ಸಾಣೇಹಳ್ಳಿಯಲ್ಲಿ ‘ವರ್ಷದ ಹರ್ಷ’ ಕಾರ್ಯಕ್ರಮ

ಸಾಣೇಹಳ್ಳಿ:

ಇಲ್ಲಿನ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ನಡೆದ ‘ವರ್ಷದ ಹರ್ಷ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು. ಇದೊಂದು ಆತ್ಮಾವಲೋಕನದ ಕಾರ್ಯಕ್ರಮ. ಮನುಷ್ಯ ತನ್ನ ಬದುಕಿನ ಸಿಂಹಾವಲೋಕನವನ್ನು ಕ್ಷಣ ಕ್ಷಣಕ್ಕೂ ಮಾಡಿಕೊಳ್ಳಬೇಕು. ಮನುಷ್ಯ ನಾಳೆ ನಾಳೆಗೆಂದು ಮುಂದೂಡದೇ ಇಂದೇ ಆ ಕೆಲಸವನ್ನು ಮಾಡಬೇಕು. ಆಗ ಆತ್ಮಕಲ್ಯಾಣ, ಲೋಕಕಲ್ಯಾಣವಾಗಲು ಸಾಧ್ಯ.

ಬಸವಾದಿ ಶರಣರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡವರು. ಲೋಕದ ಡೊಂಕನ್ನು ತಿದ್ದದೇ ತಮ್ಮನ್ನು ತಾವು ತಿದ್ದಿಕೊಂಡರು. ತಿದ್ದುವುದು ತಪ್ಪೇನಲ್ಲ. ತಿದ್ದುವ ಅರ್ಹತೆ ನನಗಿದೆಯೇ ಎಂದು ಆತ್ಮಾವಲೋಕನವನ್ನು ಧಾರ್ಮಿಕ, ರಾಜಕೀಯ ನೇತಾರರು ಮಾಡಿಕೊಳ್ಳಬೇಕು.

ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಹಾಗೂ ಬಸವಾದಿ ಶಿವಶರಣರು ನಮಗೆ ಆದರ್ಶ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜಾತ್ಯತೀತ ಮನೋಭಾವ ಹೊಂದಿದವರು. ದಲಿತ ವರ್ಗದವರಿಗೆ ಹಲವಾರು ರೀತಿಯಲ್ಲಿ ಸಮಾನತೆಯನ್ನು ತಂದುಕೊಟ್ಟವರು. ಅವರ ಪರಂಪರೆಯನ್ನು ನಾವು ಈಗ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

ಇತ್ತೀಚಿನ ದಿನಮಾನಗಳಲ್ಲಿ ಜಾತಿಯಭೂತ ಜನರ ಮನಸ್ಸಿನಲ್ಲಿ ಆಳುತ್ತಿದೆ. ಲಿಂಗವಂತರು ಜಾತಿಯ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಜಾತಿಯ ಗೋಡೆಗಳನ್ನು ಕೆಡವಿ ಸಮಾನತೆಯ ಸೇತುವೆಯನ್ನು ಕಟ್ಟಿಕೊಳ್ಳಬೇಕು. ಹುಟ್ಟಿನ ಕಾರಣಕ್ಕಾಗಿ ಯಾರೂ ಶ್ರೇಷ್ಠರಲ್ಲ, ಕನಿಷ್ಠರಲ್ಲ. ಎಲ್ಲರ ಹುಟ್ಟಿನ ಗುಟ್ಟು ಒಂದೇ. ಆದ್ದರಿಂದ ಜಾತಿಯ ಭೂತವನ್ನು ತೊಲಗಿಸಬೇಕು.

