ತತ್ವ-ಚಿಂತನೆಗಳಿಗೆ ಕಾಲದ ಕಟ್ಟಳೆಗಳಿಲ್ಲ : ಡಾ. ಭೀಮಾಶಂಕರ ಬಿರಾದಾರ
ಬಸವಕಲ್ಯಾಣ:
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಸಮಸಮಾಜ, ಜಾತ್ಯತೀತ ಜಗತ್ತು, ಪ್ರಭುತ್ವ-ಸಾಂಸ್ಥಿಕ ಹಂಗಿಲ್ಲದ ಬದುಕು ಬದುಕಿದ್ದರು. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಕುವೆಂಪು ಅವರು ಸರ್ವೋದಯ, ಸಮನ್ವಯ, ನಿರಂಕುಶಮತಿತ್ವ ಪ್ರತಿಪಾದಿಸಿ, ವಿಶ್ವಮಾನವ ತತ್ವವನ್ನು ತಮ್ಮ ಸಾಹಿತ್ಯದ ತಾತ್ವಿಕತೆಯಾಗಿ ರೂಪಿಸಿದರು. ಬಸವಣ್ಣನವರ ಮತ್ತು ಕುವೆಂಪು ಅವರ ವಿಚಾರಗಳಲ್ಲಿ ಅತಿ ಹೆಚ್ಚು ಸಾಮ್ಯತೆಗಳಿವೆ. ಎಂದು ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಪ್ರಯುಕ್ತ ಕುವೆಂಪು ಸಾಹಿತ್ಯದ ತಾತ್ವಿಕತೆ ಕುರಿತ ಉಪನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತತ್ವ ಚಿಂತನೆಗಳಿಗೆ ಕಾಲದ ಕಟ್ಟಳೆಗಳಿಲ್ಲ. ಜನಪರ ವಿಚಾರಗಳು ಯಾವ ಕಾಲದಾದರೂ ಅವು ನಿರಂತರ ಚಲನಶೀಲತೆ ಹೊಂದಿರುತ್ತವೆ ಎಂದರು.
ಮೌಢ್ಯ, ಕಂದಾಚಾರ, ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸಿದವರಲ್ಲಿ ಬಸವಣ್ಣನವರ ನಂತರದ ನಿಷ್ಠುರ ಧ್ವನಿ ಕುವೆಂಪು. ಇವರಿಬ್ಬರೂ ಕನ್ನಡಪ್ರಜ್ಞೆ ವಿಸ್ತರಿಸಿದವರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ವೈಚಾರಿಕ ಅರಿವನ್ನು ಬಿತ್ತಿದವರು ಎಂದರು.
ಕುವೆಂಪು ಅವರ ಸಾಹಿತ್ಯ ಕಳೆದ ಐದಾರು ದಶಕಗಳಿಂದ ಹಲವು ನೆಲೆಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಅನುಸಂಧಾನಕ್ಕೆ ಒಳಪಡುತ್ತಲಿವೆ. ಕುವೆಂಪು ಅವರು ಬರಹ ಆರಂಭಿಸಿದ ಕಾಲದಿಂದಲೇ ಟೀಕೆ, ಟಿಪ್ಪಣಿ, ಪ್ರತಿಕ್ರಿಯೆ ರೂಪದಲ್ಲಿ ಅವರ ಬರಹದ ಕುರಿತು ಕನ್ನಡದಲ್ಲಿ ಕುವೆಂಪು ಸಾಹಿತ್ಯ ವಿಮರ್ಶೆಯ ಮಾರ್ಗ ಆರಂಭವಾಗಿದೆ ಎಂದರು.

ಕಾಡು, ಕಾಡಿನ ಜೀವಜಾಲ, ಮನುಷ್ಯ ಸಂಬಂಧಗಳ ಬಗೆಗೆ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡತಿ’ ಕಾದಂಬರಿಗಳಲ್ಲಿ ಕಟ್ಟಿಕೊಟ್ಟ ಬಗೆ ಅಚ್ಚರಿ ಮೂಡಿಸುತ್ತದೆ. ಈ ಕಾದಂಬರಿಗಳಲ್ಲಿ ಬರುವ ಮಲೆನಾಡಿನ ತಳಸಮುದಾಯದ ಬದುಕು, ಶೂದ್ರ ತಪಸ್ವಿ ನಾಟಕಗಳು ಸಬಾಲ್ಟರ್ನ್ ಓದಿಗೆ ಒಡ್ಡುತ್ತವೆ ಎಂದರು.
