ದಾವಣಗೆರೆ
ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ‘ತೋಂಟದ ಸಿದ್ಧಲಿಂಗ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ 12ನೆಯ ಶತಮಾನದ ಶರಣರು ಮೌಢ್ಯಗಳನ್ನು ತೊಲಗಿಸಿ ವಚನಗಳನ್ನು ಕೊಟ್ಟರು. ವಚನ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟವರು ಯಡಿಯೂರ ಸಿದ್ಧಲಿಂಗೇಶ್ವರರು. ಸಿದ್ಧಲಿಂಗೇಶ್ವರರು ಕಾಯಕ, ದಾಸೋಹ ತತ್ವಗಳನ್ನು ಒತ್ತಿ ಹೇಳಿದ್ದಾರೆ.
ನಮ್ಮ ಜನ ನದಿ, ಗುಹೆ, ಗುಡ್ಡವಾಸಿಗಳಾದರೆ ಶಿವಸಾಕ್ಷಾರವಾಗುತ್ತದೆಂದು ನಂಬಿದ್ದಾರೆ. ಆದರೆ ಸಿದ್ದಲಿಂಗೇಶ್ವರರು ಎದೆಯ ಮೇಲೆ ಇಷ್ಟಲಿಂಗ ಧರಿಸಿ ಶಿವ ಸಾಕ್ಷಾತ್ಕಾರ ಪಡೆದುಕೊಳ್ಳಬೇಕೆಂದರು.

ನಮಗೆ ಯಾವುದೇ ಪ್ರಶಸ್ತಿಯ ಬಯಕೆ ಇಲ್ಲ. ಸ್ವಾಮಿತ್ವ ಎನ್ನುವುದಕ್ಕಿಂತ ಹೆಚ್ಚಿನ ಪ್ರಶಸ್ತಿ ಯಾವುದಿದೆ?. ಸ್ವಾಮಿತ್ವ ಎನ್ನುವುದೇ ದೊಡ್ಡ ಹಾಗೂ ಶ್ರೇಷ್ಟ ಪ್ರಶಸ್ತಿ. ಬಂದ ಪ್ರಶಸ್ತಿಗಳನ್ನು ತಿರಸ್ಕರಿಸಿದರೆ ಜನರು ಇದಕ್ಕೆ ಬೇರೆ ಅರ್ಥ ಕಲ್ಪಿಸುವರು. ಆದ್ದರಿಂದಲೇ ಪ್ರಶಸ್ತಿ ಪುರಸ್ಕಾರಗಳನ್ಮು ಗೌರವದಿಂದಲೇ ಸ್ವೀಕರಿಸುತ್ತಾ ಬಂದಿದ್ದೇವೆ.
ಈ ಪ್ರಶಸ್ತಿ ನಮಗೆ ಸೇರುವಂಥದ್ದಲ್ಲ. ನಮ್ಮ ಹಿರಿಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಹಾಗೂ ನಮ್ಮ ಭಕ್ತರಿಗೆ ಸಲ್ಲಬೇಕು. ನಮ್ಮ ಗುರುಗಳು ನಮಗೆ ಆಶ್ರಯ ನೀಡದಿದ್ದರೆ ಯಾರೋ ಮನೆಯಲ್ಲಿ ಕೂಲಿನಾಲಿ ಮಾಡಿ ಬದುಕುವಂಥ ವಾತಾವರಣ ನಿರ್ಮಾಣವಾಗುತ್ತಿತ್ತೆನೋ. ನಮ್ಮ ಗುರುಗಳು ನಮಗೆ ಆಶ್ರಯ ನೀಡಿ, ವಿದ್ಯಾಭ್ಯಾಸ ಕೊಡಿಸಿ, ಸಂಸ್ಕಾರಯುತರನ್ನಾಗಿಸಿ, ದೀಕ್ಷೆ ನೀಡಿ ಸ್ವಾಮಿಗಳನ್ನಾಗಿ ಮಾಡಿದರು.
ಶರಣ ಚಿಂತಕ ಸಿ. ಸೋಮಶೇಖರ ಮಾತಮಾಡಿ ಶರಣರ ವಚನಗಳು ಪುನರುಜ್ಜೀವನಗೊಂಡಿದ್ದು 16 ನೆಯ ಶತಮಾನದ ತೋಂಟದ ಸಿದ್ದಲಿಂಗೇಶ್ವರ ಕಾಲದಲ್ಲಿ. ಬಸವಣ್ಣನೇ ಉಸಿರೆಂದು ಭಾವಿಸಿ ಬಸವಣ್ಣನ ವಿಚಾರಗಳನ್ನು ಹೃದಯದಲ್ಲಿರಿಸಿಕೊಂಡು ಬಂದಿರುವ ಪಂಡಿತಾರಾಧ್ಯ ಶ್ರೀಗಳಿಗೆ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ಬಂದಿರುವುದು ಔಚಿತ್ಯಪೂರ್ಣವಾದುದು.
ಸಾಣೇಹಳ್ಳಿಯ ಪೂಜ್ಯರು ಚಿನ್ನದ ಪದಕವನ್ನು ತಿರಸ್ಕರಿಸಿ ಬಂಗಾರದ ಮನುಷ್ಯರಾದರು. ಮತ್ತೆ ಕಲ್ಯಾಣದ ಮೂಲಕ ಶರಣರ ವಿಚಾರಗಳನ್ನು ಪಸರಿಸಿದ ಕೀರ್ತಿ ಪಂಡಿತಾರಾಧ್ಯ ಶ್ರೀಗಳಿಗೆ ಸಲ್ಲುವುದು. ಸಾಣೇಹಳ್ಳಿಯಂಥ ಸಣ್ಣ ಹಳ್ಳಿಯನ್ನು ಸಾಂಸ್ಕೃತಿಕ ಹಳ್ಳಿಯನ್ನಾಗಿ ಮಾಡಿದರು.
ಬಸವಾದಿ ಶರಣರ ಚಿಂತನೆಗಳನ್ನು ಜನಮಾನಸಕ್ಕೆ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ಕಠಿಣ ಹೃದಯ ಮೃದು ಸ್ವಭಾವದವರು. ನ್ಯಾಯನಿಷ್ಠುರ ದಾಕ್ಷಿಣ್ಯಪರರು, ಆರಿಗೂ ಅಂಜದವರು ಎಂದರು.

ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ತೋಂಟದ ಸಿದ್ಧಲಿಂಗ ಯತಿಗಳು ಶರಣರ ವಿಚಾರಗಳನ್ನು ಪಸರಿಸುವ ಕಾರ್ಯದಲ್ಲಿ ಸಿದ್ದಲಿಂಗೇಶ್ವರರು ವಚನ ಕ್ರಾಂತಿಯನ್ನು ಮಾಡಿದರು. ಪಂಡಿತಾರಾಧ್ಯ ಶ್ರೀಗಳು ನಮ್ಮೆಲ್ಲರಿಗೂ ಗುರುಗಳು. ನಿಜವಾದ ಮಾತೃಹೃದಯಿಗಳು. ಶ್ರೀ ಶಿವಕುಮಾರ ಸ್ವಾಮಿಗಳು ಸಿಂಹದಂತೆ. ಅವರ ಶಿಷ್ಯರಾಗಿ ಬೆಳೆದವರು ಪಂಡಿತಾರಾಧ್ಯ ಶ್ರೀಗಳು. ನ್ಯಾಯನಿಷ್ಠುರಿಗಳು. ಸಾಹಿತ್ಯ, ಸಂಗೀತ, ಧರ್ಮ, ರಂಗಭೂಮಿಯ ಮೂಲಕ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು.
ಸಮಾಜವನ್ನು ತಿದ್ದುವುದಕ್ಕೆ ತಂದೆಯ ಕಾಠಿಣ್ಯತೆ, ತಾಯಿಯ ಮಾತೃವಾತ್ಸಲ್ಯವೂ ಮುಖ್ಯ. ಅಂತಹ ಮಾತೃಹೃದಯಿಗಳು ಪಂಡಿತಾರಾಧ್ಯ ಶ್ರೀಗಳು ಎಂದರು.
ಮಹಿಮಾ ಪಟೇಲ ಮಾತನಾಡಿ ಇದು ಎಲ್ಲರ ಹೃದಯ ತಟ್ಟುವಂಥ ಕಾರ್ಯಕ್ರಮ. ಎಲ್ಲರು ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವರು. ಭವಿಷ್ಯ ಎಲ್ಲರಿಗೂ ಬೇಕು. ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ, ರಾಜಕೀಯ ಇವುಗಳ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು. ಭವಿಷ್ಯವನ್ನು ರೂಪಿಸಿಕೊಳ್ಳೋದಕ್ಕೆ ನಾವೆಲ್ಲರೂ ಸಿದ್ಧರಾಗೋಣ ಎಂದರು.
ವಚನಾನಂದ ಸ್ವಾಮಿ ಮಾತಮಾಡಿ ಒಬ್ಬೊಬ್ಬರು ಒಂದೊಂದು ಮಾರ್ಗದ ಮೂಲಕ ಯೋಗಸಾಧಕರಾದರು. ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಇಷ್ಟಲಿಂಗದ ಮೂಲಕ ಶಿವಯೋಗವನ್ನು ಬಸವಣ್ಣನವರು ಜಾರಿಗೆ ತಂದರು. ವಿಚಾರ ಮೂಢನಂಬಿಕೆಯೊಳಗೆ ಮೂಲನಂಬಿಕೆ ಕಳೆದುಕೊಳ್ಳಬಾರದು ಎಂದರು.
ದಾವಣಗೆರೆಯ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ
ಕಷ್ಟದಲ್ಲಿರುದಲ್ಲಿರುವವರಿಗೆ ಅಮೃತವನ್ನುಣಿಸಿಸವರು ಯಡಿಯೂರು ಸಿದ್ದಲಿಂಗೇಶ್ವರರು. 16ನೆಯ ಶತಮಾನದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರರನ್ನು ದ್ವಿತೀಯ ಅಲ್ಲಮ ಎಂದರು.
ವೇದಿಕೆಯ ಮೇಲೆ ಬೇಲಿಮಠದ ಶಿವರುದ್ರಸ್ವಾಮಿಗಳು, ಬೇಬಿ ಮಠದ ಶಿವಬಸವ ಸ್ವಾಮಿಗಳು, ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳು ಹಾಗೂ ನಾಡಿನ ಹರಗುರು ಚರಮೂರ್ತಿಗಳು, ಮಾಯಕೊಂಡ ಶಾಸಕ ಬಸವಂತಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜಾ ಶಿವಣ್ಣ, ಪಾಲನೇತ್ರ ಮುಂತಾದವರು ಉಪಸ್ಥಿತರಿದ್ದರು.

ಪ್ರಶಸ್ತಿಯನ್ನು ಬೆಳೆದವರಿಗೆ ಕೊಡ ಬೇಡಿ ಬೆಳೆಯುವವರಿಗೆ ಕೊಡಿ.