ಬಸವಣ್ಣನವರ ವಚನಗಳನ್ನು ಅನುಷ್ಠಾನಕ್ಕೆ ತರದೇ ಇರುವವರು ಬಸವಣ್ಣನ ಹೆಸರನ್ನು ಹೇಳೋದಕ್ಕೆ ಅರ್ಹತೆ, ಯೋಗ್ಯತೆ ಇಲ್ಲ. ಜಾತಿಯ ಕಾರಣಕ್ಕಾಗಿ ಹಿಂದಿನ ವರ್ಷ ಏನೇನೋ ಅನ್ಯಾಯ ಅನಾಚಾರ ಪ್ರತಿಭಟನೆಗಳು ನಡೆದಿವೆ. ಆದರೆ ಈ ವರ್ಷ ನಡೆಯದಂತೆ ನೋಡಿಕೊಳ್ಳಬೇಕು. ಆಗ ಹೊಸ ವರ್ಷಕ್ಕೆ ಅರ್ಥ ಬರುತ್ತದೆ.

ಮಾನವೀಯ ಅಂತಃಕರಣ ಪ್ರತಿಯೊಬ್ಬರಲ್ಲೂ ಅರಳಬೇಕು. ನಾಲಿಗೆಗೆ ಸುಳ್ಳಿನ ರುಚಿಯನ್ನು ಎಂದೂ ತೋರಿಸಬಾರದು. ಒಂದು ಸಾರಿ ಸುಳ್ಳಿನ ರುಚಿಯನ್ನು ತೋರಿಸಿದರೆ ಎಂದೂ ನಿಜಮಾನವನಾಗಲು ಸಾಧ್ಯವಿಲ್ಲ. ತನ್ನ ಹೃದಯವನ್ನೇ ಪುಣ್ಯಧಾಮ ಎಂದು ಭಾವಿಸಿಕೊಂಡು ಮಮತೆ, ಪ್ರೀತಿಯನ್ನು ಬೆಳೆಸಿಕೊಂಡಾಗ ಬಾಳಿನ ಗುರಿ ಮುಟ್ಟಲು ಸಾಧ್ಯ.

ಗಾಂಧೀಜಿ ಜಗತ್ತನ್ನು ಗೆದ್ದಿದ್ದು, ಅಹಿಂಸೆ, ಪ್ರೀತಿ, ಸತ್ಯದ ಮೂಲಕ. ಬಸವಣ್ಣ ಕಾಯಕ, ದಾಸೋಹ, ಶಿವಯೋಗದ ಮೂಲಕ ಇಡೀ ಜಗತ್ತು ಗೆದ್ದರು. ಇವತ್ತು ಆಷಾಢಭೂತಿತನ ಹೆಚ್ಚಾಗುತ್ತಿದೆ. ಮನುಷ್ಯ ಮುಖವಾಡದ ಬದುಕನ್ನು ಕಳಚಿ ಬದುಕಿದಾಗ ಎಲ್ಲರ ಪ್ರೀತಿ ಗಳಿಸಿಕೊಳ್ಳಲು ಸಾಧ್ಯ ಎಂದರು.

ಸಾನಿಧ್ಯ ವಹಿಸಿ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ; ನಮ್ಮ ಚಿಂತನೆಗಳು ಬಸವಾದಿ ಶಿವಶರಣರ ಚಿಂತನೆಗಳಾಗಬೇಕು. ನಮ್ಮಲ್ಲಿರುವ ಮೌಢ್ಯಗಳು ಕೊಚ್ಚಿಹೋಗುವ ಶಕ್ತಿ ವಿಜ್ಞಾನಕ್ಕಿದೆ. ಪ್ರತಿಯೊಂದನ್ನು ಪ್ರಶ್ನಿಸುವ ಶಕ್ತಿ ಬಸವಾದಿ ಶಿವಶರಣರ ವಚನಗಳಿಗಿವೆ. ಬಸವಣ್ಣ ಈ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ ಈ ನಾಡಿನಲ್ಲಿ ನಾವೆಲ್ಲ ಜೊತೆಯಲ್ಲಿ ಕುಳಿತುಕೊಳ್ಳುವುದಕ್ಕೆ ಸಾಧ್ಯ ಆಯಿತು. ಅಂದು ಇಂದು, ಮುಂದು ಬಸವಣ್ಣನೇ ಅಣ್ಣ.

