ಕೂಡಲಸಂಗಮದಲ್ಲಿ ವಚನ ಪಠಣ ಸಪ್ತಾಹಕ್ಕೆ ಚಾಲನೆ

ಕೂಡಲಸಂಗಮ :

ಬಸವಾದಿ ಶರಣರ ವಚನ ಸಾಹಿತ್ಯ ಬದುಕಿನ ಸಂವಿಧಾನವಾಗಬೇಕು. ಮಾನವಧರ್ಮ, ಪ್ರೀತಿ, ಅಂತಃಕರಣ ವಚನ ಸಾಹಿತ್ಯದಲ್ಲಿ ಇದೆ. ಶರಣರು ಬದ್ದತೆಯಿಂದ ಸ್ವಾವಲಂಬಿಯಾಗಿ ಬದುಕಿದ್ದು, ಎಲ್ಲರಿಗೂ ಮಾದರಿಯಾಗಿದೆ ಎಂದು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಶುಕ್ರವಾರ ಕೂಡಲಸಂಗಮ ಬಸವಧರ್ಮ ಪೀಠದ ಶರಣ ಲೋಕದಲ್ಲಿ ೩೯ನೇ ಶರಣ ಮೇಳದ ನಿಮಿತ್ಯ ನಡೆದ ಅಖಂಡ ವಚನ ಪಠಣ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಚನ ಸಾಹಿತ್ಯದಲ್ಲಿ ಬದುಕಿಗೆ ಅವಶ್ಯವಾಗಿ ಬೇಕಿರುವ ಅಂಶಗಳಿದ್ದು ಎಲ್ಲರು ಅಧ್ಯಯನ ಮಾಡುವುದರ ಮೂಲಕ ಸುಂದರ ಬದುಕು ನಿರ್ಮಿಸಿಕೊಳ್ಳಬೇಕು. ನಿತ್ಯ ಸುಪ್ರಭಾತದಲ್ಲಿ ಕನಿಷ್ಠ ಐದು ವಚನಗಳನ್ನಾದರೂ ಪಾರಾಯಣ ಮಾಡಬೇಕು.

ಇಂದು ಆರಂಭಗೊಂಡ ವಚನ ಪಠಣ ಜನವರಿ ೧೪ರ ರಾತ್ರಿ ೧೦ ಗಂಟೆಗೆ ಮುಕ್ತಾಯಗೊಳ್ಳುವುದು. ಬೆಳಗ್ಗೆ ೭ ಗಂಟೆಯಿಂದ ಪ್ರಾರಂಭವಾಗಿ ರಾತ್ರಿ ೧೦ ಗಂಟೆಯವರೆಗೆ ಈ ವಚನ ಪಠಣ ನಡೆಯುವುದು ಎಂದ ಹೇಳಿದರು.

ಬಸವಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಬಸವಭಕ್ತರು ನಿತ್ಯ ಅರ್ಧಗಂಟೆ ವಚನ ಪಠಣಕ್ಕೆ ಮೀಸಲಿಡಬೇಕು. ವಿದ್ಯಾರ್ಥಿಗಳಿಗೆ, ಯುವಕರಿಗೆ ವಚನ ಸಾಹಿತ್ಯದ ಅರಿವು ಮೂಡಿಸುವ ಕಾರ್ಯವನ್ನು ಶರಣ ಮೇಳ ಕಳೆದ ೩೮ ವರ್ಷದಿಂದ ಮಾಡುತ್ತ ಬಂದಿದೆ. ವಚನ ಸಾಹಿತ್ಯವನ್ನು ದೇಶ ವಿದೇಶದಲ್ಲಿ ಭಿತ್ತರಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.

ಸಮಾರಂಭದಲ್ಲಿ ಬೆಂಗಳೂರು ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ಮಾತೆ ವಿಜಯಾಂಬಿಕಾ, ಬಸವರತ್ನಾದೇವಿ, ಹೈದರಾಬಾದ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಮಾತೆ ತುಂಗಮ್ಮ, ಮಾತೆ ಅಕ್ಕನಾಗಲಾಂಬಿಕೆ, ಚಿತ್ರದುರ್ಗ ಬಸವ ಮಂಟಪದ ಮಾತೆ ದಾನೇಶ್ವರಿ, ಬೆಂಗಳೂರು ಬಸವ ಗಂಗೋತ್ರಿ ವಿಶ್ವಕಲ್ಯಾಣ ಮಿಷಣದ ಬಸವಯೋಗಿ ಸ್ವಾಮೀಜಿ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *