ಚಿಕ್ಕಮಗಳೂರು
ಅನುದಿನಂಗಳೆಂಬವು ಪ್ರಣತೆಯಾಗಿ
ವರುಷವೆಂಬವು ಬತ್ತಿಯಾಗಿ
ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ
ಬೆಳಗು ಕತ್ತಲೆಯಾಗದ ಮುನ್ನ ರೇಕಣ್ಣಪ್ರಿಯ ನಾಗಿನಾಥ ಬೆಳಗ ಬೆಳಗಿನಲರಿಯಬೇಕು
-ಬಹುರೂಪಿ ಚೌಡಯ್ಯ
ಬೆಳಕು ಬಹುದೊಡ್ಡ ರೂಪಕ. ಅದು ಜ್ಞಾನಕ್ಕೆ, ಜೀವಕ್ಕೆ, ಆಯುಷ್ಯಕ್ಕೆ ಸಂಕೇತ. ದೇವಕೃಪೆಯ ಸಂಕೇತವೂ ಹೌದು. ಆ ಬೆಳಕಿನಲ್ಲಿಯೇ ಎಲ್ಲ ಜೀವರಾಶಿಗಳು ಬದುಕಿರುವುದು.
ಬಹುರೂಪಿ ಚೌಡಯ್ಯನವರ ಮೇಲಿನ ವಚನ ಈ ಎಲ್ಲ ಸಂಗತಿಗಳನ್ನು ಸಂಕೇತಿಸಿ ಬೆಳಗನ್ನು ಅರ್ಥೈಸಿದೆ.
ದಿನ-ವರ್ಷಗಳ ಲೆಕ್ಕದಲ್ಲಿ ಆಯುಷ್ಯದ ಬೆಳಕು ಕಳೆದುಹೋಗುತ್ತಿರುತ್ತದೆ. ಆ ಬೆಳಗು ತೀರುವವರೆಗೂ ದೇವನ ಅನುಗ್ರಹದ ಬೆಳಕಿನಲ್ಲಿ ನಮ್ಮ ನಡೆ ನುಡಿಗಳೆಲ್ಲವನ್ನು ರೂಪಿಸಿಕೊಳ್ಳಬೇಕು. ಎಣ್ಣೆ ಇರುವಾಗಲೇ ಜ್ಯೋತಿ ಪ್ರಜ್ವಲಿಸಿ ಉರಿಯುವುದು. ಜೀವನೋತ್ಸಾಹವೆಂಬುದೂ ಎಣ್ಣೆಯೇ.
ಜವ್ವನ ಎಂದರೆ ಉತ್ಸಾಹ ಎಂದು ಪರಿಭಾವಿಸಬೇಕು. ಆ ಉತ್ಸಾಹ ತೀರುವ ಮುನ್ನವೇ, ಆಯುಷ್ಯದ ಬೆಳಕು ಆರದ ಮುನ್ನವೇ ಜ್ಞಾನದ ಬೆಳಕಿನಲ್ಲಿ ದೇವನ ಬೆಳಕನ್ನು ಅರಿಯಬೇಕು.