ಕಲ್ಯಾಣದಲ್ಲಿ ನೊಂದವರು, ಬೆಂದವರು, ಬಿದ್ದವರನ್ನು ಅಪ್ಪಿಕೊಂಡವರು. ನಮ್ಮಲ್ಲಿ ಮೌನವಾಗಿರುವ ಸ್ವಾಮಿಗಳು ಹಲವರು. ಇನ್ನು ಕೆಲವರು ಹೇಳುವುದು ಅದ್ಭುತವಾದದ್ದು. ಆದರೆ ತಮ್ಮ ಮಠಕ್ಕೆ ಕರೆದು ಒಂದು ಲೋಟ ನೀರನ್ನು ಕೊಡದೇ ಇರುವವರು. ಇನ್ನು ಕೆಲವು ಸ್ವಾಮಿಗಳು ಬರೀ ಪೂಜೆ ಮಾಡುವಂಥವರಿದ್ದಾರೆ. ಇದು ಬರೀ ನಂಬಿಕೆ. ಬರೀ ನಂಬಿಕೆಯಿಂದ ಏನೂ ಆಗದು. ಶ್ರದ್ಧೆಯಿಂದ ಕಾಯಕ ಮಾಡಬೇಕು. ಅಂತಹ ಶ್ರದ್ಧೆಯಿಂದ ಒಳ್ಳೆಯ ಕಾರ್ಯಗಳನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಾ ಬಂದಿದ್ದಾರೆ.

ಭಕ್ತರಿಗೆ ಶ್ರದ್ಧೆಯ ಮೂಲಕ ಸನ್ಮಾರ್ಗವನ್ನು ವರ್ಷದ ಹರ್ಷ ಕಾರ್ಯಕ್ರಮಗಳ ಮೂಲಕ  ತೋರಿಸುತ್ತಿದ್ದಾರೆ.  ದೊಡ್ಡ ದೊಡ್ಡ ಶಾಲೆ, ದೇವಸ್ಥಾನಗಳನ್ನು ಕಟ್ಟಿಸುವುದರಿಂದ ದೊಡ್ಡ ಸ್ವಾಮಿಗಳಾಗುವುದಿಲ್ಲ. ದೊಡ್ಡ ಸಮಾಜವನ್ನು ಸಂಘಟಿಸುವ ಕೆಲಸವನ್ನು ಯಾರು ಮಾಡುವರೋ ಅವರು‌ ದೊಡ್ಡ ಸ್ವಾಮಿಗಳಾಗುವರು. ಆ ಹಿನ್ನಲೆಯಲ್ಲಿ ಬಸವ ಪ್ರಜ್ಞೆಯನ್ನು ಕಟ್ಟಿಕೊಳ್ಳಬೇಕು. ಹೊಸ ವರ್ಷ ನಮ್ಮೆಲ್ಲರ ಬಾಳಿಗೆ ಬೆಳಕು ತರಲಿ ಶರಣರ ಮಾರ್ಗದಲ್ಲಿ ನಾವು ನೀವೆಲ್ಲರೂ ಸಾಗೋಣ ಎಂದರು.

ಆಳಂದ ಅನುಭವ ಮಂಟಪದ ಶ್ರೀ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ ವರ್ಷದ ಹರ್ಷ ಕಾರ್ಯಕ್ರಮ ಒಂದು ಅರ್ಥಪೂರ್ಣ ಕಾರ್ಯಕ್ರಮ, ಶ್ರೀ ಪಂಡಿತಾರಾಧ್ಯ ಶ್ರೀಗಳ ಜೊತೆಯಲ್ಲಿ ಅನೇಕ ಸಂದರ್ಭದಲ್ಲಿ ಭಾಗವಹಿಸಿದ್ದೇನೆ.

ಸಾಣೇಹಳ್ಳಿಗೆ ಬಂದಿದ್ದು ಐದು ದಿನಗಳ ಕಾಲ ಯುವಕರಿಗೆ ಟ್ರೈನಿಂಗ್ ಕೊಡೋದಕ್ಕೆ. ಆದರೆ ನಾನೇ ಇಲ್ಲಿಗೆ ಬಂದು ಟ್ರೈನಿಂಗ್ ಪಡೆದುಕೊಂಡು ಹೋಗುತ್ತಿದ್ದೇನೆ. ಇದೊಂದು ನನ್ನ ಭಾಗ್ಯ. ಎಲ್ಲ ಮಠಾಧೀಶರಿಗೆ ಆದರ್ಶಪ್ರಾಯರಾದವರು ಪಂಡಿತಾರಾಧ್ಯ ಶ್ರೀಗಳು. ಮನುಷ್ಯ ಮೊದಲು ಮಾನವತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು.

