ಪ್ರತಿ ವರ್ಷ ಫೆಬ್ರುವರಿ ಎರಡನೇ ಭಾನುವಾರ ರಾಷ್ಟ್ರೀಯ ಅಧಿವೇಶನ
ಕೂಡಲಸಂಗಮ:
ಈ ವರ್ಷ ರಾಜ್ಯದ ೧೨ ಜಿಲ್ಲೆಗಳಲ್ಲಿ ‘ನಾನು ಲಿಂಗಾಯತ’ ಅಭಿಯಾನ ಮಾಡುವ ಮೂಲಕ ಲಿಂಗಾಯತ ಧರ್ಮ ಸಂಘಟನೆ, ಜಾಗೃತಿ ಮಾಡಲಾಗುವುದು ಎಂದು ರಾಷ್ಟೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಮೌಳಿ ಲಿಂಗಾಯತ ಹೇಳಿದರು.
ಸೋಮವಾರ ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣ ಮೇಳದ ಮೊದಲ ದಿನದ ರಾಷ್ಟ್ರೀಯ ಬಸವ ದಳದ ೩೫ನೇ ಅಧಿವೇಶನ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣ ಚಿಂತನ ಗೋಷ್ಠಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಭಿಯಾನದಲ್ಲಿ ರಾಷ್ಟ್ರೀಯ ಬಸವ ದಳ ಸಂಘಟನೆಯ ಕುರಿತು ಚರ್ಚಿಸಲಾಗುವುದು. ಕಳೆದ ವರ್ಷ ೬ ಜಿಲ್ಲೆಯಲ್ಲಿ ರಾಷ್ಟ್ರೀಯ ಬಸವ ದಳದ ಅಭಿಯಾನ ಯಶಸ್ವಿಯಾಗಿ ಮಾಡಲಾಗಿದೆ. ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ.ವಿ. ವೀರೇಶ ಮಾತನಾಡಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧಿವೇಶನವನ್ನು ಪ್ರತಿವರ್ಷ ಫೆಬ್ರುವರಿ ತಿಂಗಳು ಎರಡನೇ ಭಾನುವಾರ ಹಮ್ಮಿಕೊಳ್ಳಲಾಗುವುದು. ಈ ವರ್ಷದ ಅಧಿವೇಶನವನ್ನು ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ಫೆಬ್ರವರಿ ೮ ರಂದು ಹಮ್ಮಿಕೊಳ್ಳಲಾಗಿದೆ. ಎಲ್ಲ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಬರಬೇಕು.
ಈ ಅಧಿವೇಶನದಲ್ಲಿ ರಾಷ್ಟ್ರೀಯ ಬಸವ ದಳದ ಸಂಘಟನೆ, ಲಿಂಗಾಯತ ಧರ್ಮಕ್ಕೆ ತೊಂದರೆ ಕೊಡುತ್ತಿರುವ ವೀರಶೈವ, ಹಿಂದೂ ಪದಗಳ ಕುರಿತು ಚರ್ಚಿಸಲಾಗುವುದು.
ನಾವು ಅರಮನೆಯ ಮಕ್ಕಳಲ್ಲ, ಗುರು ಮನೆಯ ಮಕ್ಕಳು ಎಂದು ಕಾರ್ಯ ಮಾಡುವ ಅಗತ್ಯ ಇದೆ. ಲಿಂಗಾಯತ ಧರ್ಮಕ್ಕೆ ಅಗತ್ಯವಾದ ಎಲ್ಲ ಸಾಹಿತ್ಯವನ್ನು ಮಾತೆ ಮಹಾದೇವಿಯವರು ನೀಡಿದ್ದಾರೆ, ಅಧ್ಯಯನ ಮಾಡುವ ಪ್ರವೃತ್ತಿ ಭಕ್ತರು ಬೆಳೆಸಿಕೊಳ್ಳಬೇಕು ಎಂದರು.
ಬೀದರ ಬಸವಗಿರಿಯ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಅವಗುಣಗಳನ್ನು ತೆಗೆದಾಗ ಸದ್ಗುಣಗಳು ಬರಲು ಸಾಧ್ಯ. ಶರಣ ಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು ಸದ್ಗುಣ ಮೂಡಿಸುತ್ತಿವೆ.
ಇಂದು ಧಾರ್ಮಿಕ ಸಂಸ್ಥೆಗಳಿಗೆ ತತ್ವನಿಷ್ಠರ ಅಗತ್ಯ ಇದೆ. ತಾತ್ವಿಕ ಚರಿತ್ರೆ ಹೊಂದಿದ ಲಿಂಗಾಯತ ಧರ್ಮಕ್ಕೆ ಸಾಮಾಜಿಕ ಮಾನ್ಯತೆ ಅಗತ್ಯ ಇದೆ. ವಚನ ಸಾಹಿತ್ಯ, ಪ್ರವಚನದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.
ರಬಕವಿ, ಬನಹಟ್ಟಿ ಬ್ರಹ್ಮಾನಂದ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಇಂದಿನ ಯುವಕರು ನಮ್ಮ ಸಂಸ್ಕೃತಿಯನ್ನು ಉಡುಗೆ, ತೊಡುಗೆ, ಆಚಾರ-ವಿಚಾರಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ.
ಜಾಗತೀಕರಣ, ಆಧುನಿಕ ತಂತ್ರಜ್ಞಾನದಿಂದ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಚೌಕಟ್ಟು ಸಡಿಲಗೊಳ್ಳುತ್ತಿದೆ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ತ್ಯಾಗ, ಸಂಕಲ್ಪ ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಿದೆ ಎಂದರು.
ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ೩೫ ವರ್ಷದ ಹಿಂದೆ ಆರಂಭವಾದ ರಾಷ್ಟ್ರೀಯ ಬಸವ ದಳ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದೆ. ಕಾರ್ಯ ನಿಷ್ಠೆಯಲ್ಲಿ ಎಂದು ಹಿಂದೆಬಿದ್ದಿಲ್ಲ. ದೇಶದ ೧೦ ರಾಜ್ಯಗಳಲ್ಲಿ ಸಂಘಟನೆಯನ್ನು ಹೊಂದಿದ್ದು, ಇನ್ನಷ್ಟು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದೆ ಎಂದರು.

ಸಮಾರಂಭದಲ್ಲಿ ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿ ಅಕ್ಕನಾಗಲಾಂಬಿಕಾ ಪೀಠದ ಮಾತೆ ದಾನೇಶ್ವರಿ, ಬೆಂಗಳೂರು ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ತೆಲಂಗಾಣ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಶಂಕರೆಪ್ಪ ಪಾಟೀಲ, ರಾಷ್ಟ್ರೀಯ ಬಸವ ದಳ ರಾಜ್ಯ ಗೌರವಾಧ್ಯಕ್ಷ ಬಸವರಾಜ ಕೊಂಡಗೋಳಿ, ಮುಖಂಡರಾದ ಹುಬ್ಬಳ್ಲಿಯ ಎಸ್.ಬಿ. ಜೋಡಳ್ಳಿ, ಬೀದರನ ಸೋಮಶೇಖರ ಪಾಟೀಲ ಗಾದಗೆ, ಕೊಪ್ಪಳದ ವೀರಣ್ಣ ಲಿಂಗಾಯತ, ಬಳ್ಳಾರಿಯ ಕೆ.ವಿ. ರವಿಶಂಕರ ಮುಂತಾದವರು ಇದ್ದರು.
ಸಮಾರಂಭದಲ್ಲಿ ಮೈಸೂರದ ನಾಗಮ್ಮ ಷಡಕ್ಷರಿ ಅವರಿಗೆ ಶರಣ ದಾಸೋಹ ರತ್ನ, ಕೂಡಲಸಂಗಮದ ಗಂಗಣ್ಣ ಬಾಗೇವಾಡಿ ಅವರಿಗೆ ಶರಣ ಸೇವಾ ರತ್ನ, ಹುನಗುಂದದ ರಾಚಪ್ಪ ರಾಜಮನಿ ಅವರಿಗೆ ಶರಣ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
೩೯ನೇ ಶರಣ ಮೇಳದ ರಾಷ್ಟ್ರೀಯ ಬಸವ ದಳದ ೩೫ನೇ ಅಧಿವೇಶನ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಚಿಂತನ ಗೋಷ್ಠಿ ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ಬಸವ ಗಂಗೋತ್ರಿ ಅನಾಥಾಲಯದ ಮಕ್ಕಳು ಮಾಡಿದರು.

ಬಸವ ಸೇವೆ ಅಜರಾಮರ ಧನ್ಯವಾದಗಳು 💐🙏🏻🙏🏻