ಕುವೆಂಪು ಕನ್ನಡ ನುಡಿ ಪ್ರೇಮದ ಬಗೆಗೆ ಎಷ್ಟು ಕವಿತೆ ಬರೆದಿದ್ದಾರೆಯೋ, ಅಷ್ಟೇ ಮಹತ್ವ ನೀಡಿದ್ದು ಪ್ರಕೃತಿ ಮತ್ತು ಪರಿಸರದ ವಿಸ್ಮಯಕ್ಕೆ. ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಕಾಡಿನ ಕಥನ ಹಾಗೂ ವಿಶ್ಲೇಷಣೆ ಓದುಗರಿಗೆ ಕಾಡಿನ ಪಯಣದ ದಟ್ಟ ಅನುಭವ ನೀಡುತ್ತದೆ ಎಂದರು.
ಕಲಬುರಗಿಯ ನಾಗಾಂಬಿಕಾ ಮಹಿಳಾ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಜಗದೀಶ ಬಡಿಗೇರ ಮಾತನಾಡಿ, ಕುವೆಂಪು ಈ ಶತಮಾನದ ಬಹುದೊಡ್ಡ ಲೇಖಕರು. ಮಕ್ಕಳ ಸಾಹಿತ್ಯ, ವಿಚಾರ, ವಿಮರ್ಶೆ, ನಾಟಕ, ಕತೆ, ಕಾದಂಬರಿ, ಮಹಾಕಾವ್ಯ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದಿದ್ದಾರೆ. ರಾಷ್ಟ್ರೀಯತೆ, ನುಡಿಪ್ರೇಮ ಕುವೆಂಪು ಸಾಹಿತ್ಯದ ಸತ್ವವಾಗಿದೆ ಎಂದರು.
ಕನ್ನಡ ಅಧ್ಯಾಪಕ ಚನ್ನಬಸಪ್ಪ ಗೌರ ಮಾತನಾಡಿ, ಕುವೆಂಪು ಅವರು ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿಮಾನದ ಬಗೆಗೆ ಹೆಚ್ಚು ಕವಿತೆಗಳು ಬರೆದಿದ್ದಾರೆ. ಅವರು ಸಾರಿದ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಡೀ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಹೋಲಿಸಿದ್ದಾರೆ. ಭಾರತದ ಅಖಂಡತೆ, ಅನನ್ಯತೆ ಸೂಚಿಸುವ ಕಾವ್ಯ ರಚಿಸಿದ್ದಾರೆ ಎಂದರು.
ಪ್ರವೀಣ ಬಿರಾದಾರ, ಸಂಗೀತಾ ಮಹಾಗಾಂವೆ, ಶೃತಿ ನೀಲಮಠ, ವಿವೇಕಾನಂದ ಶಿಂದೆ, ರೋಷನ್ ಬೀ, ಗುರುದೇವಿ ಕಿಚಡೆ, ಸನತ್ ರೆಡ್ಡಿ, ಶೀತಲ್ ರೆಡ್ಡಿ, ಪ್ರೀಯಾ ಚೌಹಾಣ್, ಕೃಷ್ಣಪ್ಪ ಸದಲಾಪುರ, ನಾಗರಾಜ ನಾಸೆ, ಕೃಷ್ಣ ಗೌಳಿ, ವೀರೇಶ ಮಠಪತಿ, ಎಂ.ಡಿ.ಜಬಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಗಿರೀಶ್ ಪಾಟೀಲ ಮೊದಲಾದವರಿದ್ದರು.
ಕುವೆಂಪು ಅವರು ಬರೆದ ‘ಬಾ ಇಲ್ಲಿ ಸಂಭವಿಸು ಸತ್ಯಾವತಾರ’ ‘ತೆರೆದಿದೆ ಮನೆ ಓ ಬಾ ಅತಿಥಿ’ ಮತ್ತು ‘ಅನಿಕೇತನ’ ಕವಿತೆಗಳನ್ನು ವಿದ್ಯಾರ್ಥಿಗಳು ಹಾಡಿದರು.
ಐಕ್ಯುಎಸಿ ಸಂಯೋಜಕ ಪವನ ಪಾಟೀಲ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಜಾವಳಗೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.