ನಮ್ಮಲ್ಲಿ ಪಾಶ್ಚತ್ಯ ಸಂಸ್ಕೃತಿಯನ್ನು ಆಚರಿಸುವ ಬದಲು ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕೆಂಬ ಉದ್ದೇಶದಿಂದ ನೂತನ ಕಾರ್ಯಕ್ರಮವನ್ನು ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶ್ರೀಗಳು ಹಮ್ಮಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಏನಲ್ಲಾ ಇಲಾಖೆಗಳು ಟಾರ್ಗೇಟ್ ಮಾಡಿ ಹಣ ವಸೂಲಿ ಮಾಡುವ ಸಂಸ್ಕೃತಿಗಳು ಹೆಚ್ಚಾಗಿವೆ. ಇದಕ್ಕೆ ಸರಕಾರ ಪ್ರೋತ್ಸಾಹ ಕೊಡುತ್ತಿರುವುದು ದೊಡ್ಡ ದುರಂತ. ಯುವಕರು ನಮ್ಮ ನೆಲ ಮೂಲದ ಸಂಸ್ಕೃತಿಯನ್ನು ಮರೆತು ಅನೇಕರಿಗೆ ತೊಂದರೆ ಕೊಡುತ್ತಿದ್ದಾರೆ. ಅಂಥವರು ಅವಗುಣವನ್ನು ಬಿಟ್ಟು ಶಿವಗುಣದ ಕಡೆ ಬರಬೇಕು ಎಂದರು. 

ಉಪನ್ಯಾಸಕರಾಗಿ ಆಗಮಿಸಿದ ಶರಣ ಚಿಂತಕ ಜೆ.ಎಸ್. ಪಾಟೀಲ ಮಾತನಾಡಿ;  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಲ್ಯಾಣದ ಶರಣರ ಆಶಯಗಳನ್ನು ಪೂರೈಸುವ ಅನೇಕ ಚಟುವಟಿಕೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನಾವೆಲ್ಲ ಕೃಷಿ ಮೂಲದಿಂದ ಬಂದಿದ್ದೇವೆ. ಅದಕ್ಕೆ ಪ್ರೋತ್ಸಾಹವನ್ನು ಕೊಡುತ್ತಾ ಬಂದಿದ್ದಾರೆ. ಶಿಕ್ಷಣ, ಕೃಷಿ, ಆರೋಗ್ಯ, ರಾಜಕೀಯ, ಹೀಗೆ ಅನೇಕ ಕ್ಷೇತ್ರಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ.

ನಾನು ಅನೇಕ ಮಠಗಳ ಒಡನಾಟವನ್ನಿಟ್ಟುಕೊಂಡವನು. ವರ್ಷದ ಹರ್ಷ ಎಂಬ ವಿನೂತನ ಕಾರ್ಯಕ್ರಮ ಕರ್ನಾಟಕದಲ್ಲಿ ಯಾವ ಮಠಗಳಲ್ಲೂ ನಡೆಯುತ್ತಿರುವುದು ನಾ ಕಾಣೆ. ಆದರೆ ಸಾಣೇಹಳ್ಳಿ‌ ಮಠದಲ್ಲಿ  ಮಾತ್ರ ‘ವರ್ಷದ ಹರ್ಷ”. ವಿನೂತನವಾಗಿ ಆಚರಿಸಿಕೊಂಡು‌ ಬರುತ್ತಿದ್ದಾರೆ. ಬಹುತೇಕರು ಹೊಸವರ್ಷ ಆಚರಣೆ ಮಾಡೋದಕ್ಕೆ ಏನೆಲ್ಲಾ ಚಟುವಟಿಕೆಗಳನ್ನು ಮಾಡುವರು ಎಂದು ಬಿಚ್ಚಿ ಹೇಳಬೇಕಿಲ್ಲ.

