ಬಸವಕಲ್ಯಾಣದಲ್ಲಿ ‘ಶರಣ ಭಾರತ ಸಂಶೋಧನಾ ಕೇಂದ್ರ’ ಸ್ಥಾಪನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ವಚನಗಳ ಉಗಮ ಸ್ಥಾನ ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ಸಂಶೋಧನೆ ಕೆಲಸ ಮಾಡುವ ಉದ್ದೇಶದೊಂದಿಗೆ ಶರಣ ಭಾರತ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ ಹೇಳಿದರು.

ನಗರದ ಬಂದವರ ಓಣಿ ಸಭಾಭವನದಲ್ಲಿ ಮಂಗಳವಾರ ಗಡ್ಡೆ ಪರಿವಾರದಿಂದ ನಡೆದ ಲಿಂಗದೀಕ್ಷೆ ಮತ್ತು ಶರಣ ಭಾರತ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಾದಿ ಶರಣರು 12ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ ಈ ಸ್ಥಳದಲ್ಲಿ ಸಾಹಿತ್ಯ ಸಂಶೋಧನಾ ಕೇಂದ್ರ ಅಗತ್ಯವಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಗಡ್ಡೆ ಮತ್ತು ಪ್ರೊ.ವಿಜಯಲಕ್ಷ್ಮೀ ಗಡ್ಡೆ ದಂಪತಿಗಳ ನೇತೃತ್ವದಲ್ಲಿ ಈ ಕೇಂದ್ರ ಶರಣ ಸಾಹಿತ್ಯದ ಸಂಶೋಧನೆ ಮತ್ತು ಪ್ರಕಟಣೆಗೆ ಆದ್ಯತೆ ನೀಡಲಿ’ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ವಚನ ಸಾಹಿತ್ಯದಲ್ಲಿ ಸಾವಿರಾರು ಕಡೆ ಲಿಂಗದೀಕ್ಷೆ ಮಹತ್ವ ಕುರಿತು ಎಲ್ಲಾ ಶರಣರು ತಿಳಿ ಹೇಳಿದ್ದಾರೆ. ಲಿಂಗಪೂಜೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಬರುತ್ತದೆ ಅಲ್ಲದೇ ಏಕಾಗೃತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಸಿ ಆಯುಷ್ಯ ಅರೋಗ್ಯ ಹೆಚ್ಚುತ್ತದೆ.

ಹಿರಿಯ ಬಸವ ತತ್ವ ಚಿಂತಕ ಅಶೋಕ ಬರಗುಂಡಿ ಮಾತನಾಡಿ, ವಚನಗಳ ಅಧ್ಯಯನ ಮತ್ತು ಲಿಂಗಾಂಗ ಯೋಗ ಪ್ರತಿಯೊಬ್ಬರೂ ಮಾಡಬೇಕು ವಿದ್ಯಾರ್ಥಿಗಳಿಗೆ, ಯುವಕರಿಗೆ ಈ ಕುರಿತು ತಿಳಿ ಹೇಳಬೇಕು ವಚನ ಸಾಹಿತ್ಯದ ಆಶಯದಂತೆ ಗಡ್ಡೆ ಪರಿವಾರದ ಗೃಹಸ್ಥರಿಂದಲೇ ಲಿಂಗದೀಕ್ಷೆ ಮಾಡಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದರು.

ಬಸವೇಶ್ವರ ದಿನದರ್ಶಿಕೆ ಬಿಡುಗಡೆ ಮಾಡಿದ ಸಾಹಿ ಡಾ.ರಂಜಾನ್‌ ದರ್ಗಾ ವಿಶ್ವಶಾಂತಿಗಾಗಿ ಬಸವ ತತ್ವವನ್ನು ಜಗತ್ತಿಗೆ ಮುಟ್ಟಿಸಲು ಸರ್ಕಾರ, ಸಂಘ ಸಂಸ್ಥೆಗಳು, ಸಾಹಿತಿ ಹಾಗೂ ಬಸವ ತತ್ವದ ಅಭಿಮಾನಿಗಳು ಮುಂದೆ ಬರಬೇಕೆಂದರು.

ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ್ ಗಡ್ಡೆ ಮತ್ತು ಅಕ್ಕಮಹಾದೇವಿ ಅವರ ಮಕ್ಕಳಾದ ವಚನ ಮತ್ತು ವಿವೇಕ ಅವರಿಗೆ ಅಜ್ಜಿ ವಿಜಯಲಕ್ಷ್ಮಿ ಗಡ್ಡೆ ಲಿಂಗದೀಕ್ಷೆ ನೀಡಿರುವುದು ವಿಶೇಷವಾಗಿತ್ತು. ಬಳಿಕ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ ‘ಗೃಹಸ್ಥರೇ ಲಿಂಗದೀಕ್ಷೆ ನೀಡಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಬಸವತತ್ವವೂ ಇದನ್ನೇ ಹೇಳುತ್ತದೆ. ಲಿಂಗಾಯತರು ಲಿಂಗಧರಿಸುವುದು ಅತ್ಯಂತ ಅವಶ್ಯಕ’ ಎಂದರು.

ಪ್ರೊ.ವಿಜಯ ಲಕ್ಷ್ಮೀ ಮತ್ತು ಗುರುನಾಥ ಗಡ್ಡೆಯವರನ್ನು ಗೌರವಿಸಲಾಯಿತು. ಡಾ.ವೀರಣ್ಣ ರಾಜೂರ ಬಸವ ದರ್ಶನ ಪಾಕೇಟ್‌ ಡೈರಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಹರಳಯ್ಯ ಗವಿಯ ಡಾ.ಅಕ್ಕ ಗಂಗಾಂಬಿಕೆ, ಬಸವೇಶ್ವರ ದೇವಸ್ಥಾನ ಪಂಚಕಮೀಟಿಯ ಪ್ರಮುಖರಾದ ಶಶಿಕಾಂತ ದುರ್ಗೆ, ಬಸವರಾಜ ಕೋರಕೆ, ಡಾ.ಜಿ.ಎಸ್ ಭುರಾಳೆ, ಅನೀಲ ರಗಟೆ, ವೀರಣ್ಣ ಹಲಶೇಟ್ಟಿ, ಸಾವಿತ್ರಿ ಸಲಗರ, ವೈಜಿನಾಥ ಕಾಮಶೇಟ್ಟಿ, ಶಿವರಾಜ ನರಶೇಟ್ಟಿ, ತಹಸೀನ ಅಲಿ ಜಮಾದಾರ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ವೀಠ್ಠಲರಾವ ಹೂಗಾರ, ಅಶೋಕ ಬರಗುಂಡೆ, ಜಿ.ಎಸ್. ಪಾಟೀಲ, ಸಿದ್ದು ಯಾಪಲಪರವಿ, ಲಿಂಗಾರತಿ ಅಲ್ಲಮಪ್ರಭು ನಾವದಗೇರೆ, ಬಂಡೇಪ್ಪ ಪಾಟೀಲ ತರನಳ್ಳಿ, ಅಕ್ಕಮಹಾದೇವಿ ಗವಿಯ ಶರಣೆಯರಾದ ಸತ್ಯಕ್ಕ ತಾಯಿ, ಕಲ್ಯಾಣಮ್ಮ, ಕಲ್ಯಾಣರಾವ ಮದರಗಾಂವಕರ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಸಿದ್ದಲಿಂಗ, ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *