ಕೊಪ್ಪಳ
ಪ್ರಖ್ಯಾತವಾಗಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5 ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಎಂದಿನಂತೆ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ.
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀಮಠದಲ್ಲಿ ಬಸವಪಟ ಆರೋಹಣ ಮಾಡುವ ಮೂಲಕ ಈಗಾಗಲೇ ವಿದ್ಯುಕ್ತ ಚಾಲನೆ ನೀಡಲಾಗಿದೆ.
ಮಹಾದಾಸೋಹ ಮಂಟಪದಲ್ಲಿ ಮಹಾದಾಸೋಹಕ್ಕೆ ಚಾಲನೆ ನೀಡಲಾಗಿದೆ. ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಸುಮಾರು 76 ಕೌಂಟರ್ ನಿರ್ಮಿಸಲಾಗಿದೆ. ಅದರಲ್ಲಿ 40 ಕೌಂಟರ್ ಅನ್ನ ಸಾರು, 36 ಕೌಂಟರ್‌ಗಳಲ್ಲಿ ಸಿಹಿ ಪದಾರ್ಥ ವಿತರಣೆಗೆ ಮಾಡಲಾಗುತ್ತದೆ.
ಈ ಮಹಾದಾಸೋಹದಲ್ಲಿ ದಿನಕ್ಕೆ ಸುಮಾರು 300 ರಿಂದ 400ರ ವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆ ಮಾಡಲಿದ್ದಾರೆ. ಪ್ರಸಾದ ವಿತರಣೆಯಲ್ಲಿ ಸುಮಾರು 500 ರಿಂದ 600 ಭಕ್ತರು ಪಾಲ್ಗೊಳ್ಳುವರು.
ಜ.5
ಸೋಮವಾರ ಬೆಳಗ್ಗೆ 4 ಮಹಾಮಹಿಮ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 10.30ಕ್ಕೆ ಗವಿಮಠದ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ ನಡೆಯಲಿದೆ. ಸಂಜೆ 5.30 ಗಂಟೆಗೆ ಗವಿಸಿದ್ಧೇಶ್ವರ ಮಹಾರಥೋತ್ಸವ ನೆರವೇರಲಿದೆ.
ಮಹಾರಥೋತ್ಸವ ನಂತರ ಶ್ರೀಮಠದ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಹಾಸಂಸ್ಥಾನ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಖಂಡಕಿ ಗುರುದೇವಾಶ್ರಮದ ಯೋಗಿಶ್ವರ ಸ್ವಾಮೀಜಿ ಉಪದೇಶಾಮೃತ ನೀಡಲಿದ್ದಾರೆ. ಶಿವಮೊಗ್ಗದ ಹಿಂದೂಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಅವರಿಂದ ಸ್ವರಸಂಧ್ಯಾ ಜುಗಲ್ಬಂದಿ ಕಾರ್ಯಕ್ರಮ ಜರಗಲಿದೆ ಹಾಗೂ ಗಂಗಾವತಿಯ ನರಸಿಂಹ ಜೋಶಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಜ.6
ಬೆಳಗ್ಗೆ 10.30 ಗಂಟೆಗೆ ಗವಿಮಠದ ಆವರಣದಲ್ಲಿ ಆಹ್ವಾನಿತ ಕುಸ್ತಿಪಟುಗಳಿಂದ ಕುಸ್ತಿ ಪ್ರದರ್ಶನ ಜರುಗಲಿದೆ. ಸಂಜೆ 6ಕ್ಕೆ ಶ್ರೀಮಠದ ಕೈಲಾಸ ಮಂಟಪದಲ್ಲಿ ಭಕ್ತಹಿತಚಿಂತನ ಸಭೆ ನಡೆಯಲಿದೆ. ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಹೆಬ್ಬಳ್ಳಿಯ ದತ್ತಾವಧೂತ ಸ್ವಾಮೀಜಿ, ಕೊಟ್ಟೂರುಸ್ವಾಮಿ ಶಾಖಾಮಠದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಮಕ್ಕಳ ಹೃದ್ರೋಗ ತಜ್ಞರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ವಹಿಸಿಕೊಳ್ಳಲಿದ್ದಾರೆ.
ಜ.7
ಬೆಳಗ್ಗೆ 10.30 ಗಂಟೆಗೆ ಗವಿಮಠದ ಆವರಣದಲ್ಲಿಆಹ್ವಾನಿತ ತಂಡಗಳಿಂದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ಸಂಜೆ 6ಕ್ಕೆ ಸಮಾರೋಪ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಹಾಗೂ ಗದಗ ರಾಜೂರ-ಅಡ್ನೂರ ಬ್ರಹನ್ಮಠದ ಪಂಚಾಕ್ಷರ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ವೈದ್ಯ ಡಾ.ನಾ. ಸೋಮೇಶ್ವರ ಅವರು ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ. ಹಿರಿಯ ಕಲಾವಿದ ಎಚ್.ಜಿ. ದತ್ತಾತ್ರೇಯ (ದತ್ತಣ್ಣ) ಅವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಮುನಿರಾಜು ಕಡಬಿಗೆರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ, ಜನಪದ ಚಾವಡಿ ಕಾರ್ಯಕ್ರಮ, ಗಂಗಾವತಿಯ ಬಿ. ಪ್ರಾಣೇಶ್ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಜ. 5 ಮತ್ತು 6
ಎರಡು ದಿನ ಹಿರೇಬಗನಾಳ ಗ್ರಾಮದ ಗವಿಸಿದ್ಧೇಶ್ವರ ಸೇವಾ ನಾಟ್ಯ ಸಂಘದಿಂದ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹತ್ತಿರ ‘ಶ್ರೀಗವಿಸಿದ್ಧೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಬೃಹತ್ ರಕ್ತದಾನ ಶಿಬಿರ
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಘಟಕ ಹಾಗೂ ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಅವರಿಂದ ಜ.5 ರಿಂದ 8ರವರೆಗೆ ಬೃಹತ್ ರಕ್ತದಾನ ಶಿಬಿರ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಕೃಷಿಮೇಳ ಹಾಗೂ ಫಲಪುಷ್ಪ ಪ್ರದರ್ಶನ
ಜಾತ್ರಾ ಮಹೋತ್ಸವದ ಆವರಣದಲ್ಲಿ ಜ. 5ರಿಂದ 9ರ ವರೆಗೆ ಕೃಷಿ ಮೇಳ ಹಾಗೂ ಜ. 5ರಿಂದ 14ರ ವರೆಗೆ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿ. ಸಾಲುಮರದ ತಿಮ್ಮಕ್ಕನವರು ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಸ್ಮರಿಸುವ ಪ್ರದರ್ಶನಗಳು ಫಲಪುಷ್ಪ ಪ್ರದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.
