ಕಿರಿಯರು ಹಿರಿಯರ ಆದರ್ಶದಂತೆ ನಡೆದುಕೊಳ್ಳಲಿ: ಸಾಣೇಹಳ್ಳಿ ಸ್ವಾಮೀಜಿ

‘ಹಳೆಬೇರು-ಹೊಸ ಚಿಗುರು’  ದವಸ ಸಮರ್ಪಣೆ, ಹಿರಿಯ ಚೇತನಗಳಿಗೆ ಅಭಿನಂದನೆ, ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಮಾರಂಭ

ಸಾಣೇಹಳ್ಳಿ:

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪನವರ ಶ್ರದ್ಧಾಂಜಲಿ ಸಮಾರಂಭ ಹಾಗೂ ‘ಹಳೆಬೇರು-ಹೊಸ ಚಿಗುರು’  ದವಸ ಸಮರ್ಪಣೆ ಹಾಗೂ ಹಿರಿಯ ಚೇತನಗಳಿಗೆ ಅಭಿನಂದಿಸುವ ಸಮಾರಂಭ ನಡೆಯಿತು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು,  ಹಳೆಬೇರು ಹೊಸ ಚಿಗುರು ಕಳೆದ ನಾಲ್ಕಾರು ವರ್ಷಗಳ ಕಾಲ ನಡೆದುಕೊಂಡು ಬರುತ್ತಿದೆ. ಇದೊಂದು ವಿಶಿಷ್ಟ ಕಾರ್ಯಕ್ರಮ. ಇದರ ಜೊತೆಗೆ ಸಮಾಜಕ್ಕಾಗಿ ದುಡಿದ ಹಿರಿಯ ಚೇತನಗಳಿಗೆ ಅಭಿನಂದಿಸುವ ಕಾರ್ಯ ನಡೆಯುತ್ತಿದೆ. ಇದರ ಉದ್ದೇಶ ಕಿರಿಯರು ಹಿರಿಯರಂತೆ ಆದರ್ಶದಂತೆ ನಡೆದುಕೊಳ್ಳಬೇಕೆನ್ನುವುದು. ಆಗ ಸಮಾಜ, ಮನೆತನ ಅಭಿವೃದ್ಧಿಯಾಗಲು ಸಾಧ್ಯ.

ನಮ್ಮ ಸಮಾಜದ ಬಹುದೊಡ್ಡ ವ್ಯಕ್ತಿತ್ವ ಹೊಂದಿದವರು ಶಾಮನೂರು ಶಿವಶಂಕರಪ್ಪನವರು. ಅವರು ಶತಯುಷಿಯಾಗುವರು ಎನ್ನುವ ನಂಬಿಕೆ ಇತ್ತು. ಆದರೆ ಸಾವು ಯಾರಿಗೆ ಯಾವಾಗ ಬರುತ್ತದೋ ಎಂದು ಹೇಳಲಾಗದು. ಅವರು ಎಂದಿಗೂ ಜೀವನೋತ್ಸಾಹ ಬತ್ತಿಸಿಕೊಂಡವರಲ್ಲ. ಅವರು ಚಿರಯುವಕರಂತೆ ಕಾರ್ಯಚಟುವಟಿಕೆಯಿಂದ ಇರುತ್ತಿದ್ದರು. ಶಿವಶಂಕರಪ್ಪನವರು ಬಡಕುಟುಂಬದಲ್ಲಿ ಜನಸಿದರೂ ತಮ್ಮ ಶಿಸ್ತುಬದ್ಧ ಜೀವನ, ಪರಿಶ್ರಮದಿಂದ ದೊಡ್ಡ ವ್ಯಕ್ತಿಯಾಗಿ ಬೆಳೆದರು.

ಒಬ್ಬ ವ್ಯಕ್ತಿಗೆ ಸ್ಥಾನಮಾನ ಸಿಕ್ಕಾಗ ಸಂಸ್ಥೆಗಳನ್ನು ತುಳಿಯಬಹುದು ಇಲ್ಲವೇ ಎತ್ತರಕ್ಕೆ ಬೆಳೆಯುವಂತೆ ಮಾಡಬಹುದು. ಆದರೆ ಶಿವಶಂಕರಪ್ಪನವರು ತಮ್ಮ ಸಂಸ್ಥೆಗಳನ್ನು ಬಹು ಎತ್ತರಕ್ಕೆ ಬೆಳೆಸಿದರು. ತಮ್ಮ ಸಂಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ಕೊಡುತ್ತಿದ್ದರು. ಅವರ ಮೂಲಕ ಸುಸೂತ್ರವಾಗಿ ಕೆಲಸ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಒಳ್ಳೆಯ ಕೆಲಸಗಳಿಗೆ ದಾಸೋಹ ಪ್ರವೃತ್ತಿ ಬೆಳೆಸಿಕೊಂಡರು.

ಸಾಣೇಹಳ್ಳಿಗೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರ. ಆ ಕಾರಣಕ್ಕಾಗಿ ಸಾಣೇಹಳ್ಳಿಯಲ್ಲಿ ಎಸ್.ಎಸ್. ರಂಗಮಂದಿರಕ್ಕೆ ಅವರ ಹೆಸರನ್ನಿಡಲಾಯಿತು. ನಮ್ಮ ಶಿಷ್ಯರಿಗೆ ಆರ್ಥಿಕ ನೆರವು ಕೊಡುವುದರಲ್ಲಿ ಮುಂದು. ಬೇಡಲಾಗದು ಜಂಗಮ ಬೇಡಿಸಿಕೊಳ್ಳಲಾಗದು ಭಕ್ತ. ಈ ನೆಲೆಯಲ್ಲಿ ಮಠ ಹಾಗೂ ವಿದ್ಯಾಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು.

ಸಿರಿಗೆರೆ ಮಠ ಜಾತ್ಯತೀತ ಮಠ. ಆ ನೆಲೆಯಲ್ಲಿ ಹಿರಿಯ ಗುರು ಶ್ರೀ ಶಿವಕುಮಾರ ಸ್ವಾಮೀಜಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಉಳಿಸಿಕೊಂಡು ಹೋಗಬೇಕು. ಸಾಣೇಹಳ್ಳಿಯಲ್ಲಿ ನಾವು ಪಟ್ಟಾಧಿಕಾರವಾದಾಗ ಇಲ್ಲಿ ಯಾವ ಕಟ್ಟಡಗಳು ಇರಲಿಲ್ಲ. ಮೊದಲು ಪ್ರೌಢಶಾಲೆಯ ಕಟ್ಟಡ ಪ್ರಾರಂಭ ಮಾಡಿದ್ವಿ. ನಂತರ  ಸಾರ್ವಜನಿಕರಿಂದ ಆರ್ಥಿಕ ನೆರವು ಹರಿದು ಬರೋದಕ್ಕೆ ಶುರುವಾಯಿತು. ಆ ಕಾರಣದಿಂದ ಸಾಣೇಹಳ್ಳಿ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಅಥಣಿ ಎಸ್. ವೀರಣ್ಣ ಮಾತನಾಡಿ, ಇವತ್ತು ನಮ್ಮ ಲಿಂಗಾಯತ ಸಮಾಜಕ್ಕೆ ಬಸವಣ್ಣ ಬರದೇ ಇದ್ದಿದ್ದರೆ ಲಿಂಗಾಯತ ಎನ್ನುವ ಹೆಸರೇ ಬರುತ್ತಿರಲಿಲ್ಲ. ಶಿವಶಂಕರಪ್ಪನವರು ರಾಜಕೀಯ ಹಾಗೂ ಸಮಾಜದ ಪರ ಬಂಡೆಯಂತಿದ್ದವರು. ಮೊದಲು ಗುಮಾಸ್ತರಾಗಿ ಕೆಲಸ ಮಾಡಿದರು. ವ್ಯಾಪಾರ, ರಾಜಕೀಯ, ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ಬೆಳೆದರು.

ಮೊದಲು ಮುನ್ಸಿಪಾಲ್ಟಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದು ಇವತ್ತಿಗೂ ಜನರು ನೆನಪಿಸಿಕೊಳ್ಳುವರು. ಶಿವಶಂಕರಪ್ಪನವರು ಅನೇಕ ಕಾಲೇಜುಗಳನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣ ಕ್ರಾಂತಿ ಮಾಡಿ ದಾವಣಗೆರೆಯನ್ನು ಶಿಕ್ಷಣಕಾಶಿಯನ್ನಾಗಿ ಮಾಡಿದರು. ಕೊರೋನಾ ಕಾಲದಲ್ಲಿ  ತಮ್ಮ ಶಿಕ್ಷಣಸಂಸ್ಥೆಯಲ್ಲಿ ೧೫ ಸಾವಿರ ನೌಕರರಿಗೆ ಪೂರ್ಣ ಸಂಭಾವನೆ ಕೊಟ್ಟು ಅವರ ಜೀವನಕ್ಕೆ ಆಸರೆಯಾದರು.

ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ತಮ್ಮ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಕೊಡುತ್ತಾ ಬಂದಿದ್ದಾರೆ. ವೈರಿಗಳು ತಲೆದೂಗುವಂತೆ ಕೆಲಸ ಮಾಡಿದರು. ಅವರೊಬ್ಬ ದಾನಶೂನ ಕರ್ಣ. ದೇವರಾಜ ಅರಸು ಮತ್ತು ಶಿವಶಂಕರಪ್ಪನವರು ಬಹಳ ಆತ್ಮೀಯರಾಗಿದ್ದರು. ಹಲವಾರು ಬಾರಿ ಶಿವಶಂಕರಪ್ಪನವರ ಕೆಲಸಗಳನ್ನು ಅವರು ಮೆಚ್ಚಿದ್ದು ಉಂಟು  ಎಂದರು.

ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ. ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಸ್. ಸಿದ್ದಪ್ಪ ಮಾತನಾಡಿದರು.

ಶಿವಸಂಚಾರದ ಕಲಾವಿದರಾದ ನಾಗರಾಜ, ಶರಣ್ ಹಾಗೂ ಅಕ್ಕನ ಬಳಗದವರು ವಚನಗೀತೆ ಹಾಡಿದರು. ಎಸ್.ಆರ್. ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ದೀಪ ಸ್ವಾಗತಿಸಿ, ಸುಧಾ ಎಂ. ನಿರೂಪಿಸಿ, ವಂದಿಸಿದರು. ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಚನಗಳಿಗೆ ನೀನಲ್ಲದೇ ಮತ್ತಾರೂ ಇಲ್ಲವಯ್ಯ ನೃತ್ಯ ಪ್ರದರ್ಶಿಸಿದರು. ಸಾಣೇಹಳ್ಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ ಶಾಮನೂರು ಶಿವಶಂಕರಪ್ಪನವರ ಸಾಕ್ಷ್ಯಚಿತ್ರ ವಿಡಿಯೋವನ್ನು ತೋರಿಸಿದರು.

ಈ ಸಂದರ್ಭ ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯ ಚೇತನರಾದ ನರಸೀಪುರದ ಮಲ್ಲಪ್ಪ,  ಕಡೂರಹಳ್ಳಿಯ ಕೆ. ಟಿ. ರಾಮಪ್ಪ, ಶಿರಗಲಿಪುರದ ಈ. ಚಂದ್ರಪ್ಪ, ದೊಂಬರಹಳ್ಳಿ ಸಾಕಮ್ಮ, ವಿಠಲಾಪುರದ ಪಟೇಲ್ ಮರುಳಪ್ಪ, ಮೇಲನಹಳ್ಳಿಯ ಕೆ.ಎಂ. ಬಸವರಾಜಪ್ಪ, ಶೆಟ್ಟಿಹಳ್ಳಿಯ ಎಸ್.ಸಿ. ಶಾಮಣ್ಣ, ಅಜ್ಜಂಪುರದ ಎ. ಪರಮೇಶ್ವರಗೌಡ್ರು, ಚನ್ನಾಪುರದ ನಿಂಗಮ್ಮ, ಮುಂಡ್ರೆಯ ರೇವಣಸಿದ್ಧಪ್ಪ, ಸೊಕ್ಕೆಯ ರುದ್ರಪ್ಪ, ರಂಗೇನಹಳ್ಳಿಯ ಎಚ್‌. ವಿಶ್ವನಾಥ್, ನಂದಿಯ ನಿಂಗಪ್ಪ, ಹಳಿಯೂರಿನ ಈಶ್ವರಪ್ಪ, ರಂಗಾಪುರದ ಬಸವರಾಜಪ್ಪ, ಕೊರಟಿಕೆರೆಯ ಕೆ.ಎಸ್. ನಾಗಪ್ಪ, ಕಡ್ಲಪ್ಪನಹಟ್ಟಿಯ ಎ. ಬಿ. ರುದ್ರಪ್ಪ, ಗೌಡಿಹಳ್ಳಿಯ ಎಸ್.ಎನ್. ಓಂಕಾರಪ್ಪ, ಹರಳಹಳ್ಳಿಯ ಈಶ್ವರಪ್ಪ, ಚೌಳಹಿರಿಯೂರಿನ ನಿಂಗಪ್ಪ, ಹನುವನಹಳ್ಳಿಯ ಸಿದ್ಧರಾಮಪ್ಪ, ಶಿವನಿಯ ಸಿದ್ಧರಾಮಯ್ಯ, ತರೀಕೆರೆಯ ಶಂಕರಲಿಂಗಪ್ಪ, ಸಾಣೇಹಳ್ಳಿಯ ಎಸ್. ಬಿ. ಪರಮೇಶ್ವರಪ್ಪ, ತಾವರಕೆರೆಯ ಟಿ.ಎಂ. ಮಲ್ಲೇಶಪ್ಪ ಅವರನ್ನು ಅಭಿನಂದಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *