ವೈಜ್ಞಾನಿಕ ಸಮ್ಮೇಳನಕ್ಕೆ ಸಂಭ್ರಮದ ತೆರೆ
ಯಾದಗಿರಿ :
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ 5 ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಮಂಗಳವಾರ ಸಂಜೆ ಸಂಭ್ರಮದ ತೆರೆ ಕಂಡಿತು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ನೇತೃತ್ವದ ತಂಡ, ಮಾನವ ಬಂಧುತ್ವ ವೇದಿಕೆ ಮತ್ತು ವಿವಿಧ ಸಂಘಟನೆಗಳ ಸಹಕಾರದಿಂದ ಆಯೋಜಿಸಲಾಗಿದ್ದ ಸಮ್ಮೇಳನವು ಸರ್ವಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಉಪಸ್ಥಿತಿ ಬಹು ಅಚ್ಚುಕಟ್ಟಾಗಿ, ಸಮಯ ಪಾಲನೆ, ಶಿಸ್ತಿನಿಂದ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಲಬುರಗಿ ಶರಣಬಸವೇಶ್ವರ ವಿದ್ಯಾಸಂಸ್ಥೆಯ ಚೇರಪರ್ಸನ್ ಡಾ. ದಾಕ್ಷಾಯಣಿ ಎಸ್. ಅಪ್ಪ ಮಾತನಾಡಿ, ಇಂದು ನಾವೆಲ್ಲರೂ ವೈಚಾರಿಕವಾಗಿ ಬದುಕಬೇಕು. ವಿಜ್ಞಾನ ಮತ್ತು ಶಂತ್ರಜ್ಞಾನವನ್ನು ತಿಳಿದು ನಡೆಯಬೇಕೆಂದರು. ಈ ನಿಟ್ಟಿನಲ್ಲಿ ಡಾ. ಶರಣಬಸವಪ್ಪ ಅಪ್ಪ ಅವರು ಸಾಕಷ್ಟು ವಿಚಾರಗಳನ್ನು ಆಗಾಗ ಹೇಳುವ ಮೂಲಕ ಅಪಾರ ಮಕ್ಕಳಿಗೆ ಜ್ಞಾನ ನೀಡಿದ್ದಾರೆಂದರು.
ಶರಣ ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ. ಉಮಾ ದೇಶಮುಖ, ಡಾ. ಹುಲಿಕಲ್ ನಟರಾಜ್, ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಸೇರಿದಂತೆಯೇ ಇತರರಿದ್ದರು.
ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನ
ಮುಂದಿನ 6ನೇ ವೈಜ್ಞಾನಿಕ ಸಮ್ಮೇಳನ ಸಚಿವ ಸತೀಶ ಜಾರಕಿಹೊಳಿ ಅವರ ಆಶಯದಂತೆಯೇ ರಾಜ್ಯದ ಗಡಿಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ನಡೆಸಲು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ 5 ನೇ ವೈಜ್ಞಾನಿಕ ಸಮ್ಮೇಳನದ ಮೂರನೇ ದಿನದಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಧಿವೇಶನ ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನವನ್ನು ನಡೆಸುವುದು ಸೂಕ್ತ ಎನ್ನುವ ನಿಲುವಿಗೆ ಪರಿಷತ್ತು ಒಪ್ಪಿಗೆ ನೀಡಿತು.
ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಒಮ್ಮತದಿಂದ ಸಮ್ಮತಿ ನೀಡಿದರು. ಇದಕ್ಕೂ ಮುನ್ನ ಮಹಾಧಿವೇಶನದ ಮುಂದೆ 6ನೇ ವೈಜ್ಞಾನಿಕ ಸಮ್ಮೇಳನದ ಬಗ್ಗೆ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ. ಸ್ವಾಮಿ ಪ್ರಸ್ತಾವನೆ ಮಂಡಿಸಿದರು. ಇದಕ್ಕೆ ಪಂಷತ್ತಿನ ಪದಾಧಿಕಾರಿಗಳು ಒಕ್ಕೊರಲಿನಿಂದ ತೀರ್ಮಾನ ಕೈಗೊಂಡರು. ಅಂತಿಮವಾಗಿ ಖ್ಯಾತ ವಿಜ್ಞಾನಿ ಹಾಗೂ ಪರಿಷತ್ತಿನ ಮಹಾ ಪೋಷಕ ಡಾ. ಎ.ಎಸ್. ಕಿರಣಕುಮಾರ ಅವರು ಬೆಳಗಾವಿಯಲ್ಲಿ 6ನೇ ವೈಜ್ಞಾನಿಕ ಸಮ್ಮೇಳನ ನಡೆಸುವ ಬಗ್ಗೆ ಅನುಮೋದನ ನೀಡಿದರು.
ಶ್ರೀಗಳಿಗೆ ಗೌರವ ಸಮರ್ಪಣೆ :
ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮೀಜಿ, ಚಿಗರಹಳ್ಳಿ ಶಂಕರಪೀಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಅವರಿಗೆ ಗೌರವ ಸಮರ್ಪಿಸಲಾಯಿತು. ದೊಡ್ಡಬಳ್ಳಾಪುರದಲ್ಲಿ ವಿಶ್ವದಾಖಲೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಾದ ಪರಿಷತ್ತಿನ ಡಾ.ಎಚ್. ವಿ. ಚಿಕ್ಕಹನುಮಂತಗೌಡ. ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ದಂಪತಿಯನ್ನು ಅಭಿನಂದಿಸಲಾಯಿತು.
ಮಹಾಧಿವೇಶನದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಪರಿಷತ್ತಿನ ಮಹಾಪೋಷಕ ಡಾ. ಎ.ಎಸ್. ಕಿರಣಕುಮಾರ, ಗೌರವ ಮಾರ್ಗದರ್ಶಕ ಡಾ. ಸಿ. ಸೋಮಶೇಖರ, ಉಪಾಧ್ಯಕ್ಷರಾದ ಡಾ. ಆಂಜನಪ್ಪ, ರಾಮಚಂದ್ರ, ರವಿಕುಮಾರಗೌಡ, ಡಾ. ಉಷಾದೇವಿ ಹಿರೇಮಠ, ಪ್ರೊ. ಸುಧಾ ಹುಚ್ಚಣ್ಣವರ, ಪಿ.ವಿ. ಸಿದ್ಧಲಿಂಗಮ್ಮ ನಟರಾಜ್, ಮಾಧ್ಯಮ ವಕ್ತಾರ ಇಂದೂಧರ ಸಿನ್ನೂರ್, ಕಾರ್ಯದರ್ಶಿ ಡಾ. ಓಂಕಾರ ನಾಯ್ಕ ಕೋಶಾಧ್ಯಕ್ಷ ಎಸ್ ವೈ ಹೊಂಬಾಳ್, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಂಗಮೇಶ ಹಚ್ಚಡದ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.
