮಂಜುನಾಥ ಘಾಳಿ, ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಕಾರ್ಯದರ್ಶಿ ಮಹಾಂತೇಶ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರೊ. ಎಸ್. ಎಸ್. ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *