ತಿ. ನರಸೀಪುರ:
ಲಿಂಗಾಯತರನ್ನು ಒಡೆದು ಆಳುವ ನೀತಿ ಪ್ರಸಕ್ತ ಸನ್ನಿವೇಶದಲ್ಲಿ ಚಾಲ್ತಿಯಲ್ಲಿದೆ. ಶೇ.20ರಷ್ಟು ಮಂದಿ ಶೇ.80ರಷ್ಟು ಜನರನ್ನು ಛಿದ್ರಗೊಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಮದ್ಗಾರ ಲಿಂಗಯ್ಯನಹುಂಡಿ ಶೂನ್ಯಪೀಠದ ಅಧ್ಯಕ್ಷರಾದ ಪೂಜ್ಯ ಗೌರಿಶಂಕರ ಸ್ವಾಮೀಜಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ‘ಲಿಂಗಾಯತಧರ್ಮ ಜಾಗೃತಿ ಸಮಾವೇಶ’ ಹಾಗೂ ‘2026ನೇ ಸಾಲಿನ ದಿನದರ್ಶಿಕೆ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿದರು.
ಶೇ.80ರಷ್ಟು ಬಸವಾಭಿಮಾನಿಗಳೇ ಇದ್ದಾರೆ. ಬಸವತತ್ವ ಪರಂಪರೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಶೇ.20ರಷ್ಟು ಮಂದಿ ಬಸವತತ್ವ ಪರಂಪರೆ ಒಪ್ಪದೇ ಇರುವವರು ಜಾಣತನದಿಂದ ಶೇ.80ರಷ್ಟಿರುವ ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಒಡೆಯಲು ಮುಂದಾಗಿದ್ದಾರೆ. ಈಗ ಎಲ್ಲರೂ ಐಕ್ಯಮತವಾಗಬೇಕಿದೆ, ಬುದ್ಧಿವಂತರಾಗಬೇಕಿದೆ. ಒಡೆದು ಆಳುವ ನೀತಿ ಯಾರು ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ಮುಂದಿನ ಹೆಜ್ಜೆ ಇಡಬೇಕು, ಒಂದಾಗಬೇಕಿದೆ ಎಂದರು.
900 ವರ್ಷಗಳ ಹಿಂದೆಯೇ ಬಸವಣ್ಣನವರು ಅನುಭವ ಮಂಟಪ ಕಟ್ಟಿ, ಕಾಯಕ ವರ್ಗಗಳನ್ನು ಸೇರಿಸಿ ಶಿವ ಪಂಚಾಯತವನ್ನು ಕರುಣಿಸಿದ್ದರು. ಅನುಭವ ಮಂಟಪವೆಂಬ ಜೇನುಗೂಡಿಗೆ ಬಸವಣ್ಣನವರು ರಾಣಿ ಜೇನಾಗಿದ್ದು, ಬಸವಾದಿ ಪ್ರಮಥರು ವಚನ ಸಾಹಿತ್ಯವೆಂಬ ಜೇನಹನಿಯನ್ನು ನೀಡಿದ್ದಾರೆ.

ಜೇನಿನಂತಿರುವ ವಚನ ಸಾಹಿತ್ಯವನ್ನು ಭಕ್ತಾದಿಗಳು ಸವಿದಾಗ ಮಾತ್ರವೇ ಜಾಗೃತಿ ಮೂಡುತ್ತದೆ. ವಚನ ಸಾಹಿತ್ಯ ಅಧ್ಯಯನ ಮಾಡಿ ಶರಣು ಪರಂಪರೆಯ ಆಚಾರ-ವಿಚಾರಗಳನ್ನು ತಿಳಿಯುವ ಮೂಲಕ ಕ್ರಿಯಾಶೀಲರಾಗಬೇಕು ಎಂದರು. ವೀರಶೈವ ಎಂಬುದು ಶೂದ್ರ ಪಂಥ: ಇತ್ತೀಚೆಗಷ್ಟೇ ನಡೆದ ಜಾತಿಗಣತಿಯಲ್ಲಿ ಬಹಳಷ್ಟು ಮಂದಿ ಜಾತಿ ಕಾಲಂನಲ್ಲಿ ತಮ್ಮ ಜಾತಿಯನ್ನು ವೀರಶೈವ ಲಿಂಗಾಯತ ಎಂದು ಬರೆಸಿದ್ದಾರೆ.