ಲಿಂಗಾಯತ ಮಠಗಳು ಈ ನೆಲದ ಸಂಸ್ಕೃತಿಯನ್ನು, ಧರ್ಮವನ್ನು ಉಳಿಸುವಂಥ ಕೆಲಸ ಮಾಡುತ್ತಿವೆ. ಇವತ್ತಿನ ದಿನಮಾನಗಳಲ್ಲಿ ಹೆಚ್ಚು ಲಿಂಗಾಯತ ಮಠಗಳು ಸಂಸ್ಕೃತಿಹೀನಕ್ಕೆ ಗುರಿಯಾಗುವುದನ್ನು ನೋಡುತ್ತಿವೆ. ಲಿಂಗಾಯತ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಉತ್ಸವಗಳು ನಿರಂತರವಾಗಿ ನಡೆಯುತ್ತಿವೆ. ವರ್ಷದ ಹರ್ಷ ಕಾರ್ಯಕ್ರಮದ ಮೂಲಕ ಹೊಸ ಬಗೆಯ ಸಂಸ್ಕೃತಿಯನ್ನು ಬಿಚ್ಚುತ್ತಿದ್ದಾರೆ. ಇವತ್ತು ವರ್ತಮಾನದಲ್ಲಿ ಆಳುವ ಸರಕಾರಗಳು, ಉದ್ಯಮಿಗಳು ನೆಲಮೂಲದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದರು. 

ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ವಚನ ಟಿವಿ ನಿರ್ದೇಶಕ ಸಿದ್ಧು ಯಾಪಲಪರವಿ ಮಾತನಾಡಿ; ಇವತ್ತು ಒಂದು ವರ್ಷದ ಬ್ಯಾಲೆನ್ಸ್ ಶೀಟ್ ನೋಡುವ ದಿನ. ಹೊಸ ವರ್ಷವನ್ನು ಏನೇನೋ ಆಚರಣೆಗಳನ್ನು ಮಾಡಿಕೊಂಡು ನಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮಠಗಳಲ್ಲಿ ಕಾಯಕ, ದಾಸೋಹ, ಕೃಷಿ, ನೆಲಮೂಲದ ಬಸವ ಸಂಸ್ಕೃತಿ ಎನ್ನುವಂಥದ್ದು ದೊಡ್ಡ ಶಕ್ತಿ. ಅಂತಹ ಶಕ್ತಿಗಳ ಮೂಲಕ ಸಾಣೇಹಳ್ಳಿಯಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ.

ಲಿಂಗಾಯತ ಧರ್ಮದ ಲಿಂಗಾಯತ ತತ್ವದ ವೈಶಿಷ್ಟ್ಯತೆ ಅದು. ಸತ್ಯವನ್ನು ದ್ವೇಷಿಸಲಿಕ್ಕೆ ಲಕ್ಷಜನ ಸೇರುವರು. ಆದರೆ ಸತ್ಯವನ್ನು ಸಾಬೀತು ಪಡಿಸಲಿಕ್ಕೆ ನಾಲ್ಕು ಜನರಿರುವುದಿಲ್ಲ. ಈ ನೆಲಸಂಸ್ಕೃತಿಯೇ ಅಂಥದ್ದು. ಪಂಡಿತಾರಾಧ್ಯ ಶ್ರೀಗಳು ನಮ್ಮ ನಿಜವಾದ ಸಂಸ್ಕೃತಿಯನ್ನು ಇಲ್ಲಿನ ಮಕ್ಕಳಿಗೆ ಅರ್ಥ ಮಾಡಿಸುವಂಥ ಕೆಲಸ ಮಾಡುತ್ತಿದ್ದಾರೆ.

ಯಾವ ವ್ಯಕ್ತಿಯಲ್ಲಿ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಪರಿಕಲ್ಪನೆ ಇರುವುದಿಲ್ಲವೋ ಅವನು ಜೀವನದಲ್ಲಿ ಏನನ್ನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅವನಿಗೆ ಬೆಲೆ ಕಡಿಮೆ. ಯಾವ ವ್ಯಕ್ತಿಯಲ್ಲಿ ಸಕರಾತ್ಮಕ ಚಿಂತನೆಯನ್ನು ಮಾಡುತ್ತಾನೋ ಅವನು ದೊಡ್ಡ ವ್ಯಕ್ತಿಯಾಗುವನು. ಆರೋಗ್ಯ ಎಂದರೆ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳುವುದು.  ಭಾರತ ಆಷಾಢಭೂತಿಯನ್ನು ಹೊಂದಿರುವ ದೇಶ.

ಅದರಿಂದ ಎಚ್ಚರಿಕೆಯಿಂದ ಇರಬೇಕು. ನಾವು ಆಚರಿಸುವಂಥ ಯಾವುದೇ ಕಾರ್ಯಕ್ರಮಗಳು ನೈತಿಕನೆಲೆಗಟ್ಟಿನ ಮೇಲೆ ರೂಪಗೊಳಿಸಬೇಕು. ಅಂತಹ  ಕಾರ್ಯವನ್ನು ಸಾಣೇಹಳ್ಳಿ ಪೂಜ್ಯರು ಮಾಡಿಕೊಂಡು ಬರುತ್ತಿದ್ದಾರೆ.

ಶಿವಯೋಗಿ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದು ಮನಸ್ಸುಗಳನ್ನು ಕಟ್ಟಿದರು. ಅದೇ ರೀತಿ ಸಾಣೇಹಳ್ಳಿ ಶ್ರೀಗಳು ಮನಸ್ಸುಗಳನ್ನು ಕಟ್ಟುವುದರ ಜೊತೆಗೆ ಲಿಂಗಾಯತ ಸಮುದಾಯವನ್ನು ಕಟ್ಟಬೇಕು ಎನ್ನುವ ಕಾರಣಕ್ಕೆ ರಂಗಭೂಮಿಯನ್ನು ಕಟ್ಟಿ  ಶಿವಸಂಚಾರ, ಕಲಾಸಂಘದ ಮೂಲಕ ಸಮಾಜವನ್ನು ಸುಧಾರಿಸುವ ಕೆಲಸ ಮಾಡಿದ್ದಾರೆ ಎಂದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್, ಜ್ಯೋತಿ, ದಾಕ್ಷಾಯಿಣಿ, ಶರಣ್, ಪುನೀತ್ ಸಂಗೀತ ಸುಧೆಯನ್ನು ನಡೆಸಿಕೊಟ್ಟರು.  ಗುರುಪಾದೇಶ್ವರ ಪ್ರೌಢಶಾಲೆ, ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ, ನಾಗೇನಹಳ್ಳಿಯ ದೇಸಾಯಿ ವಸತಿ ಶಾಲೆ, ಅಣ್ಣಿಗೆರೆ ಯಶಸ್ವಿನಿ ಯೋಗಸಂಸ್ಥೆ ಹಾಗೂ ಕುಂಬಳೂರಿನ ಬಸವ ಗುರುಕುಲ ಶಾಲೆಯ ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ರಚಿಸಿದ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಕೃತಿ ಹಾಗೂ ಯೋಗ ದಿನದರ್ಶಿಕೆ  ಲೋಕಾರ್ಪಣೆಗೊಂಡಿತು. ಶೃತಿ ನಿರ್ದೇಶನ ಭೂ ತಾಯಿ ನಾಟಕವನ್ನು  ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಕೀರ್ತಿನಾಥ ಕುರ್ತಕೋಟಿ ರಚನೆಯ ರಾಘು ಪುರಪ್ಪೇಮನೆ ನಿರ್ದೇಶನದ  ಆ ಮನಿ ನಾಟಕ ಪ್ರದರ್ಶಿಸಿದರು.  ಶಿಕ್ಷಕಿ ಶೋಭ ಸ್ವಾಗತಿಸಿದರೆ ಮಲ್ಲಿಕಾರ್ಜುನ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *