ಕೂಡಲಸಂಗಮ:
ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ತತ್ವ, ಸಂದೇಶಗಳಲ್ಲಿ ನಂಬಿಕೆ ಇಟ್ಟುಕೊಂಡು ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಶರಣ ಮೇಳ ನಡೆಯಬೇಕು ಎಂಬ ಉದ್ದೇಶದಿಂದ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರು ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮವನ್ನು ಲಿಂಗಾಯತರ ಧರ್ಮಕ್ಷೇತ್ರ ಎಂದು ಗುರುತಿಸಿ ವರ್ಷಕ್ಕೆ ಒಂದು ಬಾರಿಯಾದರು ಒಂದೆಡೆ ಸೇರಬೇಕು ಎಂದು ಶರಣ ಮೇಳವನ್ನು ೧೯೮೮ರಲ್ಲಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಶಿಸ್ತುಬದ್ದವಾಗಿ ನಿರಂತರವಾಗಿ ನಡೆದುಕೊಂಡು ಬಂದಿದೆ.
ಕಳೆದ ೩೮ ವರ್ಷದಿಂದ ಶರಣ ಮೇಳವು ಜನರಲ್ಲಿ ಸಮಾನತೆ, ಸಹೋದರತ್ವ ಭಾವನೆ ಮೂಡಿಸಿದ್ದು ಧರ್ಮದ ಕಡೆಗೆ ಜನ ಬರದೇ ಇದ್ದಾಗ ಧರ್ಮವನ್ನೇ ಅವರ ಮನೆ ಮನಗಳಿಗೆ ತಲುಪಿಸಿದ ಶ್ರೇಯಸ್ಸು ಶರಣ ಮೇಳಕ್ಕೆ ಇದೆ.
ನಾಡಿನ ವಿವಿಧ ಭಾಗಗಳಿಂದ ಶರಣ ಮೇಳಕ್ಕೆ ಆಗಮಿಸುವ ಶರಣ-ಶರಣೆಯರು ಭಕ್ತಿ-ಭಾವ ಸಂಗಮದಲ್ಲಿ ಸಂತಸ ಪಡುವರು. ಎಲ್ಲ ಕಾರ್ಯಗಳನ್ನು ಶರಣ ಶರಣೆಯರೇ ಮಾಡುವರು. ಯೋಗ, ವಚನ ಚಿಂತನ-ಮಂಥನ, ವಚನ ರಸಪ್ರಶ್ನೆ, ವಚನ ಗಾಯನದಂತಹ ಜ್ಞಾನ ಭಂಡಾರದ ರಾಶಿಯೇ ಶರಣ ಮೇಳ ವೇದಿಕೆಯಲ್ಲಿ ಇರುವುದು.

ಶರಣ ಮೇಳ ಪ್ರತಿವರ್ಷ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಿದ್ದು. ೩೯ನೇ ಶರಣ ಮೇಳವು ಜನವರಿ ೧೨ರಿಂದ ೧೪ರವರೆಗೆ ೩ ದಿನಗಳ ಕಾಲ ನಡೆಯುತ್ತದೆ. ೧೨ನೇ ಶತಮಾನದಲ್ಲಿ ಬಸವಣ್ಣನವರ ಕೀರ್ತಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿತ್ತು ಕಾರಣ ಯಾವುದೇ ಜಾತಿ ಭೇದ, ವರ್ಣ ಭೇದ ಮಾಡದೆ ಸಮಾನತೆಯ ನೆಲಗಟ್ಟಿನ ಮೇಲೆ ಸದೃಢ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು.
ಅದೇ ರೀತಿ ಇಂದು ಮಾತಾಜಿಯವರು ಜಾತಿ ಭೇದ, ವರ್ಣ ಭೇದ ಮಾಡದೆ ಸಮಾನತೆಯ ನೆಲಗಟ್ಟಿನ ಮೇಲೆ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವರು. ಕಳೆದ ೩೮ ವರ್ಷದಿಂದ ಶರಣ ಮೇಳದ ಮೂಲಕ ಜನರಲ್ಲಿ ತುಂಬಿಕೊಂಡ ಮೌಢ್ಯತೆ, ಕಂದಾಚಾರ, ಬಹುದೇವೋಪಾಸನೆ ಎಂಬ ಭೂತವನ್ನು ಯಶಸ್ವಿಯಾಗಿ ಹೋಗಲಾಡಿಸುವಲ್ಲಿ ಸಫಲರಾಗಿದ್ದಾರೆ. ಆದರಿಂದಲೇ ಶರಣ ಮೇಳ ಇಂದು ಲಕ್ಷಕ್ಕೂ ಅಧಿಕ ಜನರನ್ನು ಆಕರ್ಷಿಸುತ್ತಿದೆ.


ಲಿಂಗಾಯತರಿಗೆ ಬಸವಣ್ಣನೇ ಧರ್ಮಗುರು, ಕೂಡಲಸಂಗಮವೇ ಧರ್ಮಕ್ಷೇತ್ರ ಎಂದು ಸಾರಿ ಸಾರಿ ಹೇಳಿ ಎಲ್ಲಾ ಲಿಂಗಾತರನ್ನು ಜಾಗೃತಗೊಳಿಸಿದ್ದೆ ಶರಣ ಮೇಳ. ಶರಣ ಮೇಳಕ್ಕೆ ನಾಡಜನ ಜನ ಮಾತ್ರವಲ್ಲದೇ ದೇಶ ವಿದೇಶಗಳಿಂದ ಶರಣರು ಆಗಮಿಸುತ್ತಾರೆ. ಪ್ರತಿ ಶರಣ ಮೇಳದಲ್ಲಿಯೂ ಜನ ಅಷ್ಟೇ ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಭಾಗವಹಿಸಿ, ತನು, ಮನ, ಧನ ಸೇವೆ ಸಲ್ಲಿಸಿ ಹೋಗುತ್ತಾರೆ.
ಶರಣ ಮೇಳದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವದೇ ಒಂದು ಪವಿತ್ರ ಕಾರ್ಯ. ಬಿಳಿ ವಸ್ತ್ರ ಧರಿಸಿ, ಹೆಗಲ ಮೇಲೆ ಕಾವಿ ಬಣ್ಣದ ಸ್ಕಾರ್ಪ್ ಧರಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹೇಳುತ್ತಿದ್ದರೆ ಮಾತಾಜಿಯವರ ಕಂಚಿನಕಂಠ ಎಂಥವರನ್ನು ಮಂತ್ರ ಮುಗ್ದನನ್ನಾಗಿ ಮಾಡುತ್ತದೆ. ಅಲ್ಲದೇ ಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ಕೈಯಲ್ಲಿ ಹಿಡಿದು ಪೂಜಿಸುತ್ತಿದ್ದರೆ ಆ ಮಹಾಮನೆ ಆವರಣ ಭಕ್ತಿ ಎಂಬ ಫೃಥ್ವಿಯಾಗಿಬಿಡುತ್ತದೆ.

ಶರಣರು ವ್ರತಗಳನ್ನು ಹಿಡಿದು ೧೦, ೨೦, ೩೦ ದಿನಗಳ ಶರಣವ್ರತವನ್ನು ಶರಣ ಮೇಳದಲ್ಲಿ ಬಂದು ಗಣಲಿಂಗ ದರ್ಶನ ಬಿಡುತ್ತಾರೆ. ಲಿಂಗಾಯತ ಧರ್ಮದ ಪ್ರಕಾರ ಪ್ರತಿಯೊಬ್ಬ ಲಿಂಗಾಯತ ತನ್ನ ಜೀವಿತದಲ್ಲಿ ಒಮ್ಮೆಯಾದರು ಧರ್ಮಕ್ಷೇತ್ರ ಕೂಡಲಸಂಗಮಕ್ಕೆ ಬಂದು ಶರಣ ಮೇಳದಲ್ಲಿ ಪಾಲ್ಗೊಂಡು ಗಣಲಿಂಗ ದರ್ಶನ ಪಡೆಯಬೇಕೆಂದು ಪೂಜ್ಯ ಮಾತಾಜಿಯವರು ಧಾರ್ಮಿಕ ವಿಧಿ-ವಿಧಾನಗಳನ್ನು ಜನರಿಗೆ ಮನದಟ್ಟು ಮಾಡಿದ್ದಾರೆ.

ದಾಸೋಹದ ವ್ಯವಸ್ಥೆ, ಇಷ್ಟಲಿಂಗ ದೀಕ್ಷೆ, ಚಿಂತನಗೋಷ್ಠಿ, ಉಪನ್ಯಾಸ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ ಜರುಗುತ್ತವೆ. ಯೋಗ ತಜ್ಞರು ಬೆಳಗಿನ ಜಾವದಲ್ಲಿ ಯೋಗ ಪ್ರಾಣಾಯಾಮ ಮಾಡಿಸುತ್ತಾರೆ. ಜನವರಿ ೧೪ರಂದು ಬೆಳಗ್ಗೆ ೧೦ ಗಂಟೆಗೆ ಸಾಮೂಹಿಕ ಧ್ವಜಾರೋಹಣ ಹಾಗೂ ಸಾಯಂಕಾಲ ಆಕರ್ಷಕ ಪಥ ಸಂಚಲನ ಇರುತ್ತದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಶರಣರು ಭಕ್ತಿ ಪ್ರಧಾನವಾಗಿ ನ್ಯತ್ಯ ಮಾಡುತ್ತ ಹಾಡಿ ನಲಿಯುತ್ತಾರೆ.