ಯಾಕಾಗಿ ಬರೆಸಿದ್ದಾರೆ ಎಂಬುದು ಅರ್ಥವಾಗಿಲ್ಲ. ವೀರಶೈವ ಎಂಬುದು ಶೂದ್ರಪಂಥಕ್ಕೆ ಸೇರಿದ್ದು, ಅದು ನಮಗೆ ಬೇಕಿಲ್ಲ. ಮುಂದಿನ ವರ್ಷ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲಿದ್ದು ಆ ವೇಳೆ ಕಡ್ಡಾಯವಾಗಿ ಲಿಂಗಾಯತ ಎಂದಷ್ಟೇ ಕಡ್ಡಾಯವಾಗಿ ಬರೆಸಿ ಎಂದು ಸ್ವಾಮೀಜಿ ತಿಳಿಸಿದರು.
ಪಾಂಡವಪುರ ಚಿನಕುರುಳಿ ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಶಿವಬಸವಸ್ವಾಮಿ ಮಾತನಾಡಿ, ಆಧುನಿಕ ಕಾಲದಲ್ಲಿ ಒತ್ತಡದ ಜೀವನದಿಂದ ಮನುಷ್ಯ ಬಳಲುತ್ತಿದ್ದಾನೆ. ಧರ್ಮದ ಆಚರಣೆಯಿಂದ ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಿಂದ ಕಷ್ಟಗಳು ದೂರವಾಗುತ್ತವೆ. ಏಕಾಗ್ರತೆ, ನೈತಿಕತೆ, ಆರೋಗ್ಯ, ಆತ್ಮವಿಶ್ವಾಸ, ನೆಮ್ಮದಿ ವೃದ್ಧಿಸುತ್ತದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹದೇವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಎಂ. ರವಿ ತೊಟ್ಟವಾಡಿ, ಬಸವತತ್ವ ಪ್ರಚಾರಕ ಶರಣ ಲಿಂಗರಾಜಪ್ಪ ಚೌಹಳ್ಳಿ ಮಾತನಾಡಿದರು.
ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಮೈಸೂರು ಜಿಲ್ಲಾ ನಿರ್ದೇಶಕ ದೊಡ್ಡನಹುಂಡಿ ನಂಜುಂಡಸ್ವಾಮಿ, ಗೌರವ ಸಂಚಾಲಕ ಡಿ.ಎಲ್. ಮಹದೇವಪ್ಪ, ಪುರಸಭಾ ಸದಸ್ಯೆ ರೂಪ ಪರಮೇಶ್, ಬಜ್ಜಿ ಲಿಂಗಪ್ಪ, ಕೆಬೇಹುಂಡಿ ಸೋಮಶೇಖರಪ್ಪ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಹೆಳವರಹುಂಡಿ ನಟರಾಜು, ಹಿರಿಯೂರು ನವೀನ್, ಕು.ಶಿ. ಬೃಂಗೇಶ್, ಸೀಹಳ್ಳಿ ಗುರುಮೂರ್ತಿ, ಶಿವಪ್ರಸಾದ, ಧರ್ಮಯ್ಯನಹುಂಡಿ ಕುಮಾರ, ಕರೋಹಟ್ಟಿ ರಾಜಶೇಖರ, ಜೆಎಸ್‌ಎಸ್ ನಟರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್. ಶಿವಮೂರ್ತಿ, ಕಾಮಗೆರೆ ಬಸವರಾಜಪ್ಪ, ಅಕ್ಕಮಹಾದೇವಿ ಅಭಿವೃದ್ಧಿ ಸಹಕಾರ ಸಂಘ, ಶರಣ ಸಾಹಿತ್ಯ ಪರಿಷತ್ತು, ಶ್ರೀ ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Allari nivu yake basvatatvane opbeku anthideraa, edhu prjaprbhutva rastra